ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಆದಿಚುಂನಗಿರಿ ಮಠದ ಖ್ಯಾತಿಯನ್ನು ದೇಶ-ವಿದೇಶಗಳಲ್ಲಿ ವಿಸ್ತರಿಸಿದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಧಾರ್ಮಿಕ ಸಂತ ಎಂದು ಕೃಷಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ನಡೆದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಮತ್ತು ಶ್ರೀಗುರು ಸಂಸ್ಮರಣೋತ್ಸವ ಹಾಗೂ ರಾಜ್ಯಮಟ್ಟದ 45 ನೇ ಕಾಲಭೈರವೇಶ್ವರ ಜಾನಪದ ಕಲಾ ಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾಲದಲ್ಲಿ ಮಠವನ್ನು ಪೀಠಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಭೈರವೈಕ್ಯ ಶ್ರೀಗಳು 300 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ಮೂರುವರೆ ದಶಕಗಳಲ್ಲಿ ಸಾಧಿಸಿ ಅನ್ನ, ಅಕ್ಷರ, ಧಾರ್ಮಿಕ, ಆರೋಗ್ಯ, ಪರಿಸರ ಸೇರಿದಂತೆ ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ಅಮೂಲಾಗ್ರ ಸೇವೆ ಸಲ್ಲಿಸಿದ್ದಾರೆ ಎಂದರು.
ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ತಮ್ಮಆರೋಗ್ಯ ಮತ್ತು ಆಯಸ್ಸು ಲೆಕ್ಕಿಸದೇ ಶ್ರೀಮಠ ಮತ್ತು ಸಮಾಜದ ಅಭ್ಯುದಯಕ್ಕೆ ಹಗಲಿರುಳು ಶ್ರಮಿಸಿ ಮಠವನ್ನು ಕೋಟ್ಯಂತ ಜನರ ಸದ್ಬಳಕೆಗೆ ಮೀಸಲಿಟ್ಟು ವಿಸ್ತಾರಗೊಳಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಭೈರವೈಕ್ಯ ಶ್ರೀಗಳ ದಾರಿಯಲ್ಲೇ ಶ್ರೀಮಠ ಹಾಗೂ ಸಮಾಜದ ಅಭಿವೃದ್ಧಿಯ ಕಾಳಜಿಯೊಂದಿಗೆ ಡಾ.ನಿರ್ಮಲಾನಂದನಾಥ ಶ್ರೀಗಳ ಸೇವೆ ಮತ್ತಷ್ಟು ವಿಸ್ತಾರಗೊಳ್ಳಲಿ. ಜ್ಯಾತ್ಯತೀತ ಮಠವೆಂಬ ಹೆಗ್ಗಳಿಕೆಗೆ ಪಾತ್ರವಾರಿಗಿರುವ ಶ್ರೀಮಠವನ್ನು, ಶಾಖಾ ಮಠಗಳ ಸ್ವಾಮೀಜಿ, ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧಾರ್ಮಿಕ, ಶೈಕ್ಷಣಿಕ ಹಾಗೂ ವಿಜ್ಞಾನಕ್ಷೇತ್ರದ ಪ್ರಗತಿಗೆ ಮತ್ತಷ್ಟು ಶ್ರಮಿಸಲಿ ಎಂದರು.
ದೇಶದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸನಾತನ ಸಂಸ್ಕೃತಿಯ ಶ್ರೀಮಂತಿಕೆಯನ್ನು ರಾಷ್ಟ್ರ, ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮದೇ ಆದ ಸಂವಿದಾನ ರಚಿಸಿಕೊಂಡು ಆಡಳಿತ ನಡೆಸುತ್ತಿವೆ. ಆದರೆ, ಭಾರತ ಪ್ರಜಾಪ್ರಭುತ್ವದ ಆಶಯದಂತೆ ಸಂವಿಧಾನದ ಜೋತೆಗೆ ರಾಮಾಯಣ, ಮಹಾಭಾರತದ ಆದರ್ಶಗಳನ್ನು ಮುಂದಿಟ್ಟುಕೊಂಡು ಆಳ್ವಿಕೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.ನಾಡಿನ ಯುವ ಜನಾಂಗದ ರೀತಿ-ರಿವಾಜುಗಳು ಬದಲಾಗುತ್ತಿರುವುದು ಸಮಾಜಕ್ಕೆ ಹಾನಿ. ಇದನ್ನು ಸರಿಪಡಿಸಲು ಧರ್ಮಪೀಠಗಳ ಪೀಠಾಧಿಪತಿಗಳು ಕಾಳಜಿ ತೋರಬೇಕು. ಶ್ರೇಷ್ಠ ಆಳ್ವಿಕೆಗೆ ಹೆಸರಾದ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸುಗಮವಾಗಲು ನಾಡಿನ ಚಿಂತಕರು, ಸಾಹಿತಿಗಳು ಹಾಗೂ ಮಠಾಧೀಶರು ಮುತುವರ್ಜಿ ವಹಿಸಬೇಕಾಗಿದೆ ಎಂದರು.
ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮಟ್ಟ ಕಡಿಮೆ ಇತ್ತು, ಯಾವುದೇ ಅಂತಹ ತಪ್ಪುಗಳಾಗುತ್ತಿರಲಿಲ್ಲ, ಇಂದು ಹೆಚ್ಚಿನ ಶಿಕ್ಷಣವಿದ್ದರು ಸಮಾಜದಲ್ಲಿ ಶಿಕ್ಷಿತರೇ ಹೆಚ್ಚು ತಪ್ಪು ಮಾಡುವ ಮೂಲಕ ಸಮಾಜದಲ್ಲಿನ ಸ್ವಾಥ್ಯ ಹದಗೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀಮಠದ ಕಾರ್ಯದರ್ಶಿ ಪಸನ್ನನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶ್ರೀಅನ್ನದಾನೇಶ್ವರನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಸೌಮ್ಯನಾಥ ಸ್ವಾಮೀಜಿ, ಶಾಸಕ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು ಸೇರಿದಂತೆ ಸಾಧು-ಸಂತರು ಗಣ್ಯರು ಹಾರಿದ್ದರು.