ಶಿಕ್ಷಣ, ಶಾಲೆ,ಅಭಿವೃದ್ಧಿ, ಮಾನವ ವಿಕಸತೆ, ತಂತ್ರಜ್ಞಾನ ವಿಚಾರಗಳ ಕುರಿತು ಚರ್ಚೆಯಾದರೆ ದೇಶ ಪ್ರಗತಿಯಾಗಲು ಸಾಧ್ಯ

ಕಾರಟಗಿ: ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಸ್ವಾತಂತ್ರ್ಯವಿಲ್ಲದೇ ಅಸಂಖ್ಯಾತ ಸಮುದಾಯಗಳ ಜನತೆ ಸಮಾನ, ಗೌರವಯುತ ಬದುಕು, ಅಧಿಕಾರ, ಅವಕಾಶಗಳಿಂದ ವಂಚಿತವಾಗಿದ್ದವು. ಆದರೆ, ರಾಷ್ಟ್ರದ ಕೋಟ್ಯಂತರ ಜನರಿಗೆ ಘನತೆಯ ಬದುಕು ಕಟ್ಟಿಕೊಳ್ಳುವ ಸಮಾನ ಅವಕಾಶ ಸಿಕ್ಕಿದ್ದು ಮಹಾನ ನಾಯಕ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಪ್ರಮುಖ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಸಿದ್ಧೇಶ್ವರ ರಂಗಮಂದಿರದಲ್ಲಿ ತಾಲೂಕಾಡಳಿತದಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ, ಶಾಲೆ,ಅಭಿವೃದ್ಧಿ, ಮಾನವ ವಿಕಸತೆ, ತಂತ್ರಜ್ಞಾನ ವಿಚಾರಗಳ ಕುರಿತು ಚರ್ಚೆಯಾದರೆ ದೇಶ ಪ್ರಗತಿಯಾಗಲು ಸಾಧ್ಯ. ಆದರೆ,ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಧರ್ಮ, ದೇವರು, ದೇವಸ್ಥಾನ, ಜಾತಿ ವಿಚಾರಗಳೇ ಚರ್ಚೆಯಾಗುತ್ತಿರುವುದು ವಿಷಾದನೀಯ. ಸ್ವತಂತ್ರ ದೊರೆತ ಕಾಲದಲ್ಲಿ ದೇಶದಲ್ಲಿ ಅಭಿವೃದ್ಧಿ ವಿರಳವಾಗಿತ್ತು.ಆದರೆ, ಈಗ ಸಾಕಷ್ಟು ಪ್ರಗತಿ ಕಾಣುತ್ತಿದ್ದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದಿಂದ ಸಾಧ್ಯವಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಈ ಬಾರಿ ಪ್ರಾತಿನಿಧ್ಯದ ಸೌಲಭ್ಯವಿದ್ದು, ಸ್ಥಳೀಯ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸಾಧ್ಯವಾಗಲಿದೆ. ಸಂವಿಧಾನದ ಆಶಯ, ರಚಿಸಿದವರ ಪರಿಶ್ರಮದ ಕುರಿತು ಯುವಜನತೆಯಲ್ಲಿ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಉಪನ್ಯಾಸಕರು ಪ್ರತಿ ವಾರ ವಿಶೇಷ ಕಾರ್ಯಾಗಾರ, ವಿಚಾರ ಗೋಷ್ಠಿ ಆಯೋಜಿಸುವ ಮೂಲಕ ಬಾಬಾಸಾಹೇಬ್ ಅವರ ವಿಚಾರ, ಸಂವಿಧಾನದ ಆಶಯ ತಲುಪಿಸುವ ಕೆಲಸ ಮಾಡಬೇಕು ಎಂದರು.

ತಹಸೀಲ್ದಾರ್ ಎಂ.ಕುಮಾರಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಸಂವಿಧಾನದಲ್ಲಿರುವ ನ್ಯಾಯ,ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದಂತಹ ಮೂಲಭೂತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಸಂವಿಧಾನದ ದಿನದ ಆಶಯವಾಗಿದೆ. ಜತೆಗೆ ನಾಗರಿಕರಿಗೆ ಮೂಲಭೂತ ಹಕ್ಕು, ಕರ್ತವ್ಯಗಳ ಬಗ್ಗೆ ನೆನಪಿಸುವುದು. ಮತ್ತೊಂದು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷ ಡಾ.ಬಿ.ಆರ್.ಅಂಬೇಡ್ಕರ್ ಅಪ್ರತಿಮ ಕೊಡುಗೆ ಸ್ಮರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ತಾಪಂ ಇಒ ಲಕ್ಷ್ಮೀದೇವಿ ಸಂವಿಧಾನ ಪೀಠಿಕೆ ಬೋಧಿಸಿದರು. ಉಪನ್ಯಾಸಕ ಚಂದ್ರಶೇಖರ ವಲ್ಕಂದಿನ್ನಿ ವಿಶೇಷ ಉಪನ್ಯಾಸ ನೀಡಿದರು.

ಈ ಹಿಂದೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಚಿವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯ ಹಿರೇಬಸಪ್ಪ ಸಜ್ಜನ್, ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಉಪ ಪ್ರಾಚಾರ್ಯ ಶರಣಪ್ಪ ಸೋಮಲಾಪುರ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸೋಮನಾಥ ದೊಡ್ಡಮನಿ, ಮಲ್ಲಿಕಾರ್ಜುನ ತೊಂಡಿಹಾಳ, ಮರಿಯಪ್ಪ ಸಾಲೋಣಿ, ಯಲ್ಲಪ್ಪ ಕಟ್ಟಿಮನಿ, ಲಕ್ಷ್ಮಣ್, ಖಾಜಾಹುಸೇನ್ ಮುಲ್ಲಾ, ಸಿ.ಕೆ ಮರಿಸ್ವಾಮಿ, ಹನುಮೇಶ್ ಮ್ಯಾಗಡಮನಿ, ಅಜ್ಮೀರ್ ಸಿಂಗನಾಳ, ಹುಲಿರಾಜ್ ತೊಂಡಿಹಾಳ, ಬಸವರಾಜ ಬಸವಣ್ಣ ಕ್ಯಾಂಪ್ ಸೇರಿದಂತೆ ಇತರರಿದ್ದರು.

ಬಿಇಒ ನಟೇಶ್, ಮಂಜುನಾಥ್ ಚಿಕೇನಕೊಪ್ಪ, ಹುಲುಗಪ್ಪ, ತಿಮ್ಮಣ್ಣ ನಾಯಕ, ಗಂಗಪ್ಪ ಮತ್ತು ಶಿವಶಂಕರ್ ಕಾರ್ಯಕ್ರಮ ನಿರ್ವಹಿಸಿದರು.