ವಸ್ತು ಸಂಗ್ರಹಾಲಯ ನವೀಕರಿಸಿ ಮೇಲ್ದರ್ಜೆಗೆ

| Published : May 20 2025, 01:07 AM IST

ಸಾರಾಂಶ

ಪ್ರಾಚ್ಯವಸ್ತು ಇಲಾಖೆಯ ಸಲಹೆ ಪಡೆದು ಇತಿಹಾಸ ಪ್ರಸಿದ್ಧ ಕಿತ್ತೂರು ಸಂಸ್ಥಾನದ ಕೋಟೆಯೊಳಗೆ ನಡೆಸುತ್ತಿರುವ ಕಾಮಗಾರಿ ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕೊಂದು ಹೊಸ ರೂಪ ಸಿಗಲಿದೆ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಮುಂದಿನ ದಿನಗಳಲ್ಲಿ ಕೆ.ಆರ್‌.ಸಿ.ಎಂ ಸರ್ಕಾರಿ ವಸ್ತು ಸಂಗ್ರಹಾಲಯವನ್ನು ನವೀಕರಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಭರವಸೆ ನೀಡಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚನ್ನಮ್ಮನ ಕಿತ್ತೂರು ಸಹಯೋಗದೊಂದಿಗೆ ಪಟ್ಟಣದ ಕೋಟೆ ಆವರಣದಲ್ಲಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚ್ಯವಸ್ತು ಇಲಾಖೆಯ ಸಲಹೆ ಪಡೆದು ಇತಿಹಾಸ ಪ್ರಸಿದ್ಧ ಕಿತ್ತೂರು ಸಂಸ್ಥಾನದ ಕೋಟೆಯೊಳಗೆ ನಡೆಸುತ್ತಿರುವ ಕಾಮಗಾರಿ ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕೊಂದು ಹೊಸ ರೂಪ ಸಿಗಲಿದೆ ಎಂದರು.

ಪರಂಪರೆ ಮತ್ತು ಇತಿಹಾಸದ ಕುರಿತು ಮಕ್ಕಳಿಗೆ ಪ್ರಜ್ಞೆ ಮೂಡಿಸಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ಪರಿಸರ ಪ್ರಜ್ಞೆಯು ಕೂಡ ಅತ್ಯಂತ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಆರಂಭಿಸಬೇಕು. ಅಷ್ಟೇ ಅಲ್ಲದೆ ಗೋಲಿಹಳ್ಳಿ ಅರಣ್ಯ ವಿಭಾಗವನ್ನು ಕಿತ್ತೂರು ರಾಣಿ ಚನ್ನಮ್ಮ ಅರಣ್ಯ ವಿಭಾಗವೆಂದು ಮರುನಾಮಕಣ ಮಾಡುವಂತೆ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂತಹ ದಿನಾಚರಣೆಗಳಿಂದ ನಮ್ಮ ಪರಂಪರೆಯ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತದೆ. ಆದ್ದರಿಂದ ನೀವು ಈ ಸಾಧನೆಯನ್ನು ನಿರಂತರ ಸಾಧಿಸಬೇಕು ಎಂದು ಕನ್ನಡ ವಿಷಯದಲ್ಲಿ ೧೨೫ ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳ ಉಪಯುಕ್ತವಾಗಿವೆ. ಈ ವರ್ಷ ಇಲಾಖೆಯಿಂದ ಐತಿಹಾಸಿಕ ಪ್ರಜ್ಞೆ ಬೆಳೆಸುವ ಕಾರ್ಯಕ್ರಮಗಳಿಗೆ ವಿಶೇಷ ಸಹಕಾರ ನೀಡಲಾಗುವುದೆಂದು ತಿಳಿಸಿ, ಶೈಕ್ಷಣಿಕವಾಗಿ ತಾಲೂಕಿನಲ್ಲಿ ಆಗಿರುವ ಗುಣಾತ್ಮಕ ಬದಲಾವಣೆ ಕುರಿತು ಹಮ್ಮಿಕೊಂಡ ಅನೇಕ ಸೃಜನಶೀಲ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ವಿಶೇಷ ಉಪನ್ಯಾಸಕ ರಾಮಕೃಷ್ಣ ಇಳಕಲ್ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತುಸಂಗ್ರಹಾಲಯಗಳ ಭವಿಷ್ಯ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಕುರಿತು ವಸ್ತುಸಂಗ್ರಹಾಲಯಗಳನ್ನು ಅರಿಯುವಲ್ಲಿ ಸಮುದಾಯಗಳ ಪಾತ್ರದ ಬಗ್ಗೆ ತಿಳಿಸಿ, ವಸ್ತುಸಂಗ್ರಹಾಲಯಗಳನ್ನು ಅಭಿವೃದ್ಧಿ ಪಡಿಸುವ ಕುರಿತು ತಿಳಿಸುವುದರ ಜತೆಗೆ ಅವುಗಳ ಮಹತ್ವವನ್ನು ಕೂಡ ವಿವರಿಸಿದರು.

