ಚಿಕ್ಕಮಗಳೂರುಜಿಲ್ಲಾ ನ್ಯಾಯಾಲಯದ ಮುಂಭಾಗದ ಮಹಾತ್ಮಗಾಂಧಿ ಉದ್ಯಾನವನ ಖಾಸಗಿ ಸಹಭಾಗಿತ್ವದಲ್ಲಿ ನವೀಕರಣಗೊಂಡಿದ್ದು, ಜ. 13 ರಂದು ಲೋಕಾರ್ಪಣೆಗೊಳ್ಳಲಿದೆ.

ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಉದ್ಯಾನವನ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾ ನ್ಯಾಯಾಲಯದ ಮುಂಭಾಗದ ಮಹಾತ್ಮಗಾಂಧಿ ಉದ್ಯಾನವನ ಖಾಸಗಿ ಸಹಭಾಗಿತ್ವದಲ್ಲಿ ನವೀಕರಣಗೊಂಡಿದ್ದು, ಜ. 13 ರಂದು ಲೋಕಾರ್ಪಣೆಗೊಳ್ಳಲಿದೆ.

ಅಂದು ಮಧ್ಯಾಹ್ನ 3 ಗಂಟೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಉದ್ಯಾನವನ ಲೋಕಾರ್ಪಣೆ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕಾಫಿ ಲ್ಯಾಂಡ್‌ ಅಧ್ಯಕ್ಷ ನಾಗೇಶ್‌ ಕೆಂಜಿಗೆ ವಹಿಸಲಿದ್ದಾರೆ.ರೋಟರಿ ಜಿಲ್ಲಾ ರಾಜ್ಯಪಾಲ ಕೆ. ಪಾಲಾಕ್ಷ , ಸಹಾಯಕ ರಾಜ್ಯಪಾಲ ಟಿ.ಎಂ. ಪ್ರವೀಣ್ ನಾಹರ್, ವಲಯ ಸೇನಾನಿ ಎಚ್.ಕೆ. ಮಂಜುನಾಥ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಆಯುಕ್ತ ಬಿ.ಸಿ.ಬಸವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ನಗರಸಭೆ, ಮಹಾತ್ಮಾಗಾಂಧಿ ಉದ್ಯಾನವನವನ್ನು ನಿರ್ವಹಣೆಗೆ ರೋಟರಿ ಕಾಫಿ ಲ್ಯಾಂಡ್‌ಗೆ ನೀಡಿದ್ದು, ಸಂಸ್ಥೆ ಅಧ್ಯಕ್ಷ ನಾಗೇಶ್‌ ಕೆಂಜಿಗೆ ಹಾಗೂ ನಿರ್ದೇಶಕ ಎಂಜಿನಿಯರ್‌ ಗುರುಮೂರ್ತಿ ಅವರ ತಂಡದ ಅವಿರತ ಪ್ರಯತ್ನ ಮತ್ತು ಶ್ರಮದಿಂದ ಉದ್ಯಾನವನ ಇದೀಗ ಮರು ಹುಟ್ಟು ಪಡೆದಿದೆ.ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೇ, ಸುಣ್ಣ ಬಣ್ಣ ಕಾಣದೇ ನಿಸ್ತೇಜವಾಗಿದ್ದ ಉದ್ಯಾನವನ ಇದೀಗ ಬಣ್ಣದಿಂದ ಸಿಂಗಾರ ಗೊಂಡು ಹಸಿರಿನಿಂದ ಕಂಗೊಳಿಸುತ್ತಿದೆ.ಜೋತು ಬಿದ್ದಿದ್ದ ಮರಗಳ ಕೊಂಬೆಗಳನ್ನು ಒಪ್ಪವಾಗಿ ಕಡಿದು ಉದ್ಯಾನವನಕ್ಕೆ ಬೆಳಕು ಬೀಳುವ ಹಾಗೆ ಮಾಡಲಾಗಿದೆ. ತುಕ್ಕು ಹಿಡಿದಿದ್ದ ಕಬ್ಬಿಣದ ಗೇಟ್ ಗಳಿಗೆ ಮತ್ತು ಉದ್ಯಾನವನದಲ್ಲಿರುವ ರಾಷ್ಟ್ರಪಿತನಗುಡಿ ಮತ್ತು ಪುತ್ಥಳಿಗೆ ಕಾಯಕಲ್ಪ ನೀಡಲಾಗಿದೆ, ಹಿರಿಯ ನಾಗರಿಕರು, ಸಾರ್ವಜನಿಕರು ವಿಶ್ರಮಿಸಲು ಸಿಮೆಂಟ್ ಬೆಂಚುಗಳನ್ನು ನಿರ್ಮಿಸಲಾಗಿದೆ.ರಾಷ್ಟ್ರಪಿತ ಮಹಾತ್ಮಾಗಾಂಧಿ ಪುತ್ಥಳಿ ಸಮೀಪ ಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ಕುರಿತು ಮಾಹಿತಿ ನೀಡಿದ ರೋಟರಿ ಕಾಫಿ ಲ್ಯಾಂಡ್‌ ಅಧ್ಯಕ್ಷ ನಾಗೇಶ್‌ ಕೆಂಜಿಗೆ, ಉದ್ಯಾನವನ ಹತ್ತು ಹಲವು ರೀತಿ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಹತ್ತಿರ ವಾಗಿಸುವ ಗುರಿ ಮತ್ತು ಕನಸು ತಮಗಿದೆ ಎಂದರು.ನಗರಸಭೆ ನೀರಿನ ವ್ಯವಸ್ಥೆ ಕಲ್ಪಿಸಿದಲ್ಲಿ ಉದ್ಯಾನವನವನ್ನು ಪುಷ್ಪೋದ್ಯಾನವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು. 9 ಕೆಸಿಕೆಎಂ 3ಖಾಸಗಿ ಸಹಭಾಗಿತ್ವದಲ್ಲಿ ನವೀಕರಣಗೊಂಡಿರುವ ಮಹಾತ್ಮಗಾಂಧಿ ಉದ್ಯಾನವನ.