ಮಹಾಯೋಗಿಗಳ ಆಧ್ಯಾತ್ಮಿಕ ಸಾಧನೆ, ಪವಾಡಗಳು ಹಾಗೂ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳಿಂದ ಹಿಂದೂ ಧರ್ಮದ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಚಿಕ್ಕತೊಟ್ಲುಕೆರೆಯ ಮಠಾಧ್ಯಕ್ಷ ಅಟವೀ ಶಿವಲಿಂಗಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಮಹಾಯೋಗಿಗಳ ಆಧ್ಯಾತ್ಮಿಕ ಸಾಧನೆ, ಪವಾಡಗಳು ಹಾಗೂ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳಿಂದ ಹಿಂದೂ ಧರ್ಮದ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಚಿಕ್ಕತೊಟ್ಲುಕೆರೆಯ ಮಠಾಧ್ಯಕ್ಷ ಅಟವೀ ಶಿವಲಿಂಗಸ್ವಾಮಿ ತಿಳಿಸಿದರು. ಪಟ್ಟಣದ ತೊರೆಮಠದಲ್ಲಿ ಆಯೋಜಿಸಿದ್ದ ಶ್ರೀ ಅಟವೀ ಮಹಾ ಶಿವಯೋಗಿಗಳ 126ನೇ ಪುಣ್ಯಸ್ಮರಣೋತ್ಸವ, ಶ್ರೀ ನೀಲಕಂಠ ಸ್ವಾಮಿಗಳು ಹಾಗೂ ಶ್ರೀ ರಾಜಶೇಖರ ಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾನ್ ಸಂತರ ಪುಣ್ಯಸ್ಮರಣೋತ್ಸವ ಆಚರಿಸುವುದರಿಂದ ಅವರು ತಮ್ಮ ಜೀವಿತಾವಧಿಯಲ್ಲಿ ನಡೆಸಿದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳು ಜನಮಾನಸದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತವೆ. ನವೆಂಬರ್ 24ರಂದು ಗೌರಿ ಹುಣ್ಣಿಮೆ ಪ್ರಯುಕ್ತ ಅಟವೀ ಜಂಗಮ ಸುಕ್ಷೇತ್ರ ಚಿಕ್ಕತೊಟ್ಲುಕೆರೆಯಲ್ಲಿ ಕಾರ್ತಿಕ ಲಕ್ಷದೀಪೋತ್ಸವ, ಅಕ್ಕಿ ಪೂಜೆ, ರೊಟ್ಟಿ ದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.ತೊರೆಮಠದ ಅಟವಿ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀ ಅಟವೀ ಮಹಾ ಶಿವಯೋಗಿಗಳು ತಮ್ಮ ಆಧ್ಯಾತ್ಮಿಕ ಸಾಧನೆ, ಪವಾಡಗಳು ಹಾಗೂ ಧಾರ್ಮಿಕ ಸೇವೆಯ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರ ಎಂದರು. ಕಾರ್ಯಕ್ರಮದಲ್ಲಿ ತವಡೇಹಳ್ಳಿ ಮಠದ ಗೋಸಲ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆಯ ಮಲ್ಲಿಕಾರ್ಜುನಸ್ವಾಮಿ, ಚಿಕ್ಕತೊಟ್ಲುಕೆರೆಯ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ 18 ಕೋಮಿನ ಮುಖಂಡರು, ಭಕ್ತಾದಿಗಳು ಹಾಗೂ ತೊರೆಮಠದ ಸದ್ಭಕ್ತರು ಉಪಸ್ಥಿತರಿದ್ದರು.