ಕತ್ತಿಕಲ್ಲಾಂಭದೇವಿ ಸಿಡಿ ಉತ್ಸವ ಸೇರಿ ಜಿಲ್ಲೆಯ ವಿವಿಧೆಡೆ ಧಾರ್ಮಿಕ ಉತ್ಸವ

| Published : May 10 2024, 11:48 PM IST

ಕತ್ತಿಕಲ್ಲಾಂಭದೇವಿ ಸಿಡಿ ಉತ್ಸವ ಸೇರಿ ಜಿಲ್ಲೆಯ ವಿವಿಧೆಡೆ ಧಾರ್ಮಿಕ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ ತಾಲೂಕಿನ ಕಬ್ಬಳ ಗ್ರಾಮದ ಕತ್ತಿಕಲ್ಲಾಂಭ ದೇವಿಯ ಸಿಡಿ ಉತ್ಸವ ಗುರುವಾರ ಸಂಜೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ/ ಹೊಸದುರ್ಗ/ ಹಿರಿಯೂರು/

ತಾಲೂಕಿನ ಕಬ್ಬಳದ ಗ್ರಾಮದೇವತೆ ಕತ್ತಿಕಲ್ಲಾಂಭ ದೇವಿಯ ರಥೋತ್ಸವ ಹಾಗೂ ಸಿಡಿ ಉತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಜರಗಿತು.

ಜಾತ್ರೆಯ ಅಂಗವಾಗಿ ಬಧುವಾರ ರಾತ್ರಿ ಗ್ರಾಮದ ಕತ್ತಿಕಲ್ಲಾಂಭ ದೇವಿ, ಮಹಾತಂಗಿ ದೇವರಗಳೊಂದಿಗೆ ಜಾತ್ರೆಗೆ ಅಗಮಿಸುವ ಅಜುಬಾಜು ಗ್ರಾಮಗಳಾದ ಬೊಮ್ಮೇನಹಳ್ಳಿ ಕರಿಯಮ್ಮ ದೇವಿ, ಮಲ್ಲೇನಹಳ್ಳಿ ತಿರಮಲೇಶ್ವರಸ್ವಾಮಿ, ಹೊಸಹಟ್ಟಿಗ್ರಾಮದ ಅಂಜನೇಯ ಸ್ವಾಮಿ ದೇವರಗಳ ಕೂಡು ಬೇಟಿಯೊಂದಿಗೆ ಗ್ರಾಮದ ರಾಜ ಬೀದಿಗಳಲ್ಲಿ ನಾನಾ ಜನಪದ ಕಲಾಮೇಳಗಳು, ದೇವಿಯ ಭಂಟ ಚೋಮನ ಕುಣಿತದೊಂದಿಗೆ ರಾಜಬೀದಿ ಉತ್ಸವ ನಡೆಯಿತು.

ಗುರುವಾರ ಬೆಳಿಗ್ಗೆ ಎಲ್ಲಾ ದೇವರಗಳ ಮೂರ್ತಿಗಳನ್ನು ರಥೋತ್ಸವದಲ್ಲಿ ಕುಳ್ಳಿರಿಸಿ ಧಾರ್ಮಿಕ ಪೂಜಾ ವಿಧಿವಿದಾನಗಳನ್ನು ನೆರವೇರಿಸಿದ ನಂತರ ನೆರದಿದ್ದ ಭಕ್ತ ಸಮೂಹ ರಥ ಎಳೆದು ರಥೋತ್ಸವ ನೆಡಸಲಾಯಿತು. ಗುರುವಾರ ಮಧ್ಯಾಹ್ನ ಅಲಂಕೃತವಾದ ಸಿಡಿ ಬಂಡಿಯಲ್ಲಿ ಸಿಡಿ ಮರವನ್ನು ಏರಿಸಿ ಗ್ರಾಮದಿಂದ 1 ಕಿಮಿ ದೂರಲ್ಲಿರುವ ಜಾಲಿಯಮ್ಮನ ದೇವಾಲಯದ ವಿಶಾಲವಾದ ಬಯಲಿನಲ್ಲಿ ದೇವಿ ಗುರುತಿಸಿದ ವ್ಯಕ್ತಿಯನ್ನು ಮರದ ಮೇಲೆ ಹತ್ತಿಸಿ ನೆರದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಸಿಡಿ ಉತ್ಸವ ಜರಗಿತು. ಉತ್ಸವದಲ್ಲಿ ಬಾಗವಹಿಸಿದ್ದ ಭಕ್ತರು ಸಿಡಿ ಮರಕ್ಕೆ ಸಂಕಷ್ಟ ನಿವಾರಣೆಯಾಗಲೆಂದು ಬಾಳೆ ಹಣ್ಣು, ಹೂವು, ನಾಣ್ಯಗಳನ್ನು ತೂರುವ ಮೂಲಕ ಭಕ್ತಿ ಸಮರ್ಪಿಸಿದರೆ ರೈತಾಪಿ ಜನತೆ ಟ್ರ್ಯಾಕ್ಟರ್‌, ಎತ್ತಿನ ಬಂಡಿಗಳಲ್ಲಿ ಪಾನಕದ ಹಂಡೆಗಳಲ್ಲಿ ಪಾನಕ ಫಲಹಾರ ತಂದು ಜಾತ್ರೆಗೆ ಆಗಮಿಸಿದ್ದ ಜನತೆಗೆ ವಿತರಣೆ ಮಾಡಿದರು.ಕುರುಬರಹಟ್ಟಿಯಲ್ಲಿ ದುರ್ಗಾ ಜಾತ್ರೆ

