ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಕ್ರಮ

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ಗೀತಾಂಜಲಿ ಸರ್ಕಲ್‌ನಿಂದ ಇಸ್ಕಾನ್ ಮಂದಿರದವರೆಗೆ ಹಾದು ಹೋಗಿರುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯ ಸಿಮೆಂಟ್ ರಸ್ತೆಯ ಮೇಲೆ ಹಾಕಲಾಗಿದ್ದ ಡಾಂಬರನ್ನು ಬುಧವಾರ ತೆರವುಗೊಳಿಸುವ ಕಾರ್ಯ ಮಾಡಲಾಯಿತು.ಸುಸಜ್ಜಿತವಾಗಿರುವ ಕಾಂಕ್ರಿಟ್ ರಸ್ತೆಯ ಮೇಲೆ ಮಂಗಳವಾರ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ(ಕೆಶಿಪ್) ಇಲಾಖೆಯಿಂದ ಗುತ್ತಿಗೆ ಪಡೆದಿದ್ದ ವಿಜಯಪುರ ಜಿಲ್ಲೆ ಮೂಲದ ಆಲೂರು ಎನ್ನುವ ಗುತ್ತಿಗೆದಾರನ ಸಿಬ್ಬಂದಿ ಡಾಂಬರು ಹಾಕುವ ಕಾಮಗಾರಿಯನ್ನು ಕೈಗೊಂಡಿದ್ದರು. ಚೆನ್ನಾಗಿರುವ ಸಿಮೆಂಟ್ ರಸ್ತೆಯ ಮೇಲೆ ಏಕಾಏಕಿ 2 ರಿಂದ 3 ಇಂಚು ದಪ್ಪ ಡಾಂಬರೀಕರಣ ಕಾರ್ಯವನ್ನು ಕೈಗೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸುಸಜ್ಜಿತ ಸಿಮೆಂಟ್ ರಸ್ತೆಯ ಮೇಲೆ ಅವೈಜ್ಞಾನಿಕ ಕಾಮಗಾರಿ ಮಾಡಲು ಮುಂದಾಗಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.ಕೇವಲ ಎರಡು ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿರುವ ಸಿಮೆಂಟ್ ರಸ್ತೆಯ ಮೇಲೆ ಏಕಾಏಕಿ ಡಾಂಬರು ಹಾಕಲು ಮುಂದಾಗಿದ್ದು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಬಗ್ಗೆ ಶಾಸಕ ಸತೀಶ್ ಸೈಲ್ ಅವರಿಗೂ ದೂರಿದ ಹಿನ್ನಲೆ, ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿತ್ತು.ಅಲ್ಲದೇ ಲೋಕೋಪಯೋಗಿ ಇಲಾಖೆ ಗಮನಕ್ಕೆ ತರದೇ, ಅನುಮತಿಯನ್ನೂ ಪಡೆಯದೇ ಸಿಮೆಂಟ್ ರಸ್ತೆಯ ಮೇಲೆ ಡಾಂಬರೀಕರಣ ಕಾರ್ಯ ಕೈಗೊಳ್ಳಲಾಗಿತ್ತು. ಈ ಹಿನ್ನಲೆ ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರರಾದ ಮಲ್ಲಿಕಾರ್ಜುನ್ ಅವರು ಕೆಲಸ ನಿಲ್ಲಿಸುವಂತೆ ಸೂಚಿಸಿದ್ದಲ್ಲದೇ, ಸಿಮೆಂಟ್ ರಸ್ತೆ ಮೇಲೆ ಹಾಕಲಾದ ಡಾಂಬರನ್ನು ಸಹ ತೆರವುಗೊಳಿಸಿ ರಸ್ತೆ ಸರಿಪಡಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನಲೆ ಗುತ್ತಿಗೆದಾರರು ಬುಧವಾರ ಆಗಮಿಸಿ ಸಿಮೆಂಟ್ ರಸ್ತೆಯ ಮೇಲೆ ಹಾಕಲಾಗಿದ್ದ ಡಾಂಬರನ್ನು ಜೆಸಿಬಿ ಮೂಲಕ ಕಿತ್ತು ತೆರವುಗೊಳಿಸಿದರು.ಇನ್ನು ಈ ತೆರವು ಕಾರ್ಯದಿಂದಾಗಿ ಚೆನ್ನಾಗಿದ್ದ ಸಿಮೆಂಟ್ ರಸ್ತೆಯ ಮೇಲೆ ಜೆಸಿಬಿ ಯಂತ್ರ ಕೆರೆದು ಹಾನಿಗೊಳಿಸಿದ್ದು, ಅನಗತ್ಯವಾಗಿ, ಪೂರ್ವ ಪರಿಶೀಲನೆ ನಡೆಸದೇ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದ್ದ ಗುತ್ತಿಗೆದಾರನಿಗೆ ಸಾರ್ವಜನಿಕರು, ವಾಹನ ಸವಾರರು ಹಿಡಿಶಾಪ ಹಾಕುವಂತಾಗಿದೆ. ಕಾಮಗಾರಿ ಆರಂಭಕ್ಕೆ ಮುನ್ನ ಸೂಕ್ತ ಪರಿಶೀಲನೆ ನಡೆಸಿದ್ದಲ್ಲಿ ಈ ರೀತಿ ಡಾಂಬರು ಹಾಳುಮಾಡುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲ ಎನ್ನಲಾಗಿದ್ದು,, ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಗುತ್ತಿಗೆದಾರ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.