ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ನಗರದ ಹುಕ್ಕೇರಿಮಠದ ಶಿವಬಸವ ಮಹಾಶಿವಯೋಗಿಗಳ ಹಾಗೂ ಶಿವಲಿಂಗ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ, ನಮ್ಮೂರ ಜಾತ್ರೆ ಜ.೧೬ರಿಂದ ಜ.೨೧ರವರೆಗೆ ಆಯೋಜಿಸಲಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ನಗರದ ಹುಕ್ಕೇರಿಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಶಿವಬಸವ ಮಹಾಶಿವಯೋಗಿಗಳವರ ೭೮ನೇ ಹಾಗೂ ಶಿವಲಿಂಗ ಮಹಾಶಿವಯೋಗಿಗಳವರ ೧೫ನೇ ಪುಣ್ಯ ದಿನಾಚರಣೆ ಕಾರ್ಯಕ್ರಮಗಳ ಸಾನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ನೇತೃತ್ವವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ವಹಿಸುವರು.
ಜ.೧೬ರಂದು ಬೆಳಗ್ಗೆ ೮.೩೦ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ ನೆರವೇರಿಸುವರು. ಸಂಜೆ ೬.೩೦ಕ್ಕೆ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಮೈದಾನದಲ್ಲಿ ಜರುಗುವ ಧಾರ್ಮಿಕ ಸಭೆಯಲ್ಲಿ ಶಿರಸಿ ಬಣ್ಣದಮಠದ ಅಟವಿ ಶಿವಲಿಂಗ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಸ್ವಾಮೀಜಿ, ಅಡವಿಸಿದ್ಧರಾಮ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಹೇರೂರ ಗುಬ್ಬಿಅಜ್ಜನಮಠದ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು ಪಾಲ್ಗೊಳ್ಳುವರು. ಕರುನಾಡ ಕಾಯಕ ಪ್ರಶಸ್ತಿ ಪುರಸ್ಕೃತೆ ರೇಖಾ ಅಂತಾಪುರ ಅವರನ್ನು ಸನ್ಮಾನಿಸಲಾಗುವುದು. ನಂತರ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ತಂಡದಿಂದ ಜಾನಪದ ಸಂಭ್ರಮ ಹಾಗೂ ಅಂತಾರಾಷ್ಟ್ರೀಯ ಯೋಗ ಪಟುಗಳಿಂದ ಯೋಗ ಪ್ರದರ್ಶನ ಜರುಗಲಿದೆ ಎಂದರು.
ಜ.೧೭ರಂದು ಬೆಳಗ್ಗೆ ೧೦ಕ್ಕೆ ನಗರದ ಹಾನಗಲ್ಲ ರಸ್ತೆಯಲ್ಲಿರುವ ಶ್ರೀ ಶಿವಬಸವ ಜಾನುಮಾರು ಮಾರುಕಟ್ಟೆ ಪ್ರಾಂಗಣದಲ್ಲಿ ಶ್ರೀ ಶಿವಬಸವ ದನಗಳ ಜಾತ್ರೆ ಜರುಗಲಿದೆ. ಸಂಜೆ ೬.೩೦ಕ್ಕೆ ಜರುಗುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅರಭಾವಿಯ ಗುರುಬಸವಲಿಂಗ ಸ್ವಾಮೀಜಿ ವಹಿಸುವರು.
ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಹಸರೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕುಂದಗೋಳದ ಬಸವಣ್ಣಜ್ಜನವರು, ಕಲಬುರಗಿಯ ಚರಲಿಂಗ ಸ್ವಾಮೀಜಿ ಪಾಲ್ಗೊಳ್ಳುವರು.
ರಾಣಿಬೆನ್ನೂರಿನ ಸಾಹಿತಿ ವೆಂಕಟೇಶ ಈಡಿಗರ ಅವರಿಗೆ ಹಾವೇರಿ ಓಂ ಸಂಸ್ಥೆಯಿಂದ ಸಾಧಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಕೊಪ್ಪಳದ ಸದಾಶಿವ ಪಾಟೀಲ ಹಾಗೂ ಸಂಗಡಿಗರಿಂದ ಸಂಗೀತ ಜರುಗಲಿದೆ ಎಂದರು.
