ಸಾರಾಂಶ
ಸಂಸ್ಕಾರಗಳಿಂದ ಮಕ್ಕಳ ಮನಸ್ಸು ದೃಢವಾಗುವುದು. ಅದು ಅವರಿಗೆ ಚೆನ್ನಾಗಿ ಅಧ್ಯಯನ ಮಾಡಲು, ಹೆಚ್ಚು ಅಂಕ ಗಳಿಸಲು ಪ್ರೇರಣೆ ನೀಡುವುದು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದ್ದೇ ಆದರೆ ಅವರು ತಮ್ಮ ಪಾಲಕರನ್ನು ವೃದ್ಧಾಶ್ರಮಕ್ಕೆ ಕಳುಹಿಸದೆ ವಯಸ್ಸಾದವರನ್ನು ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡುವರು.
ಧಾರವಾಡ:
ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಬ್ರಾಹ್ಮಣ ಮಕ್ಕಳು ಯಶಸ್ವಿಯಾಗಬೇಕಾದರೆ ಪಾಲಕರು ಅವರಿಗೆ ಬಾಲ್ಯದಿಂದಲೇ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಶೃಂಗೇರಿ ಶ್ರೀ ಶಂಕಾರಾಚಾರ್ಯ ಮಠದ ಕಿರಿಯ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.ನಗರದಲ್ಲಿ ನಾಲ್ಕು ದಿನಗಳಿಂದ ನಡೆದ ಶುಕ್ಲ ಯಜುರ್ವೇದಿಯರ ರಾಜ್ಯಮಟ್ಟದ ಸಮ್ಮೇಳನದಲ್ಲಿ ಬುಧವಾರ ಜರುಗಿದ ನವಚಂಡಿ ಹೋಮದ ಪೂರ್ಣಾಹುತಿ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದರು.
ಇಂಥ ಸಂಸ್ಕಾರಗಳಿಂದ ಮಕ್ಕಳ ಮನಸ್ಸು ದೃಢವಾಗುವುದು. ಅದು ಅವರಿಗೆ ಚೆನ್ನಾಗಿ ಅಧ್ಯಯನ ಮಾಡಲು, ಹೆಚ್ಚು ಅಂಕ ಗಳಿಸಲು ಪ್ರೇರಣೆ ನೀಡುವುದು ಎಂದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದ್ದೇ ಆದರೆ ಅವರು ತಮ್ಮ ಪಾಲಕರನ್ನು ವೃದ್ಧಾಶ್ರಮಕ್ಕೆ ಕಳುಹಿಸದೆ ವಯಸ್ಸಾದವರನ್ನು ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡುವರು ಎಂದರು.ದೇಶದ ಪರಂಪರೆ ಹಾಗೂ ಶಾಸ್ತ್ರಗಳು ತೋರಿಸಿದ ಜ್ಞಾನಗಳನ್ನು ಮಕ್ಕಳಿಗೆ ಧಾರೆ ಎರೆಯಿರಿ ಎಂದ ಶ್ರೀಗಳು, ಸಂಸ್ಕಾರಗಳನ್ನು ನಮಗೆ ತಿಳಿದಂತೆ ಮಾಡಬಾರದು. ಅವುಗಳಿಗೂ ಒಂದು ಕ್ರಮ ಹಾಗೂ ಶಿಸ್ತು ಇದ್ದು ಪಾಲಿಸಬೇಕು ಎಂದರು.
ವೈದಿಕ ಪರಂಪರೆಯಲ್ಲಿ ಹುಟ್ಟಿದವರು ಅದೇ ಮಾರ್ಗದಲ್ಲಿ ಮುನ್ನಡೆದರೆ ಉತ್ತಮ. ಈ ದಾರಿಯಲ್ಲೇ ಯಾಕೆ ಹೋಗಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಈ ಮಾರ್ಗದಲ್ಲಿ ಸಾಗಲು ನಮಗೆ ನಮಗೆ ಅವಕಾಶ ಸಿಕ್ಕಿದೆಯಲ್ಲ ಅದೇ ಸಂತೋಷದ ವಿಷಯ ಎಂದರು. ಶ್ರದ್ಧೆಯಿಂದ ಇದೇ ಮಾರ್ಗದಲ್ಲಿ ನಡೆದರೆ ಪ್ರಯೋಜನವೂ ಉಂಟು, ಯಶಸ್ಸು ಉಂಟು ಎಂದು ಹೇಳಿದರು.ಇದಕ್ಕೂ ಮೊದಲು ಶ್ರೀಗಳನ್ನು ವಾದ್ಯಮೇಳಗಳೊಂದಿಗೆ ಶ್ರೀಮಠಕ್ಕೆ ಕರೆತರಲಾಯಿತು. ಚಿದಂಬರ ಮಠದ ದಿವಾಕರ ದೀಕ್ಷಿತ ದಂಪತಿಗಳು ಪಾದಪೂಜೆ ನೆರವೇರಿಸಿದರು.ಸಮ್ಮೇಳಾಧ್ಯಕ್ಷ ಜಿ.ಕೆ. ಕುಲಕರ್ಣಿ ಸ್ವಾಗತಿಸಿದರು. ಸಮಿತಿ ವತಿಯಿಂದ ಅರವಿಂದ ಪೂಜಾರ, ಚಿದಂಬರ ತೊರಗಲ್, ಮೃತ್ಯುಂಜಯ ದೇಶಪಾಂಡೆ, ಮಾಲತೇಶ ಕುಲಕರ್ಣಿ ಶ್ರೀಗಳಿಗೆ ಗೌರವ ಅರ್ಪಿಸಿದರು. ಅನಂತ ಕುಲಕರ್ಣಿ, ವೆಂಕಟೇಶ ಶಿವಪೂಜಿ, ಸಿ.ಎಂ. ದೀಕ್ಷಿತ, ಅಸೋಕ ಕುಲಕರ್ಣಿ, ಮಹಾಬಳೇಶ ಜೋಶಿ, ರಮೇಶ ಭಟ್ಟ, ಎಲ್.ಸಿ. ಕುಲಕರ್ಣಿ, ಉಮೇಶ ಪಾಟೀಲ ಉಪಸ್ಥಿತರಿದ್ದರು. ಸಂಚಾಲಕ ನರಸಿಂಹ ಸೋಮಲಾಪುರ ನಿರೂಪಿಸಿದರು.