ಕ್ಯಾಂಟೀನ್‌ನಲ್ಲಿದ್ದ ಬಕೆಟ್, ಅಡಿಪಾಯ ಹಾಗೂ ಪಕ್ಕದಲ್ಲಿದ್ದ ಗಿಡ ಮರಗಳು ಪತ್ತೆಯಾಗಿವೆ. ಬೂಮ್ ಪೋಕ್ಲೈನ್ ಮೂಲಕ ಮಣ್ಣು ತೆರವುಗೊಳಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ಮೂವರ ಶೋಧ ಕಾರ್ಯಾಚರಣೆಗೆ ಮಳೆ, ನದಿಯ ನೀರಿನ ರಭಸ ಅಡ್ಡಿಯಾಗಿದೆ. ಈ ನಡುವೆ ದುರಂತದಲ್ಲಿ ಮಣ್ಣಿನಡಿ ಹೂತುಹೋಗಿದ್ದ ಕ್ಯಾಂಟೀನ್‌ನ ಅವಶೇಷಗಳು ಪತ್ತೆಯಾಗಿವೆ. ಕ್ಯಾಂಟೀನ್‌ನಲ್ಲಿದ್ದ ಬಕೆಟ್, ಅಡಿಪಾಯ ಹಾಗೂ ಪಕ್ಕದಲ್ಲಿದ್ದ ಗಿಡ ಮರಗಳು ಪತ್ತೆಯಾಗಿವೆ. ಬೂಮ್ ಪೋಕ್ಲೈನ್ ಮೂಲಕ ಮಣ್ಣು ತೆರವುಗೊಳಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸೇನಾಪಡೆ, ನೌಕಾಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರೊಂದಿಗೆ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದಲ್ಲಿ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರೀಡ್ ಒಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಒಳಗೊಂಡಿರುವ ಡ್ರೋನ್‌ ಕಾರ್ಯಾಚರಣೆಯೂ ನಡೆಯುತ್ತಿದೆ. ಸದ್ಯಕ್ಕೆ ಎಲ್ಲ ಶೋಧ ತಂಡಗಳು ಪತ್ತೆ ಹಚ್ಚಿದ ಪ್ರಕಾರ ಕೇರಳದ ಚಾಲಕ ಅರ್ಜುನ್ ಇರುವ ಲಾರಿ ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣಿನ ಅಡಿಯಲ್ಲಿದೆ. ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಇವರೂ ಪತ್ತೆಯಾಗಬೇಕಿದೆ. ನೌಕಾಪಡೆಯ ಮುಳುಗು ತಜ್ಞರು ಡೈವಿಂಗ್ ನಡೆಸಲು ಅವಿರತವಾಗಿ ಪ್ರಯತ್ನಿಸುತ್ತಿದ್ದರೂ ಗಂಗಾವಳಿ ನದಿ ನೀರು 6 ನಾಟ್ಸ್ ವೇಗದಲ್ಲಿ ಪ್ರವಹಿಸುತ್ತಿರುವುದು ಡೈವಿಂಗ್ ನಡೆಸಲು ಅಡ್ಡಿಯಾಗಿದೆ. ನೀರಿನ ರಭಸದ ವೇಗ 2 ನಾಟ್ಸ್‌ಗೆ ಇಳಿದಲ್ಲಿ ಡೈವಿಂಗ್ ನಡೆಸಲು ಸಾಧ್ಯವಾಗಲಿದೆ. ವಿವಿಧ ವಿಭಾಗಗಳ ಸುಮಾರು 600 ಪರಿಣತರು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಆಗಾಗ ಬರುವ ಮಳೆ ಹಾಗೂ ಗಂಗಾವಳಿ ನದಿಯಲ್ಲಿ ನೀರು ವೇಗವಾಗಿ ಹರಿಯುತ್ತಿರುವುದರಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ.

ಕೇರಳ ಪಿಡಬ್ಲ್ಯುಡಿ ಸಚಿವರ ಭೇಟಿ

ಕೇರಳ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವ ರಿಯಾಜ್ ಅಹ್ಮದ್ ಶಿರೂರು ದುರಂತ ಸ್ಥಳಕ್ಕೆ ಆಗಮಿಸಿದ್ದಾರೆ. ಸಚಿವರ ಜತೆ ಶಾಸಕರಾದ ಸಚ್ಚಿನದೇವ್, ಅಶ್ರಪ್ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದರು. ಕಾರ್ಯಾಚರಣೆ ಬಗ್ಗೆ ಕೇರಳ ಸಚಿವರು ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಶಾಸಕ ಸತೀಶ ಸೈಲ್ ಇದ್ದರು. ಮೃತಪಟ್ಟ ಗ್ಯಾಸ್ ಟ್ಯಾಂಕರ್ ಚಾಲಕ ಸರವಣನ್‌ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಯಿತು.ಸುರಕ್ಷತಾ ಕ್ರಮದ ಬಳಿಕ ಸಂಚಾರಕ್ಕೆ ಅವಕಾಶ: ಡಿಸಿಕಾರವಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡು ವರದಿ ನೀಡಿದ ಬಳಿಕ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.ಶಿರೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಇನ್ನೂ ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅವರ ವರದಿ ಆಧರಿಸಿ ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ತಾವು ಆದೇಶಿಸಿದ್ದು, ಆ ಸುರಕ್ಷತಾ ಕ್ರಮಗಳನ್ನುನ ಕೈಗೊಂಡ ಬಳಿಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಮಳೆ ಹಾಗೂ ಗಂಗಾವಳಿ ನದಿಯಲ್ಲಿ ವೇಗವಾಗಿ ಹರಿಯುತ್ತಿರುವ ನೀರಿನಿಂದಾಗಿ ಶೋಧ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಶನಿವಾರ ಫ್ಲಾಟ್‌ಫಾರ್ಮ್ ಲಂಗರು ಹಾಕಿ ಅದರಿಂದ ಡೈವ್ ಮಾಡುವ ಪ್ರಯತ್ನ ನಡೆಸಲು ಉದ್ದೇಶಿಸಲಾಗಿದೆ ಎಂದು ಲಕ್ಷ್ಮೀಪ್ರಿಯಾ ವಿವರಿಸಿದರು.