ಜ.೧೮ರಂದು ಸಂಜೆ ೬.೩೦ಕ್ಕೆ ಜರುಗುವ ಧರ್ಮಸಭೆಯಲ್ಲಿ ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ, ಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ ಪಾಲ್ಗೊಳ್ಳುವರು.
ಕೊತಬಾಳದ ಶಂಕ್ರಣ್ಣ ಸಂಕಣ್ಣನವರ ತಂಡದಿಂದ ಜಾನಪದ ವೈವಿಧ್ಯ ಕಾರ್ಯಕ್ರಮ ಜರುಗಲಿದೆ. ಡಿ.೧೮ರಿಂದ ಮೂರು ದಿನಗಳ ಕಾಲ ಹಾವೇರಿ ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಜ.೧೯ರಂದು ಸಂಜೆ ೬.೩೦ಕ್ಕೆ ಜರುಗುವ ಧಾರ್ಮಿಕ ಸಭೆಯಲ್ಲಿ ಚಿತ್ರದುರ್ಗ ಭೋವಿಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹೊಸದುರ್ಗದ ಡಾ.ಶಾಂತವೀರ ಸ್ವಾಮೀಜಿ, ಅಂಕಲಗಿ ಅಮರಸಿದ್ಧೇಶ್ವರ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ ಪಾಲ್ಗೊಳ್ಳುವರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಾನಪದ ವಿದ್ವಾಂಸಕ ಶಂಭು ಬಳಿಗಾರ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಜ.೨೦ರಂದು ಸಂಜೆ ಜರುಗುವ ಧರ್ಮಸಭೆಯಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಮಣಕವಾಡ ಅನ್ನದಾನೀಶ್ವರಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಪಾಲ್ಗೊಳ್ಳುವರು.
ಜ.೨೨ರಂದು ಸಂಜೆ ೫.೩೦ಕ್ಕೆ ಮಕ್ಕಳ ಜಾತ್ರೆ, ಸಾಂಸ್ಕೃತಿಕ ಸಂಜೆ ಜರುಗಲಿದ್ದು, ರಾತ್ರಿ ೮ ಗಂಟೆಗೆ ಶಿರಹಟ್ಟಿ ಶ್ರೀ ಫಕ್ಕೀರೇಶ್ವರ ಮಹಾತ್ಮೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಪದಾಧಿಕಾರಿಗಳಾದ ಎಸ್.ಎಸ್. ಮುಷ್ಠಿ, ಆರ್.ಎಸ್. ಮಾಗನೂರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಶಿವಲಿಂಗಪ್ಪ ಕಲ್ಯಾಣಿ, ಶಿವಯೋಗಿ ಹುಲಿಕಂತಿಮಠ, ವನಿತಾ ಮಾಗನೂರ, ಬಿ. ಬಸವರಾಜ, ಮಾಂತಪ್ಪ ಹಲಗಣ್ಣನವರ ಇತರರು ಇದ್ದರು.
ಜ.೨೧ರಂದು ಮೆರವಣಿಗೆ: ಹುಕ್ಕೇರಿಮಠದ ಪೂಜದ್ವಯರ ಪುಣ್ಯಸ್ಮರಣೋತ್ಸವದ ನಿಮಿತ್ತ ಜ.೨೧ರಂದು ಬೆಳಗ್ಗೆ ೮ಕ್ಕೆ ಶಿವಬಸವ ಮಹಾಶಿವಯೋಗಿಗಳವರ ಹಾಗೂ ಶಿವಲಿಂಗ ಮಹಾಶಿವಯೋಗಿಗಳವರ ಗದ್ದುಗೆಗೆ ಮಹಾಪೂಜೆ ಹಾಗೂ ಬಿಲ್ವಾರ್ಚನೆ ಮಧ್ಯಾಹ್ನ ೧೨ಕ್ಕೆ ಮಹಾಗಣಾರಾಧನೆ ಜರುಗಲಿದೆ.
ಸಂಜೆ ೪ಕ್ಕೆ ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆಯು ನಾಡಿನ ಖ್ಯಾತ ಕಲಾತಂಡಗಳು ಹಾಗೂ ವಿವಿಧ ವಾದ್ಯ ವೈಭವದೊಂದಿಗೆ ಜರುಗಲಿದೆ ಎಂದು ಸದಾಶಿವ ಸ್ವಾಮೀಜಿ ಹೇಳಿದರು.