ಸಾರಾಂಶ
ಧಾರವಾಡ:
ಶ್ರೀರಾಮನ ಅಪ್ಪಟ ಭಕ್ತ ಹನುಮನ ಜಯಂತಿ ಮಂಗಳವಾರ ಧಾರವಾಡದಲ್ಲಿ ಅದ್ಧೂರಿಯಾಗಿ ಜರುಗಿತು. ಬಹುತೇಕ ಎಲ್ಲ ಹನುಮ ದೇವಸ್ಥಾನಗಳಲ್ಲಿ ದೇವರಿಗೆ ಅಲಂಕಾರ, ವಿಶೇಷ ಪೂಜೆ, ತೊಟ್ಟಿಲು ಸೇವೆ ಅನ್ನ ಸಂತರ್ಪಣೆ ಹಾಗೂ ರಥೋತ್ಸವ ಸಹ ಜರುಗಿತು.ಇಲ್ಲಿನ ಸುಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ದೇವಸ್ಥಾನದ ಪರ್ಯಾಯಸ್ಥ ಡಾ. ವಿಜಯೀಂದ್ರ ದೇಸಾಯಿ ನೇತೃತ್ವದಲ್ಲಿ ಬೆಳಗ್ಗೆ 4ರಿಂದ ಹನುಮಂತ ದೇವರಿಗೆ ಅಭಿಷೇಕ ಹಾಗೂ ಅಲಂಕಾರ ನಡೆಯಿತು. ಬೆಳಗ್ಗೆ 6ಕ್ಕೆ ದೇವರಿಗೆ ತೊಟ್ಟಿಲು ಸೇವೆ ಹಾಗೂ 11ರ ಸುಮಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ನಂತರ ಸಾರ್ವಜನಿಕರಿಗೆ ಪ್ರಸಾದ ವಿತರಣೆ ನಡೆಯಿತು.
ನಗರದ ಕಾಮನಕಟ್ಟಿ ದೇವರಿಗೆ ಅಭಿಷೇಕ, ತೊಟ್ಟಿಲ ಸೇವೆ, ಪವಮಾನ ಹೋಮ ಹಾಗೂ ಅನ್ನಸಂತರ್ಪಣೆ ನಡೆಯಿತು. ಲೈನ ಬಜಾರ್ ಹನುಮಪ್ಪನ ದೇವಸ್ಥಾನವಂತೂ ಆಕರ್ಷಣೀಯವಾಗಿ ಅಲಂಕೃತಗೊಂಡಿದ್ದು ಭಕ್ತರನ್ನು ಸೆಳೆಯಿತು. ದೇವಸ್ಥಾನಕ್ಕೆ ಎಲ್ಲ ರೀತಿಯ ಹಣ್ಣುಗಳಿಂದಲೂ ಅಲಂಕಾರ ಮಾಡಲಾಗಿತ್ತು. ದೇವಸ್ಥಾನ ವಿಶ್ವಸ್ಥ ಮಂಡಳಿಯು ಸಕಲ ಸಿದ್ಧತೆ ಮಾಡಿದ್ದು, ಸಾವಿರಾರು ಜನರು ಅನ್ನ ಪ್ರಸಾದ ಪಡೆದರು. ಸಂಜೆ 55ನೇ ರಥೋತ್ಸವ ನಡೆಯಿತು. ಅದೇ ರೀತಿ ಕೇಳಕರ ಮಾರುತಿ ದೇವಸ್ಥಾನ, ಮುದಿ ಮಾರುತಿ ದೇವಸ್ಥಾನ, ಯಮ್ಮಿಕೇರಿ, ಕಮಲಾಪೂರ ಹೀಗೆ ನಗರ ಹಾಗೂ ಗ್ರಾಮೀಣ ಪ್ರದೇಶದ ಹನುಮಂತ ದೇವಸ್ಥಾನಗಳಲ್ಲಿ ಜಯಂತಿ ಭಕ್ತಿಪೂರ್ವಕವಾಗಿ ನಡೆಯಿತು. ತಾಲೂಕಿನ ಯಾದವಾಡ ಗ್ರಾಮದಲ್ಲಿ ಹನುಮ ಜಯಂತಿ ನಿಮಿತ್ತ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ ರಥೋತ್ಸವ ಜರುಗಿತು.ನಗರದ ಸಾರಸ್ವತಪುರದ ಬಾಲಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ನಡೆದ ತೊಟ್ಟಿಲೋತ್ಸವದಲ್ಲಿ ಮುತ್ತೈದೆಯರು ಬಾಲ ಮಾರುತಿಯನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು. ನಂತರ ಕುಂಭ ಮೆರವಣಿಗೆ ಸಹಿತವಾಗಿ ಪಲ್ಲಕ್ಕಿ ಉತ್ಸವ ಜರುಗಿತು. ಈ ವೇಳೆ ಮಾಳಮಡ್ಡಿ, ಗೌಳಿಗಲ್ಲಿ ಭಕ್ತರು ಮನೆ ಬಾಗಿಲಿಗೆ ಬಂದ ಶ್ರೀ ಹನುಮಂತನಿಗೆ ಆರತಿ ಬೆಳಗಿದರು. ನಂತರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಶ್ರೀ ಬಾಲಮಾರುತಿ ದೇವಸ್ಥಾನ ಅಭಿವೃದ್ಧಿ ಮಂಡಳಿಯ ಸದಸ್ಯ ಶಿವಪ್ಪ ಘಂಟಿ, ಲಕ್ಷ್ಮಣ ಸುಣಗಾರ, ಎಂ.ಕೆ. ದಾಂಡೇವಾಲೆ, ಪ್ರಶಾಂತ ಯರಗಂಬಳಿಮಠ, ಭೀಮಣ್ಣ ಮಲ್ಲಿಗವಾಡ, ಶಿವಶರಣಪ್ಪ ಇದ್ದರು.