ಬಾವಿ ತೋಡಲು ಇದ್ದ ಅಡ್ಡಿ ನಿವಾರಣೆ; ಗೌರಿಗೆ ಅನುಮತಿ

| Published : Feb 13 2024, 12:49 AM IST

ಸಾರಾಂಶ

ಶಿರಸಿಯ ಭಗೀರಥ ಮಹಿಳೆ ಎಂದೇ ಪ್ರಸಿದ್ಧಳಾದ ನಗರದ ಗಣೇಶ ನಗರದ ಗೌರಿ ನಾಯ್ಕ ತಮ್ಮ ಮನೆಯ ಸಮೀಪದಲ್ಲೇ ಇದ್ದ ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡಲು ಮುಂದಾಗಿದ್ದರು.

ಶಿರಸಿ:

ಇಲ್ಲಿನ ಗಣೇಶ ನಗರದ ಅಂಗನವಾಡಿಯಲ್ಲಿ ಕಳೆದ ಒಂದು ವಾರದಿಂದ ಸ್ವ-ಇಚ್ಛೆಯಿಂದ ಬಾವಿ ತೋಡುತ್ತಿರುವ ಇಳಿ ವಯಸ್ಸಿನ ಮಹಿಳೆಗೆ ಕೆಲಸ ಸ್ಥಗಿತಿಗೊಳಿಸುವಂತೆ ತಾವು ಸೂಚನೆ ನೀಡಿರುವ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಬಾವಿ ತೋಡುವುದನ್ನು ಮುಂದುವರಿಸಲು ಮೌಖಿಕ ಅನುಮತಿ ನೀಡಿದ್ದಾರೆ.ಶಿರಸಿಯ ಭಗೀರಥ ಮಹಿಳೆ ಎಂದೇ ಪ್ರಸಿದ್ಧಳಾದ ನಗರದ ಗಣೇಶ ನಗರದ ಗೌರಿ ನಾಯ್ಕ ತಮ್ಮ ಮನೆಯ ಸಮೀಪದಲ್ಲೇ ಇದ್ದ ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡಲು ಮುಂದಾಗಿದ್ದರು. ೧೨ ಅಡಿ ಬಾವಿಯನ್ನು ಈಗಾಗಲೇ ತೋಡಿದ್ದರು. ಆದರೆ ಇದನ್ನು ಸಹಿಸಲಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾವಿ ತೋಡದಿರಲು ಹಾಗೂ ಮುಚ್ಚಲು ಸೂಚನೆ ನೀಡಿದ್ದರು. ಅಲ್ಲದೇ, ಬಾವಿ ಮುಚ್ಚದಿದ್ದರೆ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಪತ್ರ ಸಹ ಕಳುಹಿಸಿದ್ದರು. ಇದರಿಂದ ಭಯಗೊಂಡ ಅಂಗನವಾಡಿ ಕಾರ್ಯಕರ್ತೆಯು ಗೌರಿ ನಾಯ್ಕ ಬಳಿ ಬಾವಿ ಮುಚ್ಚುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದರು.ಈ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಬೆಳಗ್ಗೆ ಅಂಗನವಾಡಿ ಎದುರಿಗೆ ನೂರಾರು ಸಾರ್ವಜನಿಕರು ಜಮಾಯಿಸಿ, ಯಾವುದೇ ಕಾರಣಕ್ಕೂ ಬಾವಿ ಮುಚ್ಚಲು ಆಸ್ಪದ ನೀಡುವುದಿಲ್ಲ. ನಾವೆಲ್ಲರೂ ಗೌರಿ ಪರವಾಗಿ ನಿಲ್ಲುತ್ತೇವೆ. ಅಧಿಕಾರಿಗಳು ಕಿರುಕುಳ ನಿಲ್ಲಿಸಬೇಕು. ಒಳ್ಳೆಯ ಕೆಲಸ ಮಾಡುತ್ತಿರುವ ಗೌರಿಗೆ ಬೆಂಬಲ ನೀಡುವ ಬದಲು ಅಡ್ಡಗಾಲು ಹಾಕುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಶ್ರೀನಿವಾಸ ಹೆಬ್ಬಾರ್ ಭೇಟಿ:ಅಂಗನವಾಡಿಗೆ ಬಾವಿ ತೊಡಲು ಅಡ್ಡಿಪಡಿಸಿದ ಪ್ರಕರಣ ಬೆಳಕಿಗೆ ಬಂದಿದ್ದೇ ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ, ಅಂಗನವಾಡಿ ಅಭಿವೃದ್ಧಿಗೆ ಸಹಾಯ ನೀಡುವುದಾಗಿ ತಿಳಿಸಿದರು. ಗೌರಿ ನಾಯ್ಕ ತೋಡಿದ ಬಾವಿಗೆ ರಿಂಗ್ ಆಳವಡಿಕೆ ಹಾಗೂ ಕಟ್ಟೆ ನಿರ್ಮಾಣ, ಅಂಗನವಾಡಿಗೆ ಕಾಂಪೌಂಡ್ ಹಾಗೂ ಪಂಪ್, ನೀರಿನ ಟ್ಯಾಂಕ್ ನಿರ್ಮಾಣ ಮಾಡಿಕೊಡುವುದಾಗಿ ಸ್ಥಳದಲ್ಲೇ ಘೋಷಿಸಿದರು.ಅಧಿಕಾರಿಗಳ ಭೇಟಿ, ಮೌಖಿಕ ಒಪ್ಪಿಗೆ:ಅಂಗನವಾಡಿಯಲ್ಲಿ ಬಾವಿ ತೆಗೆಯುವ ಸಂಬಂಧ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಹುತ್ಗಾರ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳದಲ್ಲಿದ್ದು, ಬಾವಿ ತೋಡುವುದಕ್ಕೆ ಅವಕಾಶ ಕಲ್ಪಿಸಿದರು.ಆದೇಶ ಪತ್ರದಲ್ಲಿ ಏನಿತ್ತು:

ಗಣೇಶನಗರ ಅಂಗನವಾಡಿ ನಂಬರ್ ೬ರಲ್ಲಿ ಮಹಿಳೆಯೊಬ್ಬಳು ಅನಧಿಕೃತವಾಗಿ ತೆಗೆಯುತ್ತಿರುವ ಬಾವಿಯನ್ನು ಕೂಡಲೇ ನಿಲ್ಲಿಸಿ, ಪೊಟೋ ಸಹಿತ ವರದಿಯನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ. ಹುಲಿಗೆಮ್ಮ ಶಿರಸಿಯ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗೆ ಸಹಿ ಹಾಕಿದ ಪತ್ರ ಕಳುಹಿಸಿದ್ದರು. ಅವರು ಅಂಗನವಾಡಿ ಕಾರ್ಯಕರ್ತೆಗೆ ಕೆಲಸ ಸ್ಥಗಿತ ಮಾಡುವಂತೆ ತಿಳಿಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗಿ, ಅನೇಕ ವಿದ್ಯಮಾನಗಳು ನಡೆದು, ಕೊನೆಗೆ ಬಾವಿ ತೆಗೆಯಲು ಗೌರಿ ನಾಯ್ಕ ಅವಳಿಗೆ ಮೌಖಿಕ ಆದೇಶ ನೀಡಿದರು.