ಮಡಿಕೆಗಳು ಕೇವಲ ದವಸ ಧಾನ್ಯಗಳನ್ನು ಸಂಗ್ರಹಿಸಿಡಲು ಬಳಸುತ್ತಿದ್ದವೋ ಅಥವಾ ಈ ಮಣ್ಣಿನಡಿಯಲ್ಲಿ ನಿಧಿ ಅಡಗಿದೆಯೇ ಎಂಬ ಚರ್ಚೆ ಸಾರ್ವಜನಿಕರಲ್ಲಿ ಜೋರಾಗಿ ಕೇಳಿ ಬರುತ್ತಿದ್ದು, ಇದು ಪುರಾತತ್ವ ಇಲಾಖೆ ಅಧಿಕಾರಿಗಳ ಸಂಶೋಧನೆ ಮೂಲಕ ಬಹಿರಂಗಗೊಳ್ಳಲಿದೆ.
ಗದಗ: ಜಿಲ್ಲೆಯ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಉತ್ಖನನ ಕಾರ್ಯವು ಮಂಗಳವಾರ 5ನೇ ದಿನಕ್ಕೆ ಕಾಲಿಟ್ಟಿದ್ದು, ಮಡಿಕೆಗಳ ಅವಶೇಷ ಪತ್ತೆಯಾಗಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿವೆ.
ಉತ್ಖನನ ಕಾರ್ಯದ ಐದನೇ ದಿನವಾದ ಮಂಗಳವಾರ ಇಲಾಖೆಯ ಸಿಬ್ಬಂದಿಗಳು ಭೂಮಿಯನ್ನು ಅಗೆಯುವಾಗ ಒಡೆದ ಸ್ಥಿತಿಯಲ್ಲಿರುವ ಕೆಲವು ಪುರಾತನ ಮಡಿಕೆಯ ಅವಶೇಷಗಳು ಪತ್ತೆಯಾಗಿವೆ. ಇವುಗಳಲ್ಲಿ ಅರ್ಧ ಆಕಾರದ ಮಡಿಕೆಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅಧಿಕಾರಿಗಳು ಹಾಗೂ ಕಾರ್ಮಿಕರು ಅತ್ಯಂತ ನಾಜೂಕಿನಿಂದ ಮಣ್ಣನ್ನು ಸ್ವಚ್ಛಗೊಳಿಸಿ ರಕ್ಷಿಸಿದ್ದಾರೆ.ಈ ಮಡಿಕೆಗಳು ಕೇವಲ ದವಸ ಧಾನ್ಯಗಳನ್ನು ಸಂಗ್ರಹಿಸಿಡಲು ಬಳಸುತ್ತಿದ್ದವೋ ಅಥವಾ ಈ ಮಣ್ಣಿನಡಿಯಲ್ಲಿ ನಿಧಿ ಅಡಗಿದೆಯೇ ಎಂಬ ಚರ್ಚೆ ಸಾರ್ವಜನಿಕರಲ್ಲಿ ಜೋರಾಗಿ ಕೇಳಿ ಬರುತ್ತಿದ್ದು, ಇದು ಪುರಾತತ್ವ ಇಲಾಖೆ ಅಧಿಕಾರಿಗಳ ಸಂಶೋಧನೆ ಮೂಲಕ ಬಹಿರಂಗಗೊಳ್ಳಲಿದೆ.
