ಇನ್ನು ಶಾಲಾ ಮೈದಾನಗಳಲ್ಲಿ ಧಾರ್ಮಿಕ ಆಚರಣೆಗೆ ಬರೆ!

| Published : Jul 19 2024, 12:53 AM IST

ಸಾರಾಂಶ

ಹಬ್ಬಗಳ ಆಚರಣೆ ಕುರಿತು ನಾಗರಿಕ ಸಮಿತಿ ಮುಖಂಡರು ಶಾಲೆಗಳಿಗೆ ಭೇಟಿ ನೀಡಿ ಅನುಮತಿ ಕೇಳಿದಾಗ ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿರುುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯ ಯಾವುದೇ ಶಾಲೆಗಳಲ್ಲಿ ಇನ್ನು ಮುಂದೆ ಶೈಕ್ಷಣಿಕೇತರ ಚಟುವಟಿಕೆ ನಡೆಸುವಂತಿಲ್ಲ. ಅರ್ಥಾತ್‌ ಸಾರ್ವಜನಿಕವಾಗಿ ಕೃಷ್ಣಾಷ್ಟಮಿ, ಗಣೇಶೋತ್ಸವ ಮುಂತಾದ ಹಬ್ಬಗಳ ಆಚರಣೆಗೆ ಬರೆ ಹಾಕಲಾಗಿದೆ. ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು(ಡಿಡಿಪಿಐ) ಈ ಕುರಿತು ಹೊರಡಿಸಿದ ಜ್ಞಾಪನಾ ಪತ್ರ ಈಗ ವಿವಾದಕ್ಕೆ ಕಾರಣವಾಗಿದೆ.

ಜುಲೈ 16ರಂದು ಡಿಡಿಪಿಐ ಈ ಜ್ಞಾಪನಾ ಪತ್ರ ಹೊರಡಿಸಿದ್ದು, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಹಬ್ಬಗಳ ಆಚರಣೆ ಕುರಿತು ನಾಗರಿಕ ಸಮಿತಿ ಮುಖಂಡರು ಶಾಲೆಗಳಿಗೆ ಭೇಟಿ ನೀಡಿ ಅನುಮತಿ ಕೇಳಿದಾಗ ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿರುುದು ಬೆಳಕಿಗೆ ಬಂದಿದೆ.

ಜ್ಞಾಪನಾ ಪತ್ರದಲ್ಲಿ ಏನಿದೆ?: ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮೈದಾನ ಅಥವಾ ಆವರಣವನ್ನು ಯಾವುದೇ ಸಂದರ್ಭದಲ್ಲಿ ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನೂ ನೀಡಬಾರದು. ಅಲ್ಲದೆ ಅನುಮತಿಗಾಗಿ ಡಿಡಿಪಿಐ ಕಚೇರಿಗೂ ಪ್ರಸ್ತಾವನೆ ಸಲ್ಲಿಸಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

ಸಂಘಟನೆಗಳ ವಿರೋಧ ಏಕೆ?:

ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿದ ಬೆನ್ನಲ್ಲೇ ಕೃಷ್ಣಾಷ್ಟಮಿ, ಗಣೇಶೋತ್ಸವಗಳಿಗೆ ಅನುಮತಿ ನೀಡಲು ಶಾಲಾ ಆಡಳಿತ ಮಂಡಳಿಗಳು ನಿರಾಕರಿಸಿವೆ. ಸ್ವಯಂ ಆಗಿ ಅನುದಾನ ರಹಿತ ಶಾಲೆಗಳಲ್ಲೂ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲು ಈ ಬಾರಿ ಕಷ್ಟಸಾಧ್ಯವಾಗಲಿದೆ. ನಾಗರಿಕ ಸಂಘಟನೆಗಳು ಮನವಿ ಸಲ್ಲಿಸಿದರೂ ಶಾಲಾ ಹಂತದಲ್ಲೇ ಮುಖ್ಯಗುರುಗಳು ನಿರಾಕರಿಸುತ್ತಿದ್ದು, ಈ ಜ್ಞಾಪನಾ ಪತ್ರವನ್ನು ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಹಬ್ಬಗಳ ಸಾರ್ವಜನಿಕ ಆಚರಣೆ ಎಲ್ಲಿ ಮತ್ತು ಹೇಗೆ ನಡೆಸುವುದು ಎಂಬ ಚಿಂತೆ ಸಂಘಟನೆಗಳನ್ನು ಆವರಿಸಿದೆ.

ಶಾಸಕರ ಆಕ್ಷೇಪ: ಈ ರೀತಿ ಸುತ್ತೋಲೆ ಹೊರಡಿಸಿರುವುದು ಸರ್ಕಾರದ ಹಿಂದು ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಸಂಘಸಂಸ್ಥೆಗಳು ಆಹ್ವಾನ ಪತ್ರ ಮುದ್ರಿಸುವ ಮುನ್ನ ಶಾಲೆಗಳನ್ನು ಸಂಪರ್ಕಿಸಿದಾಗ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಅನುಮತಿ ಕೇಳಿ ಬಂದವರಿಗೆ ಶಾಲಾ ಮುಖ್ಯಗುರುಗಳು ಈ ಸುತ್ತೋಲೆ ತೋರಿಸಿ ವಾಪಸ್ ಕಳುಹಿಸುತ್ತಿದ್ದಾರೆ. ಹಿಂದೆ ಧಾರ್ಮಿಕ ಸ್ಥಳಗಳಲ್ಲೇ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿ ಈಗ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿದೆ. ಸಾರ್ವಜನಿಕವಾಗಿ ಹಬ್ಬ ಹರಿದಿನಗಳನ್ನು ಆಚರಿಸುವುದರಿಂದ ಸಂಸ್ಕೃತಿ ಹಾಗೂ ಸಾಮರಸ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಆದರೆ ಸರ್ಕಾರ ಇಲ್ಲಿಯೂ ಹಿಂದು ವಿರೋಧಿ ಧೋರಣೆ ಅನುಸರಿಸಲು ಹೊರಟಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಕ್ಷೇಪಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಬಗ್ಗೆ ಮಾತನಾಡುವ ಸರ್ಕಾರ ಹಿಜಾಬ್‌ ವಿಚಾರದಲ್ಲಿ ಯಾಕೆ ಮೌನ ವಹಿಸಿದೆ. ಅದನ್ನು ಯಾಕೆ ರದ್ದುಪಡಿಸುತ್ತಿಲ್ಲ? ಹಿಜಾಬ್‌ ಮೂಲಕ ಸರ್ಕಾರವೇ ಯಾವಾಗಲೂ ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡುತ್ತಿದ್ದು, ಹಿಂದು ಹಬ್ಬಗಳ ಆಚರಣೆ ವಿಚಾರದಲ್ಲಿ ಮಾತ್ರ ತಾರತಮ್ಯ ಎಸಗಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶಾಲೆಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆ ನಿರ್ಬಂಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಗೆ ಎಲ್ಲ ಶಾಲೆಗಳೂ ಬದ್ಧರಾಗಿರಬೇಕಾದ್ದು ಕರ್ತವ್ಯ.

-ವೆಂಕಟೇಶ್‌ ಪಟಗಾರ್‌, ಡಿಡಿಪಿಐ, ದ.ಕ.