ಸಾರಾಂಶ
ಶಿರಸಿ:
ಧರ್ಮ ಬದಿಗಿಟ್ಟು, ಮನುಷ್ಯತ್ವ ಕಲಿಸುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಉತ್ತಮ ಶಿಕ್ಷಣ ನೀಡುವುದೇ ದೇವರ ಕೆಲಸವಾದರೆ ಉತ್ತಮ ಸಮಾಜ, ದೇಶ ನಿರ್ಮಿಸಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ನಗರದ ಶಿವಾಜಿ ಚೌಕ್‌ದಲ್ಲಿ ಉರ್ದು ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಕರ್ತವ್ಯಕ್ಕೆ ಅವಕಾಶ ಸಿಕ್ಕಾಗ ಉತ್ತಮ ಕಾರ್ಯ ನಿರ್ವಹಿಸಬೇಕು. ಶಿಕ್ಷಣ ಇಲಾಖೆಯಲ್ಲಿಯೂ ಸಹ ಸಾಕಷ್ಟು ಸಮಸ್ಯೆ ಇದೆ. ಒಂದೊಂದೇ ಸಮಸ್ಯೆಗಳನ್ನು ಪರಿಹಾರ ಮಾಡುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಅತ್ಯುತ್ತಮ ಶಿಕ್ಷಣ ಒದಗಿಸಲಾಗುವುದು ಎಂದರು.ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಇಂದು ಪ್ರಗತಿಯಲ್ಲಿದೆ. ಇದರ ಪರಿಣಾಮವಾಗಿ ಮುಸ್ಲಿಂ ಮಕ್ಕಳೂ ಸಹ ನಿರರ್ಗಳವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತನಾಡುತ್ತಿದ್ದಾರೆ ಎಂದ ಅವರು, ಮುಸ್ಲಿಂ ಸಮಾಜ ಇದುವರೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರಲಿಲ್ಲ. ಈಗ ಈ ಮಕ್ಕಳೂ ಶಿಕ್ಷಣ ಕಲಿತು ಸಮಾಜದ ಮೇಲ್ದರ್ಜೆಗೆ ಬಂರುತ್ತಿರುವುದು ಸಂತಸ. ಶಾಲೆಯಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಶಿಕ್ಷಣ ಪಡೆಯಬಾರದು. ರಾಜ್ಯದ ಶಾಲೆಗಳಲ್ಲಿ 1.20 ಕೋಟಿ ಮಕ್ಕಳು ಪಾಠ ಕೇಳುತ್ತಿದ್ದು, ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಿಕೊಡುವುದು ಇಲಾಖೆಯಾಗಿ ನಮ್ಮ ಕರ್ತವ್ಯ. ಕಲಿಯುವ ಮಕ್ಕಳ ಕೈಲಿ ಪೆನ್ನಿರಬೇಕೇ ಹೊರತೂ ಕಸಬರಿಗೆಯಲ್ಲ. ಇದೇ ವೇಳೆ ಮಕ್ಕಳ ಸುರಕ್ಷತೆಯೂ ಅತ್ಯಗತ್ಯವಾಗಿದ್ದು ಕಾಂಪೌಂಡ್ ಇಲ್ಲದ ಶಾಲೆಗಳನ್ನು ಗುರುತಿಸಿ ಕಾಂಪೌಂಡ್ ನಿರ್ಮಿಸಲು ಸೂಚಿಸಿದ್ದೇನೆ ಎಂದು ಹೇಳಿದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಸೌಲಭ್ಯ ನೀಡಿದೆ. ಮಕ್ಕಳಲ್ಲಿ ಯಾವುದೇ ತಾರತಮ್ಯ ಇಲ್ಲದೇ ಶಿಕ್ಷಣ ಕಲಿಯುವ ವಾತಾವರಣ ಸೃಷ್ಟಿಯಾಗುತ್ತಿದೆ. ಪೌಷ್ಟಿಕ ಆಹಾರ, ಉತ್ತಮ ಶಿಕ್ಷಣ ನೀಡಿದರೆ ನಮ್ಮ ಹಿರಿಯರು ಕಂಡ ಕನಸು ಸಾಕಾರವಾಗುತ್ತದೆ ಎಂದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣನವರ, ಸದಸ್ಯ ದಯಾನಂದ, ಖಾದರ ಆನವಟ್ಟಿ, ಎಸ್.ಕೆ. ಭಾಗ್ವತ್, ಇಕ್ಬಾಲ್ ಬಿಳಗಿ ಇತರರಿದ್ದರು. ಡಿಡಿಪಿಐ ಪಿ ಬಸವರಾಜು ಪ್ರಾಸ್ತಾವಿಕ ಮಾತನಾಡಿದರು.