ಸಾರಾಂಶ
ಸೊರಬ: ಅಕ್ಷರ ಬೀಜ ಬಿತ್ತುವ ಶಾಲೆ ಬದುಕಿನ ದಾರಿ ದೀವಿಗೆಯಾಗಿ ಸುಸಂಸ್ಕೃತರನ್ನಾಗಿ ಮಾಡುತ್ತದೆ. ಆದ್ದರಿಂದ ನಾವು ಓದಿದ ಶಾಲೆ ಮತ್ತು ಕಲಿಸಿದ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ನೇರಲಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೨.೫ ಲಕ್ಷ ರು. ವೆಚ್ಚದಲ್ಲಿ ಶಾಲಾ ಅಂಗಳದಲ್ಲಿ ನಿರ್ಮಿಸಲಾದ ಧ್ವಜಸ್ತಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಶಾಲೆ ಎಂದು ಅಸಡ್ಡೆ ತೋರುವ ಪ್ರಕ್ರಿಯೆ ಇಂದಿನ ದಿನಗಳಲ್ಲಿ ಇಲ್ಲ. ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎನ್ನುವ ವಿನೂತನ ಯೋಜನೆ ಜಾರಿಗೊಳಿಸಿದ್ದು, ಇದಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.ಸರ್ಕಾರಿ ಶಾಲೆಗಳ ಸುಧಾರಣೆಗೆ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯು ವಿಶಿಷ್ಟ ಚಿಂತನೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈ ಜೋಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.ನಮ್ಮ ಸರಕಾರಿ ಶಾಲೆಗಳು ಸಾಕಷ್ಟು ಮಹಾನ್ ವ್ಯಕ್ತಿಗಳನ್ನು ರೂಪಿಸಿವೆ. ಸರ್ಕಾರಿ ಶಾಲೆಗಳಲ್ಲಿ ಓದಿದಂತಹ ಅನೇಕರು ಐಟಿ. ಬಿಟಿ, ಉದ್ಯಮಿಗಳಾಗಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಕೆಲವರು ಸ್ವ-ಉದ್ಯೋಗದಲ್ಲಿದ್ದಾರೆ, ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಿಗೆಲ್ಲ ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಆಸಕ್ತಿ ಇದ್ದರೂ ಯಾವ ರೀತಿ ಸಹಾಯ ಮಾಡಬೇಕು ಎನ್ನುವುದು ತಿಳಿದಿರುವುದಿಲ್ಲ. ಹಾಗಾಗಿ, ತಾವು ಓದಿದ ಶಾಲೆಯ ಸ್ಥಿತಿಗತಿ ತಿಳಿದು ಅದಕ್ಕೆ ಬೇಕಾದ ಪೂರಕ ಪರಿಕರಗಳನ್ನು ಹಿರಿಯ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ ಎಂದರು.ತಾಲೂಕಿನ ನೇರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಂಜೀವ.ಕೆ.ಟಿ ವೃತ್ತಿಯಲ್ಲಿ ತರಕಾರಿ ವ್ಯಾಪಾರಿಯಾಗಿದ್ದು, ಸುಮಾರು ೨.೫ ಲಕ್ಷ ರು. ವೆಚ್ಚದಲ್ಲಿ ತಾವು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ಧ್ವಜಸ್ತಂಭವನ್ನು ನಿರ್ಮಿಸಿ ಶಾಲೆಯ ಅಭಿಮಾನವನ್ನು ಉತ್ತುಂಗಕ್ಕೇರಿಸಿದ್ದಾರೆ. ಇತರರಿಗೆ ಪ್ರೇರಣೆಯಾಗಿರುವ ಅವರ ಕೊಡುಗೆಗೆ ಅಭಿನಂದಿಸುವುದಾಗಿ ತಿಳಿಸಿದರು.ನಂತರ ಧ್ವಜಸ್ತಂಭ ನಿರ್ಮಿಸಲು ಆರ್ಥಿಕ ಸಹಾಯ ನೀಡಿದ ಸಂಜೀವ.ಕೆ.ಟಿ ದಂಪತಿಗಳನ್ನು ಸಚಿವ ಮಧು ಬಂಗಾರಪ್ಪ ಮತ್ತು ಎಸ್.ಡಿ.ಎಂ.ಸಿ. ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪ್ರೇಮಾ, ಶಿಕ್ಷಣ ಇಲಾಖೆಯ ಪ್ರಕಾಶ್ ಮಡ್ಲೂರು, ಮುಖಂಡರಾದ ಸದಾನಂದಗೌಡ, ಕೆ.ಪಿ.ರುದ್ರಗೌಡ, ಮಂಜಪ್ಪ ನೇರಲಗಿ, ರವಿ ಕೊರಗರ್, ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷೆ ವಸಂತಾ, ಮುಖ್ಯ ಶಿಕ್ಷಕಿ ಗೀತಾದೇವಿ, ಶಿಕ್ಷಕರಾದ ಪಾಲಾಕ್ಷಪ್ಪ, ನೀಲಾಕ್ಷಿ, ಕಲಾವತಿ, ಮಾಲತೇಶ್ ಮಂಚೇರ್, ನಂದೀಶ್, ಶಿವಕುಮಾರ್, ಅಬಿಬುಲ್ಲಾ ಮೊದಲಾದವರು ಹಾಜರಿದ್ದರು.