ಮಾನವರಲ್ಲಿ ಸಂಕುಚಿತ ಮನೋಭಾವ ತೊಡೆದು ಹಾಕುವಲ್ಲಿ ಮಠ ಮಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಷ್ಟೇ ಶ್ರೀಮಂತನಾದರೂ ಕೊನೆಯಲ್ಲಿ ಮರಣ ಹೊಂದಿದಾಗ ಯಾವ ಶ್ರೀಮಂತಿಕೆಯೂ ನಿಮ್ಮ ಹಿಂದೆ ಬರುವುದಿಲ್ಲ.

ಹಗರಿಬೊಮ್ಮನಹಳ್ಳಿ: ಪ್ರಕೃತಿಯಲ್ಲಿ ಜೀವ ಸೃಷ್ಟಿ ನಡೆದ ಕೊನೆಯ ಹಂತದಲ್ಲಿ ಮಾನವನ ವಿಕಾಸವಾದಾಗ ಮಾನವನಲ್ಲಿ ಸಂಕುಚಿತ ಮನೋಭಾವ ಮೈದಳೆಯಿತು. ಪರಸ್ಪರ ನೋಡುವ ದೃಷ್ಟಿಕೋನವೂ ಬದಲಾದ ಪರಿಣಾಮ ಇಂದು ಸಮಾಜದಲ್ಲಿ ಮೇಲು- ಕೀಳು, ವರ್ಗ ಸಂಘರ್ಷಗಳು ನಿರಂತರ ನಡೆದಿವೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀ ಖೇದ ವ್ಯಕ್ತಪಡಿಸಿದರು.

ತಾಲೂಕಿನ ಕಡ್ಲಬಾಳು ಗ್ರಾಮದ ಗವಿಮಠದ ಶಾಖಾ ಮಠದಲ್ಲಿ ಶನಿವಾರ ಶಾಸಕರ ಅನುದಾನದ ₹1 ಕೋಟಿ ಮೊತ್ತದ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ, ನಂತರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಹೃದಯ ಶ್ರೀಮಂತಿಕೆ ಮತ್ತು ಧಾರ್ಮಿಕ ಶ್ರೀಮಂತಿಕೆ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಮಾನವರಲ್ಲಿ ಸಂಕುಚಿತ ಮನೋಭಾವ ತೊಡೆದು ಹಾಕುವಲ್ಲಿ ಮಠ ಮಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಷ್ಟೇ ಶ್ರೀಮಂತನಾದರೂ ಕೊನೆಯಲ್ಲಿ ಮರಣ ಹೊಂದಿದಾಗ ಯಾವ ಶ್ರೀಮಂತಿಕೆಯೂ ನಿಮ್ಮ ಹಿಂದೆ ಬರುವುದಿಲ್ಲ. ನಿಮ್ಮ ಜೀವಿತಾವಧಿಯ ಸಮಾಜಕ್ಕೆ ಒಳಿತಾಗುವ ಕಾರ್ಯಗಳು ನಿಮ್ಮ ಹೆಸರನ್ನು ಜನಮಾನಸದಲ್ಲಿ ಹಸಿರಾಗಿರುತ್ತದೆ ಎಂದು ತಿಳಿಸಿದರು.

ಗ್ರಾಮದ ಜನರಲ್ಲಿನ ಒಗ್ಗಟ್ಟಿನ ಪರಿಣಾಮವಾಗಿ ನಿಮ್ಮೂರಿಗೆ ಸ್ವಾಮಿಗಳನ್ನು ನೀಡಿ ಎಂಬ ನಿಮ್ಮ ಕೋರಿಕೆ ಮೂರು ದಶಕಗಳ ನಂತರ ಈಡೇರಿದೆ. ಮುಂದಿನ ದಿನಗಳಲ್ಲಿ ಮಠದ ಮೂಲಕ ಒಳಿತು ಕೆಡಕುಗಳನ್ನು ಗ್ರಹಿಸಿ ಎಲ್ಲ ರಂಗಗಳಲ್ಲಿ ಎಲ್ಲರ ಶ್ರೇಯೋಭಿವೃದ್ಧಿ ನಡೆದು ಕಡ್ಲಬಾಳು ಗ್ರಾಮ ಜಿಲ್ಲೆಯಾದ್ಯಂತ ಮನೆಮಾತಾಗಲಿ ಎಂದು ಆಶಿಸಿದರು.

ಶಾಸಕ ನೇಮರಾಜ ನಾಯ್ಕ ಮಾತನಾಡಿ, ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಮಾತ್ರ ಸಂಸ್ಕೃತಿ ಮತ್ತು ಸಂಸ್ಕಾರ ಒಂದಕ್ಕೊಂದು ಬೆಸೆದ ಸ್ಥಿತಿಯನ್ನು ಕಾಣಬಹುದಾಗಿದೆ. ಈಗ ಚುನಾವಣಾ ಕಾಲ ಮುಗಿದಿದೆ. ಕ್ಷೇತ್ರದ ಅಭಿವೃದ್ಧಿಯ ಕುರತು ಮಾತ್ರ ಪಕ್ಷಾತೀತವಾಗಿ ಗಂಭೀರವಾಗಿ ಚಿಂತಿಸಿ ಅನುಷ್ಠಾನಗೊಳಿಸುವ ತುರ್ತು ಇದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಡಗಲಿಯ ಹಿರಿ ಶಾಂತವೀರ ಸ್ವಾಮೀಜಿ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಸಿದ್ಧಾಂತವನ್ನು ಬದುಕಿನಲ್ಲಿ ಎಲ್ಲರೂ ಅಳವಡಿಸಿಕೊಂಡು ಕಾಯಕದ ಸ್ಥಿತಿಯಲ್ಲಿರಬೇಕು. ಜೊತೆಗೆ ಆಧ್ಯಾತ್ಮಿಕ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತವೆ ಎಂದು ತಿಳಿಸಿದರು.

ಪ್ರಶಾಂತ ದೇವರು ಮತ್ತು ವೀರೇಶ ದೇವರು ಉಪಸ್ಥಿತರಿದ್ದರು. ಗ್ರಾಮದ ಅಕ್ಕನ ಬಳಗ ಹಾಗೂ ಬ್ಯಾಟಿ ನಾಗರಾಜ ಮತ್ತು ಗವಿಸಿದ್ಧ ನಿರೂಪಿಸಿದರು.