ಪಶ್ಚಿಮ ಘಟ್ಟವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸುವ ಬಗ್ಗೆ ಕೇಂದ್ರ ಸರ್ಕಾರ ಮತ್ತೆ ಕರಡು ಅಧಿಸೂಚನೆ ಹೊರಡಿಸಿ 60 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದು, ಇದರ ವಿರುದ್ಧ ಕರ್ನಾಟಕದ ಕರಾವಳಿ ಸೇರಿದಂತೆ ಇತರೆ ಭಾಗದ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ.

ದಯಾನಂದ ಕಲ್ನಾರ್‌ ಮಂಗಳೂರು: ಪಶ್ಚಿಮ ಘಟ್ಟವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸುವ ಬಗ್ಗೆ ಕೇಂದ್ರ ಸರ್ಕಾರ ಮತ್ತೆ ಕರಡು ಅಧಿಸೂಚನೆ ಹೊರಡಿಸಿ 60 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದು, ಇದರ ವಿರುದ್ಧ ಕರ್ನಾಟಕದ ಕರಾವಳಿ ಸೇರಿದಂತೆ ಇತರೆ ಭಾಗದ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ.

ದ.ಕ. ಜಿಲ್ಲೆಯ 44 ಗ್ರಾಮಗಳು: ಪಶ್ಚಿಮ ಘಟ್ಟಗಳ ಪರಿಸರ ಮತ್ತು ಸಮಗ್ರ ಅಧ್ಯಯನ ಮಾಡಲು ಕೇಂದ್ರದ ಸಚಿವಾಲಯ ಉನ್ನತ ಮಟ್ಟದ ಸಮಿತಿ ರಚಿಸಿತ್ತು, ಆ ಸಮಿತಿ 2013ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ್ದು, ‘ಪಶ್ಚಿಮ ಘಟ್ಟಗಳ ಶೇ.37 ಭಾಗವನ್ನು (59,940 ಚದರ ಕಿಲೋ ಮೀಟರ್‌) ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ಈ ಬಗ್ಗೆ ಅಂದಿನಿಂದ ಕಳೆದ ವರ್ಷದ ವರೆಗೆ 6 ಬಾರಿ ಅಧಿಸೂಚನೆ ಹೊರಡಿಸಲಾಗಿತ್ತು, ಇದೀಗ 7ನೇ ಬಾರಿ ಅಧಿಸೂಚನೆ ಹೊರಡಿಸಲಾಗಿದೆ. 2026ರ ಜು.27ರಂದು 7ನೇ ಅಧಿಸೂಚನೆ ಹೊರಡಿಸಿದ್ದು, ಆ ದಿನದಿಂದ 60 ದಿನಗಳೊಳಗೆ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಪ್ರಸ್ತುತ ಅಧಿಸೂಚನೆಯಂತೆ ಕರ್ನಾಟಕದ ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಮೊದಲಾದ 10 ಜಿಲ್ಲೆಗಳ ಸುಮಾರು 1,449 ಗ್ರಾಮಗಳು ಅಧಿಸೂಚನೆಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ 10, ಸುಳ್ಯ ತಾಲೂಕಿನ 16 ಮತ್ತು ಬೆಳ್ತಂಗಡಿ ತಾಲೂಕಿನ 18 ಸೇರಿದಂತೆ ಜಿಲ್ಲೆಯ ಒಟ್ಟು 44 ಗ್ರಾಮಗಳು ವರದಿಯಲ್ಲಿದೆ. ಮತ್ತೆ ಹೋರಾಟಕ್ಕಿಳಿದ ಗ್ರಾಮಸ್ಥರು: ಪಶ್ಚಿಮ ಘಟ್ಟಗಳ ತಪ್ಪಲಿನ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ(ವಲಯ) ಎಂದು ಘೋಷಿಸಲು 7ನೇ ಬಾರಿಗೆ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸುತ್ತಲೇ ಈ ಭಾಗದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಶುರುವಾಗಿದೆ. ಈಗಾಗಲೇ ನಿರಂತರ ಅರಣ್ಯ ಸಮಸ್ಯೆ, ಕಾಡುಪ್ರಾಣಿ ಹಾವಳಿಗಳನ್ನು ಎದುರಿಸುತ್ತಿರುವ ಈ ಭಾಗದ ಗ್ರಾಮಸ್ಥರು ಸರ್ಕಾರದ 7ನೇ ಅಧಿಸೂಚನೆಯಿಂದ ಇಲ್ಲಿನ ಮೂಲಭೂತ ಸೌಲಭ್ಯ, ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂದು ಮತ್ತೆ ಹೋರಾಟದ ಹಾದಿ ಹಿಡಿಯಲು ಸಿದ್ಧತೆ ನಡೆಸಿದ್ದಾರೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ ನೇತೃತ್ವದಲ್ಲಿ ಹೋರಾಟದ ಪೂರ್ವಭಾವಿ ಸಭೆಗಳನ್ನು ನಡೆಸಲು ಆರಂಭಿಸಿದ್ದಾರೆ. ಪರಿಸರ ಸಂರಕ್ಷಣೆಗೆ ವಿರೋಧವಿಲ್ಲ: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟದ ವ್ಯಾಪ್ತಿಯ ಗ್ರಾಮಗಳಲ್ಲಿ ಅಂದಿನಿಂದ ಇಂದಿನವರೆಗೂ ಜನತೆ ಅರಣ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಅದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳದೇ ಇದೀಗ ಪರಿಸರ ಸೂಕ್ಷ್ಮ ಪ್ರದೇಶ ಘೋಷಿಸಲು ಅಧಿಸೂಚನೆ ಹೊರಡಿಸಲಾಗುತ್ತಿದೆ. ‘ಆದರೆ ಪರಿಸರ ಸಂರಕ್ಷಣೆಗೆ ನಮ್ಮ ವಿರೋಧ ಇಲ್ಲ. ಮೊದಲು ಪಶ್ಚಿಮ ಘಟ್ಟದ ಜನವಸತಿ ಪ್ರದೇಶವನ್ನು ಪಶ್ಚಿಮ ಘಟ್ಟದಿಂದ ಪ್ರತ್ಯೇಕಿಸಿ, ಗಡಿ ಗುರುತು ಮಾಡಿ. ಜನವಸತಿ ಪ್ರದೇಶಕ್ಕೆ ಮೂಲಭೂತ ಸೌಕರ್ಯ-ಸೌಲಭ್ಯದ ಅಭಿವೃದ್ಧಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಬಳಿಕ ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸಬೇಕು. ಪರಿಸರ ಸಂರಕ್ಷಣೆಗೆ ನಮ್ಮ ಬೆಂಬಲ ಇದೆ’ ಎಂದು ಹೋರಾಟಗಾರರಲ್ಲಿ ಓರ್ವರಾದ ಕಿಶೋರ್‌ ಶಿರಾಡಿ ತಿಳಿಸಿದ್ದಾರೆ.