ಮಂಗಳವಾರ ಪತ್ತೆಯಾಗಿರುವ ಮಡಿಕೆಯ ತುಂಡುಗಳನ್ನು ಇಲಾಖೆಯು ಸಂರಕ್ಷಿಸಿದ್ದು, ವೈಜ್ಞಾನಿಕವಾಗಿ ಪರಿಶೀಲಿಸಲಾಗುತ್ತಿದೆ. ಪುರಾತತ್ವ ಇಲಾಖೆಯ ಮೂಲಗಳ ಪ್ರಕಾರ, ಲಕ್ಕುಂಡಿಯು ಒಂದು ಕಾಲದಲ್ಲಿ ವೈಭವೋಪೇತ ವಾಣಿಜ್ಯ ಗ್ರಾಮವಾಗಿದ್ದರಿಂದ ಇಲ್ಲಿನ ಪ್ರತಿಯೊಂದು ಮಡಿಕೆಯೂ ಇತಿಹಾಸದ ಅಮೂಲ್ಯ ದಾಖಲೆಯಾಗಿದೆ.ರಾಜ್ಯದ ಗಮನ ಸೆಳೆದ ಗ್ರಾಮ: ಕೆಲವು ದಿನಗಳ ಹಿಂದೆ ಇದೇ ಗ್ರಾಮದ ರಿತ್ತಿ ಕುಟುಂಬದ ಸದಸ್ಯರು ತಮ್ಮ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಅಡಿಪಾಯ ಅಗೆಯುವಾಗ, ಅನಿರೀಕ್ಷಿತವಾಗಿ 466 ಗ್ರಾಂಗೂ ಅಧಿಕ ಬಂಗಾರದ ಆಭರಣಗಳು, ನಾಣ್ಯ ಆಕಾರದ ವಸ್ತುಗಳು ಪತ್ತೆಯಾಗಿದ್ದವು. ಆ ಘಟನೆಯು ಇಡೀ ರಾಜ್ಯದ ಗಮನ ಸೆಳೆದಿತ್ತು. ಅದಾದ ನಂತರ ನಡೆಯುತ್ತಿರುವ ಉತ್ಖನನವನ್ನು ಸಾಕಷ್ಟು ಕುತೂಹಲದಿಂದ ನೋಡುವಂತಾಗಿದೆ.
ಲಕ್ಕುಂಡಿ ಅಂದು ಟಂಕಸಾಲೆ: ಲಕ್ಕುಂಡಿಯು ಕಲ್ಯಾಣ ಚಾಲುಕ್ಯರ ಕಾಲದ ಪ್ರಮುಖ ಟಂಕಶಾಸಾಲೆ ಆಗಿದ್ದರಿಂದ ಇಲ್ಲಿ ಭೂಮಿಯೊಳಗೆ ಬಂಗಾರದ ನಾಣ್ಯಗಳು ಸಿಗುವ ಸಾಧ್ಯತೆ ಹೆಚ್ಚು ಎಂಬ ನಂಬಿಕೆ ಜನರಲ್ಲಿದೆ. ಅದಕ್ಕೆ ಪೂರಕ ಎನ್ನುವಂತೆ ಗ್ರಾಮದ ಹಿರಿಯರೆಲ್ಲ ಇದು ವಿಜಯನಗರಕ್ಕೆ ಹತ್ತಿರದಲ್ಲಿಯೇ ಇರುವ ಹಿನ್ನೆಲೆ ಇಲ್ಲಿಯೂ ಸಾಕಷ್ಟು ಮುತ್ತು ರತ್ನಗಳು ಇವೆ. ಈ ಹಿಂದೆ ಮಳೆ ಬಂದಾಗ ನಾವು ಅವುಗಳನ್ನು ಆರಿಸಲು ಹೋಗುತ್ತಿದ್ದೆವು. ಈಗ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿದ್ದು, ಅದೆಲ್ಲಾ ನೋಡಲು ಸಿಗುವುದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರು.ಇದುವರೆಗೆ ಪತ್ತೆಯಾದ ವಸ್ತುಗಳುಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಉತ್ಖನನದಲ್ಲಿ ಹಲವಾರು ಮಹತ್ವದ ಕುರುಹುಗಳು ಪತ್ತೆಯಾಗಿವೆ, ಚಾಲುಕ್ಯ ಶೈಲಿಯ ಕೆತ್ತನೆ ಇರುವ ತಾಮ್ರದ ಶಿವಲಿಂಗ, ಗಂಟೆ ಲಭ್ಯ ವಾಗಿವೆ. ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಪ್ರಾಚೀನ ಕಾಲದ ತ್ರಿಕೋನಾಕಾರದ ಆಯುಧ ಸಿಕ್ಕಿದೆ. ಇನ್ನು ಶಿವಲಿಂಗವನ್ನು ಇಡುವ ಶಿಲೆಯ ಗೋಪುರ ಹಾಗೂ ಮಂಗಳವಾರ ವಿವಿಧ ಗಾತ್ರದ ಮತ್ತು ವಿನ್ಯಾಸದ ಮಣ್ಣಿನ ಪಾತ್ರೆಗಳ ಅವಶೇಷಗಳು ಸಿಕ್ಕಿವೆ.