ಡಾ.ಎಸ್.ಬಿ.ದಳವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಭಿನಂದಿಸಿದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಆಡಿದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್‌ ರಾಘವೇಂದ್ರ ಅವರು ಕಾರ್ಯಕ್ರಮಕ್ಕೆ ಬಂದ ಎಲ್ಲರನ್ನು ಸ್ವಾಗತಿಸಿದರು. ಮಂಜುನಾಥ ಕಳಸಣ್ಣವರ ನಿರೂಪಿಸಿದರು. ಶರಣಬಸವ ವಾಲಿಯವರು ವಂದಿಸಿದರು. ಕುಮಾರಿ ನವ್ಯಾ ಹೊಂಗಲ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರಾದ ಅಶ್ಪಾಕ್ ಹವಾಲ್ದಾರ್‌, ಸುನಿಲ್ ಘೀವಾರಿ, ಮುಖ್ಯ ಶಿಕ್ಷಕರಾದ ಮಹೇಶ ಚೆನ್ನಂಗಿ, ಶಿಕ್ಷಕರಾದ ಮಹೇಶ್ವರ ಹೊಂಗಲ, ನಾಗರಾಜ ಹುಲಿಯಪ್ಪನವರಮಠ, ರಾಜಶೇಖರ ರಗಟಿ, ಗಜಾನನ ಸೊಗಲಣ್ಣವರ, ಕುಬೇರ ಜಾಯಕ್ನವರ, ಮೆಹಬೂಬ್ ಮುಲ್ತಾನಿ, ಎಂ.ಪಿ.ಕದಂ ಉಮೇಶ ಹಿರೇಮಠ, ಎನ್.ಎಂ.ನಂದಿಹಳ್ಳಿ ಸೇರಿದಂತೆ ಶಿಕ್ಷಕರು, ಮುಖ್ಯೋಪಾಧ್ಯಾಯರು, ಸಾಹಿತ್ಯ ಪರಿಷತ್ತ ಪದಾಧಿಕಾರಿಗಳು ಮತ್ತು ಪಾಲಕರು ಸಭೆಯಲ್ಲಿ ಪಾಲ್ಗೊಂಡಿದ್ದರು.ವಸ್ತು ಸಂಗ್ರಹಾಲಯ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗುವುದು. ಸಂಗ್ರಹಾಲಯ ನವೀಕರಣಗೊಳಿಸಿ ಆಕರ್ಷಕವಾಗಿ ಮಾಡಲಾಗುವುದು. ಬಾಬಾಸಾಹೇಬ ಪಾಟೀಲ, ಶಾಸಕರು.

ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಮೂಲಕ ದೇಶದ ಪರಂಪರೆ, ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ತಿಳಿಸಿ ಮುಂದುವರೆಸುವಂತ ಮಹತ್ವದ್ದ ಕಾರ್ಯವನ್ನು ಪುರಾತತ್ವ ಇಲಾಖೆ ಮಾಡುತ್ತಿದೆ. ವಸ್ತು ಸಂಗ್ರಹಾಲಯದಲ್ಲಿರುವ ಐತಿಹಾಸಿ ಕುರುವುಗಳ ಬಗ್ಗೆ ಅಗತ್ಯ ಮಾಹಿತಿಯನ್ನು ವಿದ್ಯಾರ್ಥಿಗಳು, ಸಂಶೋಧಕು ಸೇರಿದಂತೆ ಪಾಲಕರು ಪಡೆದುಕೊಳ್ಳಬೇಕು.

-ರಾಘವೇಂದ್ರ, ಕ್ಯೂರೇಟರ್‌ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಚನ್ನಮ್ಮನ ಕಿತ್ತೂರು.