ಚಿತ್ರದುರ್ಗ: ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಗ್ರಾಮದ ಶ್ರೀ ಸಿದ್ದಾರೂಢ ಶಾಖೆ ಆಶ್ರಮದಲ್ಲಿ ಆಯೋಜಿಸಿರುವ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ 27ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ನಾನಾ ಪೂಜಾ ಕೈಂಕರ್ಯಗಳು ನೆರವೇರಿದವು.

ಗ್ರಾಮದ ಪ್ರಮುಖ ಬೀದಿಗಳಲ್ಲಿ 101 ಕುಂಭಗಳೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು. ಅಮ್ಮನವರ ದೇವಾಲಯದಿಂದ ಹೊರಟು, ಹೊಸಮನೆಗೆ ಹೋಗಿ ನಂತರ ಅಲ್ಲಿಂದ ಮೆರವಣಿಗೆ ನಡೆಸಲಾಯಿತು. ಬೀರಲಿಂಗೇಶ್ವರಸ್ವಾಮಿ ದೇವಸ್ಥಾನ ಸಂಘದ ಡೊಳ್ಳು ಕುಣಿತ, ಐನಹಳ್ಳಿ ಕುರುಬರಹಟ್ಟಿ ಗ್ರಾಮದ ಕೋಲಾಟ ಸೇರಿದಂತೆ ಮತ್ತಿತರ ಜಾನಪದ ಕಲಾ ಮೇಳಗಳು ಮೆರವಣಿಗೆಯಲ್ಲಿ ಮೇಳೈಸಿದವು.ಚಿತ್ರದುರ್ಗದ ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ಪೂರ್ಣಾಹುತಿ ಕಾರ್ಯಕ್ರಮ, ಪ್ರವಚನ ಜರುಗಿದವು. ಪಾದಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ರಾತ್ರಿ ಆಯಿತೋಳು ಚಂದ್ರಪ್ಪ ಮತ್ತು ಸಂಗಡಿಗರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನೆರವೇರಿತು.

ಮೇ 11ರ ಬೆಳಗ್ಗೆ 10.30 ರಿಂದ 12.30 ರವರೆಗೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಓಕಳಿ ಉತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಐನಹಳ್ಳಿ ಕುರುಬರಹಟ್ಟಿಯ ಶ್ರೀ ಸಿದ್ಧಾರೂಢ ಸೇವಾ ಸಮಿತಿ ಪದಾಧಿಕಾರಿಗಳು, ಭಕ್ತ ಮಂಡಳಿ, ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಣಿವೆ ಮಾರಮ್ಮ ಬ್ರಹ್ಮ ರಥೋತ್ಸವ: ಸಚಿವ ಡಿ ಸುಧಾಕರ್ ಭಾಗಿ, ದೇವಿಗೆ ಪೂಜೆ ಹಿರಿಯೂರು: ತಾಲೂಕಿನ ವಾಣಿವಿಲಾಸ ಜಲಾಶಯದ ಮುಂಭಾಗದಲ್ಲಿರುವ ಶ್ರೀ ಕಣಿವೆ ಮಾರಮ್ಮನ ಬ್ರಹ್ಮ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಅಲಂಕರಿಸಿದ ರಥದಲ್ಲಿ ಉತ್ಸವಮೂರ್ತಿಯನ್ನು ಮೆರವಣಿಗೆಯೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆಯೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವ ಮೆರೆದರು. ಅಲ್ಲದೆ ರಥಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿದರು.

ಮಾರಮ್ಮನ ಜಾತ್ರೆಗೆ ಬಿಸಿಲನ್ನು ಲೆಕ್ಕಿಸದೆ ಈ ಬಾರಿ ಜನಸಾಗರವೇ ಹರಿದು ಬಂದಿತ್ತು. ಟ್ರಾಕ್ಟರ್, ಆಟೋ, ಬೈಕ್, ಕಾರು ಮತ್ತಿತರ ವಾಹನಗಳಲ್ಲಿ ಹಿರಿಯೂರು, ಹೊಸದುರ್ಗ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯದಿಂದಲೂ ಭಕ್ತರ ದಂಡೇ ರಥೋತ್ಸವದಲ್ಲಿ ಭಾಗಿಯಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರು ಕಣಿವೆ ಮಾರಮ್ಮ ದೇವಿ ಜಾತ್ರೆಯ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಸಮೃದ್ಧ ಮಳೆ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಾಗೇಂದ್ರ ನಾಯ್ಕ್, ನವೀದ್, ಕಾರ್ ಮೂರ್ತಿ, ಮಹೇಶ್, ಶಿವುಯಾದವ್, ಜ್ಞಾನೇಶ್, ಗುರುಪ್ರಸಾದ್ ಮುಂತಾದವರು ಹಾಜರಿದ್ದರು.