ಕನ್ನಡಪ್ರಭವಾರ್ತೆ ತಿಪಟೂರು

ನಗರದ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಗುರುಪೂರ್ಣಿಮೆ ಅಂಗವಾಗಿ ಮಕ್ಕಳ ತಂದೆ ತಾಯಿಯರಿಗೆ ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿರಿಯ ಚಿತ್ರನಟ ರಮೇಶ್ ಭಟ್ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ದೇಶದ ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿ ವಿದ್ಯಾರ್ಥಿಗಳ ಮೊದಲ ಶಿಕ್ಷಣದಿಂದಲೇ ಶಾಲೆಗಳಿಂದ ಪ್ರಾರಂಭವಾಗಬೇಕು. ಇಂದಿನ ಮಕ್ಕಳೇ ದೇಶದ ಆಸ್ತಿ ಹಾಗೂ ಅಭಿವೃದ್ದಿ ವೀರರು. ಮಕ್ಕಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಅರಿವು ಮುಖ್ಯ. ಎಳೆ ವಯಸ್ಸಿನಲ್ಲಿ ಅವರಿಗೆ ನಾವು ಏನು ಹೇಗೆ ಬಿತ್ತುತ್ತೇವೋ ಹಾಗೆ ಅವರು ಬೆಲೆಯುತ್ತಾರೆ. ಇತ್ತೀಚೆಗೆ ವಿದೇಶಿ ಸಂಸ್ಕೃತಿಗೆ ನಮ್ಮ ಮಕ್ಕಳು ಮಾರು ಹೋಗಿ ಭವಿಷ್ಯವನ್ನು ಕವಲುದಾರಿಯಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಹೆತ್ತವರು, ಗುರು-ಹಿರಿಯರು ಎಂದರೆ ಈಗಿನ ಯುಪೀಳಿಗೆಗೆ ಒಂದು ರೀತಿಯ ತಾತ್ಸಾರ ಉಂಟಾಗಿದ್ದು ಇದನ್ನು ಹೋಗಲಾಡಿಸಲು ಅರಿವಿನ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳು ಎಲ್ಲಾ ಶಾಲೆಗಳಲ್ಲಿಯೊ ನಡೆಯಬೇಕು ಎಂದು ಮಕ್ಕಳಿಗೆ ಹಿತವಚನ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ಟಿ. ಆರ್. ಕೇಶವಕುಮಾರ್ ನಟ ರಮೇಶ್ ಭಟ್ ರವರನ್ನು ಸನ್ಮಾನಿಸಿ ಮಾತನಾಡಿ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು, ಸಂಸ್ಕಾರ, ನಡೆನುಡಿ, ದೇಶಭಕ್ತಿ, ಪರಿಸರ ಪ್ರಜ್ಞೆ ಜೊತೆ ವಿದ್ಯೆಯಲ್ಲಿ ಸಾಧನೆ ಮಾಡಿಸುತ್ತೇವೆ. ಮಕ್ಕಳು ಶಿಕ್ಷಕರು ಹಾಗೂ ಪೋಷಕರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಹೆಚ್ಚಿನ ಒತ್ತು ನೀಡಿ ಕಲಿಸುತ್ತೇವೆ. ಪ್ರತೀವರ್ಷ ಈ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದೆ ವೇಳೆ ಕಿರುತೆರೆ ನಟ ದಯಾನಂದ್ ಸಾಗರ್, ಪ್ರಾಂಶುಪಾಲ ಗಣೇಶ್ ಜಿ.ಎಸ್, ಶಿಕ್ಷಕ ವೃಂದ ಆಡಳಿತ ವರ್ಗ ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.