ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಸಮೂಹ ಜೀವನದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವುದೇ ಧರ್ಮ. ಅಂತಹ ಜೀವನ ಧರ್ಮದಿಂದ ಮಾತ್ರ ಸಭ್ಯ ಹಾಗೂ ಸಹನೆಯ ಸಮಾಜ ನಿರ್ಮಾಣ ಸಾಧ್ಯ ಎಂದು ದಾವಣಗೆರೆಯ ಇಬ್ರಾಹಿಂ ಶಾದಿಕ್ ಹೇಳಿದರು.ತಾಲೂಕಿನ ಅಗಡಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿರುವ ಜೀವನ ದರ್ಶನ ಪ್ರವಚನ ಹಾಗೂ ತ್ರಿವಿಧ ದಾಸೋಹಿ ಲಿಂ. ಡಾ. ಶಿವಕುಮಾರ ಸ್ವಾಮೀಜಿ ೧೧೭ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ನಾವೆಲ್ಲರೂ ಇದೇ ನೆಲದಲ್ಲಿ ಹುಟ್ಟಿ ಬೆಳೆದಿದ್ದೇವೆ. ನಾವು ಮಾನವ ಜಾತಿ, ಭಾರತಾಂಬೆಯ ಪುತ್ರರು ಎನ್ನೋಣ, ಜಾತಿ ಧರ್ಮಗಳ ಹೆಸರಿನಲ್ಲಿ ಜಗಳವಾಡುವುದು ಬೇಡ ಎಂದು ಹೇಳಿದರು.ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಅಗಡಿ ಗ್ರಾಮ ಐತಿಹಾಸಿಕ ಹಾಗೂ ಧಾರ್ಮಿಕ ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿದ್ದು, ಈ ಭಾವೈಕ್ಯತೆಯ ಕಾರ್ಯಕ್ರಮ ಅನುಕರಣೀಯ ಎಂದರು.ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು ಮಾತನಾಡಿ, ದೇವರು, ಧರ್ಮದ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ನಮ್ಮ ಪರಂಪರೆಯ ದೇವಾಲಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ಅನ್ನದಾತರಿಗೆ ವಧುಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೆಸೆಯಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಲಿಂ. ಶಿವಕುಮಾರ ಸ್ವಾಮೀಜಿ ಈ ಶತಮಾನದ ಸಂತರು. ಅನ್ನ, ಅರಿವು, ಅಕ್ಷರ ನೀಡಿದ ತ್ರಿವಿಧ ದಾಸೋಹಿಗಳು. ಅವರ ಆದರ್ಶ ನಮಗೆಲ್ಲ ದಾರಿ ದೀಪ ಎಂದರು.ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ರೈತನೊಬ್ಬ ಕೃಷಿ ಬಿಟ್ಟು ಹಿಂದೆ ಸರಿದರೆ ಆತಂಕ ಪಡಬೇಕು. ಕ್ರಿಕೆಟ್ ಆಟಗಾರನೊಬ್ಬ ವಿದಾಯ ನೀಡಿದಾಗ ಅಲ್ಲ. ಆಹಾರ ಜೀವನದ ಅವಿಭಾಜ್ಯ ಅಂಗ, ದೇವರು ಮನುಷ್ಯನನ್ನು ಸೃಷ್ಟಿಸಿದರೆ, ರೈತ ಮನುಷ್ಯನನ್ನು ಜೀವಂತವಾಗಿರಿಸುತ್ತಾನೆ. ಜಗತ್ತು ಎಷ್ಟೇ ತಂತ್ರಜ್ಞಾನ ಹೊಂದಿದರು ಅನ್ನವನ್ನು ಆನ್‌ಲೈನ್‌ನಲ್ಲಿ ಬೆಳೆಯಲು ಸಾಧ್ಯವಿಲ್ಲ. ರೈತರ ಬೆವರಿನಿಂದ ಮಾತ್ರ ಸಾಧ್ಯ ಎಂದರು.
ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ, ಶರಣೆ ಜಯಶ್ರೀದೇವಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮಕ್ಕ ಹೊಂಬರಡಿ ಪಾಲ್ಗೊಂಡಿದ್ದರು.ಅಂಜುಮನ್ ಇಸ್ಲಾಂ ಕಮಿಟಿಯವರು ಪೂಜ್ಯರನ್ನು ಸನ್ಮಾನಿಸಿಸಿದರು. ವೀರಭದ್ರಪ್ಪ ದೊಂಬರಮತ್ತೂರ ಸ್ವಾಗತಿಸಿದರು. ನ್ಯಾಯವಾದಿ ಮಹಾಂತೇಶ ಮೂಲಿಮನಿ ನಿರೂಪಿಸಿದರು. ಬಸವರಾಜ ಕಡ್ಲಿ ವಂದಿಸಿದರು.