ಶೇ.100 ವಿರೋಧಿಸಿ ನಿರ್ಣಯ, ನಿರಂತರ ಹೋರಾಟ: 2013ರಲ್ಲಿ ಅಧಿಸೂಚನೆ ಬಂದ ಸಂದರ್ಭದಲ್ಲಿ ರಾಜ್ಯದ ಬಾಧಿತ ಗ್ರಾಮಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಲಾಗಿತ್ತು. ಅಂದು ರಾಜ್ಯದ ಬಾಧಿತ ಶೇ.100 ಗ್ರಾಮಗಳಲ್ಲೂ ಪರಿಸರ ಸೂಕ್ಷ್ಮ ವಲಯ ಜನವಸತಿಗೆ ಬೇಡ ಎಂದೇ ನಿರ್ಣಯಿಸಲಾಗಿತ್ತು. ಆದರೂ ಇಲ್ಲಿವರೆಗೆ 6 ಬಾರಿ ಹಾಗೂ ಇದೀಗ 7ನೇ ಬಾರಿ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಸ್ಥರು ತಮ್ಮ ಬದುಕನ್ನೇ ಹೋರಾಟದಲ್ಲಿ ಕಳೆಯುವಂತಾಗಿದೆ ಎನ್ನುತ್ತಾರೆ ಬಾಧಿತ ಗ್ರಾಮಗಳ ಗ್ರಾಮಸ್ಥರು.

ಪರಿಸರ ಸೂಕ್ಷ್ಮ ಪ್ರದೇಶದ ಬಗ್ಗೆ ಇದೀಗ 7ನೇ ಬಾರಿಗೆ ಅಧಿಸೂಚನೆ ಹೊರಡಿಸಲಾಗಿದೆ. ನಾವು ಈಗಾಗಲೇ ಹಲವು ಹೋರಾಟಗಳನ್ನು ನಡೆಸಿ ವರದಿ ಕೈಬಿಡುವಂತೆ, ಪಶ್ಚಿಮ ಘಟ್ಟ ಮತ್ತು ಜನವಸತಿಗೆ ಗಡಿ ಗುರುತು ನಡೆಸುವಂತೆ ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ಸರ್ಕಾರ ಮತ್ತೆ ಮತ್ತೆ ಅಧಿಸೂಚನೆ ಹೊರಡಿಸುತ್ತಾ ಹೋರಾಟದಲ್ಲೇ ಕಾಲಕಳೆಯುವಂತೆ ಮಾಡಿದೆ. 7ನೇ ಅಧಿಸೂಚನೆ ವಿರುದ್ಧವೂ ತೀವ್ರವಾಗಿ ಹೋರಾಟ ನಡೆಸಿ ವರದಿ ಕೈಬಿಡಲು ಆಗ್ರಹಿಸಲಾಗುವುದು. - ಶೋರ್‌ ಶಿರಾಡಿ, ಸಂಚಾಲಕರು ಮಲೆನಾಡು ಜನಹಿತರಕ್ಷಣಾ ವೇದಿಕೆ ದಕ್ಷಿಣ ಕನ್ನಡ