ದೈವದೇವರ ನಂಬಿಕೆ ಗಟ್ಟಿಯಾಗಲು ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯಾಗಬೇಕು: ಸುಬ್ರಹ್ಮಣ್ಯ ಶ್ರೀ

| Published : Jan 19 2025, 02:16 AM IST

ದೈವದೇವರ ನಂಬಿಕೆ ಗಟ್ಟಿಯಾಗಲು ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯಾಗಬೇಕು: ಸುಬ್ರಹ್ಮಣ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಗುಲ್ವಾಡಿ ಗ್ರಾಮದ ಹಾಡಿದೈವದ ಮನೆಯ ಶ್ರೀ ನಂದಿಕೇಶ್ವರ, ಚಿಕ್ಕಮ್ಮ, ಹೈಗುಳಿ, ಸಪರಿವಾರ ದೈವಗಳಿಗೆ ಅಷ್ಟೋತ್ತರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ನೂತನ ಶಿಲಾಮಯ ದೈವಸ್ಥಾನದ ಉದ್ಘಾಟನೆ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ದೈವದೇವರ ಭಯ ಸನ್ಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುತ್ತದೆ. ಯಾರಿಗೂ ಕಾಣಿಸದಿರುವ ಹಾಗೆ ಅಪರಾಧಗಳನ್ನು ಮಾಡಿದರೂ, ದೈವದೇವರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂಬ ಸತ್ಯ ಅರಿತಾಗ ಮಾನವ ನ್ಯಾಯ, ಧರ್ಮದ ದಾರಿಯಲ್ಲಿ ನಡೆಯುತ್ತಾನೆ. ನಮ್ಮ ಭಕ್ತಿ, ಶ್ರದ್ಧೆ, ನಂಬಿಕೆಗಳು ಗಟ್ಟಿಯಾಗಿ ಬೆಳೆಯಬೇಕಾದರೆ ಆ ಶ್ರದ್ಧಾ ಕೇಂದ್ರಗಳು ಅಭಿವೃದ್ಧಿ ಹೊಂದಿರಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು ಹೇಳಿದರು.ಅವರು ಬುಧವಾರ ಇಲ್ಲಿನ ಗುಲ್ವಾಡಿ ಗ್ರಾಮದ ಹಾಡಿದೈವದ ಮನೆಯ ಶ್ರೀ ನಂದಿಕೇಶ್ವರ, ಚಿಕ್ಕಮ್ಮ, ಹೈಗುಳಿ, ಸಪರಿವಾರ ದೈವಗಳಿಗೆ ಅಷ್ಟೋತ್ತರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ನೂತನ ಶಿಲಾಮಯ ದೈವಸ್ಥಾನದ ಉದ್ಘಾಟನೆ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ನಮ್ಮ ಹಿರಿಯರು ಕಲ್ಲು, ಮರದ ತುಂಡುಗಳನ್ನೇ ದೈವ, ದೇವರೆಂದು ಪೂಜಿಸಿದ್ದರು. ಆದರೆ ಇಂದಿನ ಯುವ ಜನಾಂಗ ಇಂತಹ ಆಚರಣೆಗಳನ್ನು ಪ್ರಶ್ನೆ ಮಾಡದೆ ಇರದು. ಹೀಗಾಗಿ ದೈವ, ದೇವರ ಆರಾಧನಾ ಸ್ಥಳಗಳನ್ನು ಕಾಲಕ್ಕೆ ತಕ್ಕಂತೆ ಜೀರ್ಣೋದ್ಧಾರ ಮಾಡಿಕೊಂಡು ಆರಾಧಿಸಿಕೊಂಡು ಹೊರಟಾಗ ಮಾತ್ರ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ನಮ್ಮ ಶೃದ್ಧೆ ಆಚರಣೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಬಾಲ್ಯದಲ್ಲಿ ತಂದೆ ತಾಯಿ ಜೊತೆಗೆ ಈ ಹಾಡಿಮನೆ ದೇವಳಕ್ಕೆ ಬಂದು ಆರಾಧಿಸುತ್ತಿದ್ದೆವು. ಜೀರ್ಣಾವಸ್ಥೆಯಲ್ಲಿದ್ದ ಇಲ್ಲಿನ ಗುಡಿಗಳೆಲ್ಲಾ ಜೀರ್ಣೋದ್ಧಾರಗೊಂಡು ಪರಿಪೂರ್ಣತೆ ಪಡೆದಿವೆ. ದೈವದೇವರ ಸಾನಿಧ್ಯ ವೃದ್ಧಿಯಾಗಿದೆ. ಈ ಮೂಲಕ ಜನರನ್ನು ಒಗ್ಗೂಡಿಸುವ ಕಾರ್ಯವೂ ನಡೆದಿದೆ. ದೈವ-ದೇವರು ಜೊತೆಯಾಗಿ ಆರಾಧಿಸಲ್ಪಡುತ್ತಿರುವ ಪುಣ್ಯ ಕ್ಷೇತ್ರವಿದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಲ್ವಾಡಿ ದೊಡ್ಮನೆಯ ನಾಗರಾಜ ಶೆಟ್ಟಿ ವಹಿಸಿದ್ದರು. ವಿದ್ವಾನ್ ಮಾಧವ ಅಡಿಗ ಬಳ್ಕೂರು ಧಾರ್ಮಿಕ ಪ್ರವಚನ ನೀಡಿದರು.ಈ ಸಂದರ್ಭದಲ್ಲಿ ಅರೆಕಲ್ಲು ಮಠದ ನರಸಿಂಹಮೂರ್ತಿ ಉಪಾಧ್ಯಾಯ, ಗುಲ್ವಾಡಿ ದೊಡ್ಮನೆಯ ಸುಧಾಕರ ಶೆಟ್ಟಿ, ಭಾಸ್ಕರ ಶೆಟ್ಟಿ, ಜಿ.ರವೀಂದ್ರನಾಥ ಶೆಟ್ಟಿ, ಹಟ್ಟಿಯಂಗಡಿ ಲೋಕನಾಥೇಶ್ವರ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಬ್ಲಾಡಿ ಪಟೇಲರ ಮನೆಯ ಕರುಣಾಕರ ಶೆಟ್ಟಿ, ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.ಶಿಲಾಮಯ ದೇಗುಲದ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದವರಿಗೆ ಗೌರವಾರ್ಪಣೆ ನಡೆಯಿತು.

ದೊಡ್ಮನೆ ಪ್ರದೀಪ್ ಶೆಟ್ಟಿ ಸ್ವಾಗತಿಸಿದರು. ಶಿವರಂಜನ್ ಶೆಟ್ಟಿ ವಂದಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ನಿರೂಪಿಸಿದರು.