ಕಸ ಸಾಗಣೆ ವಾಹನದಲ್ಲಿ ಭಗವಾಧ್ವಜ ತೆರವು: ಹುಣಸಗಿಯಲ್ಲಿ ಪ್ರತಿಭಟನೆ

| Published : Jan 24 2024, 02:01 AM IST

ಕಸ ಸಾಗಣೆ ವಾಹನದಲ್ಲಿ ಭಗವಾಧ್ವಜ ತೆರವು: ಹುಣಸಗಿಯಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಣಸಗಿ ಪಟ್ಟಣದಲ್ಲಿ ವಿದ್ಯುತ್ ಕಂಬಗಳಿಗೆ ಕಟ್ಟಲಾಗಿದ್ದ ಭಗವಾಧ್ವಜಗಳನ್ನು ತೆರವುಗೊಳಿಸಿ, ಕಸ ಸಾಗಿಸುವ ವಾಹನದಲ್ಲಿ ಸಾಗಿಸುವುದನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ತಿನ ನೂರಾರು ಕಾರ್ಯಕರ್ತರು ಮಂಗಳವಾರ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಪಟ್ಟಣದಲ್ಲಿ ವಿದ್ಯುತ್ ಕಂಬಗಳಿಗೆ ಕಟ್ಟಲಾಗಿದ್ದ ಭಗವಾಧ್ವಜಗಳನ್ನು ತೆರವುಗೊಳಿಸಿ, ಕಸ ಸಾಗಿಸುವ ವಾಹನದಲ್ಲಿ ಸಾಗಿಸುವುದನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ತಿನ ನೂರಾರು ಕಾರ್ಯಕರ್ತರು ಮಂಗಳವಾರ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

ರಾಮಮಂದಿರ ಲೋಕಾರ್ಪಣೆ ಅಂಗವಾಗಿ ಹುಣಸಗಿ ಪ್ರಮುಖ ಬೀದಿಯಲ್ಲಿ ಕಳೆದೆರಡು ದಿನಗಳಿಂದ ಎಲ್ಲೆಡೆ ಭಗವಾಧ್ವಜ ಅಳವಡಿಸಿ, ಪಟ್ಟಣವನ್ನು ಕೇಸರಿಮಯವಾಗಿ ಸಿಂಗರಿಸಲಾಗಿತ್ತು. ಎಲ್ಲೆಡೆ ಭಗವಾಧ್ವಜಗಳು ಹಾಗೂ ಫ್ಲೆಕ್ಸ್‌ಗಳು ರಾಜಾಜಿಸುತ್ತಿದ್ದವು. ಮಂಗಳವಾರ ಸಂಜೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ವಿದ್ಯುತ್‌ ಕಂಬಕ್ಕೆ ಕಟ್ಟಿರುವ ಈ ಭಗವಾಧ್ವಜಗಳನ್ನು ತೆರವುಗೊಳಿಸಿದ್ದಾರೆ. ಅಲ್ಲದೇ, ಅವುಗಳನ್ನು ಕಸ ಸಾಗಿಸುವ ವಾಹನದಲ್ಲಿ ಸಾಗಿಸಲು ಮುಂದಾಗಿದ್ದಾರ. ಈ ವೇಳೆ ವಿ.ಹಿಂ.ಪ. ಕಾರ್ಯಕರ್ತರು ಆಕ್ಷೇಪಿಸಿ, ಇದು ಭಾರತೀಯರ ಗೌರವಕ್ಕೆ ಧಕ್ಕೆ ತರುವ ನಡೆಯಾಗಿದೆ ಎಂದು ದೂರಿದರು.

ಸಾರ್ವಜನಿಕರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ, ಧ್ವಜಗಳನ್ನು ತೆರವು ಮಾಡಿರುವ ಕುರಿತು ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೆ ನಾವು ಪ್ರತಿಭಟನೆ ಕೈ ಬಿಡುವದಿಲ್ಲ ಎಂದು ಪಟ್ಟುಹಿಡಿದರು. ಘಟನೆಗೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನೆ ಶಾಂತಗೊಳಿಸಲು ಪಿಎಸ್ಐ ಇನ್ನಿಲ್ಲದ ಕಸರತ್ತು ಮಾಡಿದರು. ಪ್ರತಿಭಟನೆ ಹಿಂದಕ್ಕೆ ಪಡೆಯಿರಿ, ತೆರವುಗೊಳಿಸಿದ ಧ್ವಜಗಳನ್ನು ಮತ್ತೆ ಕಂಬಗಳಿಗೆ ಕಟ್ಟಿಸುತ್ತೇನೆ ಎಂದು ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ, ಪ್ರತಿಭಟನಾಕಾರರು ಯಾವುದೇ ರೀತಿಯಲ್ಲಿ ಸ್ಪಂದಿಸದೇ 1 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.

ಭಗವಾಧ್ವಜ ತೆರವುಗೊಳಿಸಿದಲ್ಲಿ ಮತ್ತೆ ಮರಳಿ ಕಟ್ಟಿಸುತ್ತೇವೆ ಎಂದು ಪೊಲೀಸ್‌, ಕಂದಾಯ ಹಾಗೂ ಪ.ಪಂ ಸಿಬ್ಬಂದಿ ಪ್ರತಿಭಟನಾಕಾರರ ಮನವೊಲೈಸಿದರು. ಬಳಿಕ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಹುಣಸಗಿ ಪಟ್ಟಣದಲ್ಲಿ ಕೇಸರಿ ಧ್ವಜವನ್ನು ಕಟ್ಟಲು ಪಟ್ಟಣ ಪಂಚಾಯತ ವತಿಯಿಂದ ಪರವಾನಗಿ ತೆಗೆದುಕೊಳಬೇಕಾಗಿತ್ತು. ಪರವಾನಿಗೆ ಇಲ್ಲದೆ ಧ್ವಜ ಕಟ್ಟಿರುವ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಪಟ್ಟಣ ಪಂಚಾಯತಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಪ.ಪಂ. ಸಿಬ್ಬಂದಿ ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಪ.ಪಂ ಮುಖ್ಯಾಧಿಕಾರಿ ಸಿದ್ದರಾಮೇಶ್ವರ ಪತ್ರಿಕೆಗೆ ತಿಳಿಸಿದ್ದಾರೆ.