ಅರಣ್ಯ ರಕ್ಷಿಸಿದ ಹುತಾತ್ಮರ ಸ್ಮರಿಸಿ: ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪ

| Published : Sep 12 2025, 12:06 AM IST

ಅರಣ್ಯ ರಕ್ಷಿಸಿದ ಹುತಾತ್ಮರ ಸ್ಮರಿಸಿ: ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರಪ್ರೇಮಿಗಳು, ಅರಣ್ಯ ಪ್ರೇಮಿಗಳು, ವನ್ಯಜೀವಿ ಪ್ರೇಮಿಗಳು ಆದಿ ಅನಾದಿ ಕಾಲದಿಂದಲೂ ದೇಶದಲ್ಲಿದ್ದಾರೆ. ಇವರೆಲ್ಲರೂ ಅರಣ್ಯ ಮೇಲಿನ ಪ್ರೀತಿಯಿಂದ ಅರಣ್ಯ ಸಂಪತ್ತನ್ನು ಸಂರಕ್ಷಣೆ ಮಾಡುತ್ತ ಬಂದಿದ್ದಾರೆ.

ಹಾವೇರಿ: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಥವಾ ಯಾವುದೇ ಸೇವೆಗೆ ಸೇರದೆ ಅರಣ್ಯವನ್ನು ಸಂರಕ್ಷಿಸಲು, ಅರಣ್ಯ ಸಂಪತ್ತನ್ನು ಸಂರಕ್ಷಿಸಲು, ವನ್ಯಜೀವಿಗಳನ್ನು ಸಂರಕ್ಷಿಸುವುದಕ್ಕಾಗಿಯೇ ತಮ್ಮ ಜೀವವನ್ನು ಮೂಡಿಪಾಗಿಟ್ಟ ಹುತಾತ್ಮರನ್ನು ನೆನೆದು ಅವರಿಗೆ ಗೌರವ ಸಮರ್ಪಣೆಯನ್ನು ಮಾಡುತ್ತಿದ್ದೇವೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪ ಎನ್. ತಿಳಿಸಿದರು.ಇಲ್ಲಿಗೆ ಸಮೀಪದ ಕರ್ಜಗಿ ಪ್ರಾದೇಶಿಕ ಅರಣ್ಯ ಕಚೇರಿ ಆವರಣದಲ್ಲಿ ಗುರುವಾರ ಅರಣ್ಯ ಇಲಾಖೆ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡಿ, ಪರಿಸರಪ್ರೇಮಿಗಳು, ಅರಣ್ಯ ಪ್ರೇಮಿಗಳು, ವನ್ಯಜೀವಿ ಪ್ರೇಮಿಗಳು ಆದಿ ಅನಾದಿ ಕಾಲದಿಂದಲೂ ದೇಶದಲ್ಲಿದ್ದಾರೆ. ಇವರೆಲ್ಲರೂ ಅರಣ್ಯ ಮೇಲಿನ ಪ್ರೀತಿಯಿಂದ ಅರಣ್ಯ ಸಂಪತ್ತನ್ನು ಸಂರಕ್ಷಣೆ ಮಾಡುತ್ತ ಬಂದಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್ ಮಾತನಾಡಿ, ದೇಶದಲ್ಲಿ ಅರಣ್ಯವನ್ನು ಅರಣ್ಯ ಸಂಪತ್ತನ್ನು ಕಾಪಾಡಿ ಮುಂದಿನ ಪೀಳಿಗೆಗೆ ಪರಿಚಯಿಸಿದ ಹುತಾತ್ಮರನ್ನು ನೆನೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭೂಮಿಯ ಮೇಲೆ ಯಾವುದೇ ಒಂದು ಜೀವಿ ಜೀವಿಸಬೇಕಿದ್ದರೆ ಅವುಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಅವುಗಳು ಜೀವವೈವಿಧ್ಯತೆಯ ಮೇಲೆ ಅವಲಂಬನೆ ಮಾಡಿರುತ್ತವೆ ಜೀವವೈವಿಧ್ಯತೆಯಲ್ಲಿ ವ್ಯತ್ಯಾಸವಾದರೆ ಇಡೀ ಜೀವರಾಶಿಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬಿರುತ್ತದೆ. ಹೀಗಾಗಿ ಜೀವರಾಶಿಗಳ ಉಳಿವಿಕೆಗೆ ಸೂಕ್ತ ವ್ಯವಸ್ಥೆ ಮಾಡುವುದು ಇಂದಿನ ಅನಿವಾರ್ಯತೆಯಾಗಿದೆ ಎಂದರು.ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಎ. ಶೇಖ್ ಮಾತನಾಡಿ, ಜಗತ್ತಿನಲ್ಲಿ ಮನುಕುಲ ಅಸ್ತಿತ್ವದಲ್ಲಿ ಉಳಿಯಬೇಕಿದ್ದರೆ ಎಲ್ಲ ಪ್ರಾಣಿಸಂಕುಲದೊಂದಿಗೆ ಸಮನ್ವಯದೊಂದಿಗೆ ಬಾಳ್ವೆ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಇಂದು ಇಡೀ ಜಗತ್ತು ಅರಣ್ಯ ನಾಶ ಹಾಗೂ ಪರಿಸರ ಅಸಮತೋಲನೆಯಿಂದ ಸಾಕಷ್ಟು ಸಮಸ್ಯೆವನ್ನು ಎದುರಿಸುತ್ತಿದೆ. ಸಾಧ್ಯವಾದಮಟ್ಟಿಗೆ ಉಳಿದಿರುವ ಅರಣ್ಯ ಸಂಪತ್ತನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ ಮಾತನಾಡಿ, ಭೂಮಿಯ ಮೇಲೆ ವಾಸಿಸುವ ಮನುಕುಲ ಹಾಗೂ ಇತರೆ ಜೀವರಾಶಿಗಳ ಸಂರಕ್ಷಣೆಗಾಗಿ ಹಲವರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ ಮಾಡಿದರೆ ಮಾತ್ರ ನಾವೆಲ್ಲರೂ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ಅಂಗವಾಗಿ ಅರಣ್ಯ ಭವನದ ಮುಂಭಾಗ ಅರಣ್ಯಧಿಕಾರಿ ಹಾಗೂ ಸಿಬ್ಬಂದಿ ಒಂದು ನಿಮಿಷ ಮೌನಾಚರಣೆ ಮೂಲಕ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಲಾಯಿತು. ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು.ಹಾವೇರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಚ್. ಮಂಜುನಾಥ ಅವರು ಕರ್ನಾಟಕ ಅರಣ್ಯ ಇಲಾಖೆಯ ಹುತಾತ್ಮರ ಪಕ್ಷಿನೋಟವನ್ನು ಓದಿದರು. ದಸ್ತು ಅರಣ್ಯಪಾಲಕ ಬಸವರಾಜ ಕುಲಕರ್ಣಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಕಾನೂನು ಸೇವೇಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲಜಾ ಎಚ್. ವಿ., ಸಾಮಾಜಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರಗೌಡ ಪಾಟೀಲ, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ. ಎಸ್. ಹೆಬ್ಬಾಳ ಇತರರು ಇದ್ದರು.