ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಂದುಳಿದ ವರ್ಗಗಳಿಗೆ ಒಂದು ದಿಸೆಯನ್ನು ನೀಡಿದ ಮಹಾನ್ ಚೇತನ ಹಾಗೂ ಹಿಂದುಳಿದ ವರ್ಗದ ಜನರಿಗೆ ಗೌರವದ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿದ ದಿವಂಗತ ಡಿ.ದೇವರಾಜ ಅರಸು ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ನಗರದ ಕುಮಾರ ಗಂಧರ್ವ ರಂಗಂಮದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ದೇವರಾಜ ಅರಸು ಅವರು ತಮ್ಮ ಮುಖ್ಯಮಂತ್ರಿ ಆಡಳಿತಾವಧಿಯಲ್ಲಿ ಎಲ್ಲ ವಿರೋಧಗಳನ್ನು ಮೆಟ್ಟಿನಿಂತು ಶೋಷಿತರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರು. ಸಮಾಜದ ಸ್ವಾಸ್ಥ್ಯ ಕಾಪಾಡಲು ಅನೇಕ ಕ್ರಾಂತಿಕಾರಿಕ ಬದಲಾವಣೆ ಜಾರಿಗೆ ತಂದರು. ಜೀತ ಪದ್ಧತಿ, ಮಲಹೊರುವ ಪದ್ಧತಿಯಂತಹ ಅನೇಕ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಪ್ರಮುಖ ನಿರ್ಣಯ ತೆಗೆದುಕೊಂಡರು. ಇಂದು ಸರ್ಕಾರಗಳು ಶೋಷಿತರ ಅಭ್ಯುದಯಕ್ಕಾಗಿ ಅನೇಕ ಯೋಜನೆ ಜಾರಿಗೊಳಿಸುತ್ತಿವೆ. ಈ ಯೋಜನೆಗಳು ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳು ಜಾಗೃತವಾಗಿ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದು ಆರ್ಥಿಕ, ಶೈಕ್ಷಣಿಕವಾಗಿ ಸಮಾಜ ಮುನ್ನೆಲೆಗೆ ಬರುವಂತೆ ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸಂದೇಶವನ್ನು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ವಾಚಿಸಿದರು.ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಡಿಯ ವಸತಿನಿಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಹೊಂದುವಂತೆ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಯಕ್ಕುಂಡಿಯ ಡಾ.ವೈ.ಎಂ. ಯಾಕೋಳ್ಳಿ ಉಪನ್ಯಾಸ ನೀಡಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೇಚೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಪ್ರಾರ್ಥನೆ ಪ್ರಸ್ತುತಪಡಿಸಿದರು. ಸುನಿತಾ ದೇಸಾಯಿ ನಿರೂಪಿಸಿದರು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ವೇದಿಕೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ರೀಡೆ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಬೆಳಗಾವಿ ಉತ್ತರ ಶಾಸಕ ರಾಜು ಸೇಠ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಎನ್. ಬಾನಸಿ, ವಿವಿಧ ಶಾಲಾ ಮಕ್ಕಳು, ವಸತಿ ನಿಲಯ ಮಕ್ಕಳು, ಗಣ್ಯರು, ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.ಭಾವಚಿತ್ರದ ಅದ್ಧೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಕರ್ಷಕ ಮೆರವಣಿಗೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳೊಂದಿಗೆ ಪ್ರಾರಂಭವಾದ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕುಮಾರ ಗಂಧರ್ವ ರಂಗಮಂದಿರಕ್ಕೆ ಆಗಮಿಸಿ ಸಮಾರೋಪಗೊಂಡಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಗೆ ಸಾಥ್ ನೀಡಿದರು.