ಕನ್ನಡಪ್ರಭ ವಾರ್ತೆ ಹೊಸದುರ್ಗ
ಧರ್ಮ, ಸಂಸ್ಕೃತಿ ಮತ್ತು ಧಾರ್ಮಿಕ ಕೇಂದ್ರಗಳು ಸಮಸ್ತ ಜನರ ಕಲ್ಯಾಣಕ್ಕೆ ದಾರಿದೀಪವಾಗುವ ಶ್ರದ್ಧಾ ಕೇಂದ್ರಗಳಾಗಬೇಕು ಎಂದು ಹುಣಸಘಟ್ಟದ ಹಾಲಸ್ವಾಮಿ ಹಣ್ಣೆ ಹಿರೆಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ರಂಗೈನೂರು ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇವರ ಹೆಸರಿನಲ್ಲಿ ನಡೆಯುವ ಜಾತ್ರೆ, ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮಗಳ ಅಭಿವೃದ್ಧಿಗೆ ಕಾರಣವಾಗಬೇಕು. ಇಂತಹ ಕಾರ್ಯಗಳನ್ನು ಪ್ರತಿಯೊಬ್ಬರೂ ಏಕತೆಯಿಂದ ನಿರ್ವಹಿಸಿದಾಗ ಮಾತ್ರ ಧರ್ಮ-ಸಂಸ್ಕೃತಿ ಶಾಶ್ವತವಾಗಿ ಉಳಿಯುತ್ತವೆ. ಗ್ರಾಮಗಳ ಹಿರಿಯರು ಯುವ ಪೀಳಿಗೆಯೊಂದಿಗೆ ಕೈಜೋಡಿಸಿ ಇಂತಹ ಕಾರ್ಯಗಳನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದರು.ನಿವೃತ್ತ ಎಡಿಜಿಪಿ ಸಿದ್ರಾಮಪ್ಪ ಮಾತನಾಡಿ, ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಧರ್ಮ-ಸಂಸ್ಕೃತಿ ಕ್ಷೀಣಿಸುತ್ತಿರುವುದು ಆತಂಕಕಾರಿ ವಿಷಯ. ಕುಟುಂಬದ ಹಿರಿಯರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಹೇಳಿದರು.
ಹುಣಸಘಟ್ಟ ಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ನಂದಿಪುರ ಉಜ್ಜಯಿನಿ ಶಾಖ ಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಂ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಿ.ಎಸ್. ಸುರೇಶ್, ಮಾಜಿ ಜಿಪಂ ಉಪಾಧ್ಯಕ್ಷ ಅನಂದಪ್ಪ, ಮಾಜಿ ಜಿಪಂ ಸದಸ್ಯ ಹನುಮಂತಪ್ಪ, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ, ಕಡ್ಲಪ್ಪನಹಟ್ಟಿ ರಮೇಶ್, ಉದ್ಯಮಿ ರಾಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.