ಸಂಪ್ರದಾಯಸ್ಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅನಂತ್ ನಾಗ್ ಅವರು, ಮುಂಬೈಯಲ್ಲಿ ವ್ಯಾಸಂಗ ಮಾಡಿ ಬಿ.ಕಾಂ ಪದವೀಧರರಾಗಿ ಬ್ಯಾಂಕ್ ಉದ್ಯೋಗಿಗಳಾದರು. ಆದರೆ, ಅವರ ಒಳಗಿದ್ದ ಕಲಾವಿದನ ತುಡಿತದಿಂದ ಕನ್ನಡ, ಹಿಂದಿ, ಮರಾಠಿ, ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಚಿತ್ರರಂಗದ ಮೇರು ಕಲಾವಿದ ಅನಂತ ನಾಗ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವುದು ಕನ್ನಡಿಗರೆಲ್ಲರಿಗೂ ಅತ್ಯಂತ ಅಭಿಮಾನದ ಸಂಗತಿ ಎಂದು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶುಭ ಹಾರೈಸಿದ್ದಾರೆ.ಸಂಪ್ರದಾಯಸ್ಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅನಂತ್ ನಾಗ್ ಅವರು, ಮುಂಬೈಯಲ್ಲಿ ವ್ಯಾಸಂಗ ಮಾಡಿ ಬಿ.ಕಾಂ ಪದವೀಧರರಾಗಿ ಬ್ಯಾಂಕ್ ಉದ್ಯೋಗಿಗಳಾದರು. ಆದರೆ, ಅವರ ಒಳಗಿದ್ದ ಕಲಾವಿದನ ತುಡಿತದಿಂದ ಕನ್ನಡ, ಹಿಂದಿ, ಮರಾಠಿ, ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದರು. ಸಂಕಲ್ಪ ಎಂಬ ಕನ್ನಡ ಚಲನಚಿತ್ರದಲ್ಲಿ ಮೊದಲಿಗೆ ನಟಿಸಿದ ಅವರು ಮುಂದೆ ಕಂಡಿದ್ದೆಲ್ಲಾ ಯಶಸ್ಸಿನ ಸೋಪಾನಗಳೇ. ಐದು ಭಾಷೆಗಳಲ್ಲಿ ಪ್ರಭುತ್ವ, ಅಭಿನಯದಲ್ಲಿ ಪ್ರಬುದ್ಧತೆ, ಸಾಹಿತ್ಯ ಸಂಗೀತ ಕಲೆಗಳಲ್ಲಿ ಅತೀವ ಆಸಕ್ತಿ ಅವರನ್ನೊಬ್ಬ ಅದ್ಭುತ ನಟ ಸಾಮ್ರಾಟರನ್ನಾಗಿ ರೂಪಿಸಿತು.
ಸಂಕೇತ್ ನಾಟಕ ತಂಡದ ಮೂಲಕ ಸಹೋದರ ದಿವಂಗತ ಶಂಕರ್ ನಾಗ್ ಅವರ ಸಹಯೋಗದಲ್ಲಿ ಹೊಸ ರೀತಿಯ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಿದರು. ಅವರು ಹಿಂದಿ ಭಾಷೆಯ ಅಂಕುರ್, ಮಂಥನ್, ನಿಶಾಂತ್ ಇತ್ಯಾದಿ ಚಲನಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿದ್ದಾರೆ. ಕನ್ನಡದಲ್ಲಿ ಹಂಸಗೀತೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಬರ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಇತ್ತೀಚೆಗೆ ಕೆಜಿಎಫ್ ಅವರ ಪ್ರಮುಖ ಚಿತ್ರಗಳು. ಹಾಸ್ಯ ಪ್ರಧಾನ ಚಿತ್ರಗಳಲ್ಲೂ ಅವರು ತಮ್ಮ ವಿಶಿಷ್ಟ ಅಭಿನಯದಿಂದ ಮನೆ ಮಾತಾಗಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ವೈವಿಧ್ಯತೆ ಅವರ ವೈಶಿಷ್ಟ್ಯ. ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವಿಕ್ರಮಗಳನ್ನು ಸಾಧಿಸಿರುವರು. ಅವರು ಬೆಳೆದು ಚಿತ್ರೋದ್ಯಮವನ್ನೂ ಬೆಳೆಸಿದರು.ಚಿತ್ರರಂಗ ಮಾತ್ರವಲ್ಲದೆ ಕೆಲಕಾಲ ಅನಂತ ನಾಗ್ ರಾಜಕೀಯದಲ್ಲೂ ಸಕ್ರಿಯವಾಗಿವಾಗಿದ್ದರು. ವಿಧಾನಪರಿಷತ್ ಸದಸ್ಯರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನಿಸ್ಪೃಹತೆಯಿಂದ ಸೇವೆ ಸಲ್ಲಿಸಿದ್ದಾರೆ. ಸುಖ- ಸಂತೃಪ್ತ ಕುಟುಂಬ ಅವರದು. ಪತ್ನಿ ಸಿನಿಮಾ ಕಲಾವಿದರಾದ ಗಾಯಿತ್ರಿಯವರು, ಮಗಳು ಆದಿತಿ ಕೂಡ ಕಲೆಯಲ್ಲಿ ಆಸಕ್ತಿಯುಳ್ಳವರು.
300 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸ್ಫುರದ್ರೂಪಿ ಹಿರಿಯ ಕಲಾವಿದರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ, ಡಾ. ವಿಷ್ಣುವರ್ಧನ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪದ್ಮಭೂಷಣ ಪುರಸ್ಕಾರಗಳು ಲಭಿಸಿವೆ. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಚಿತ್ರರಂಗದಲ್ಲಿನ ಜೀವಮಾನ ಸಾಧನೆಗಾಗಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅವರ ಮುಡಿಗೇರಿದೆ. ಅನಂತ ನಾಗ್ ಅವರು ಕನ್ನಡಿಗರ ಕಣ್ಮಣಿಯಾಗಿ ಹೀಗೆಯೇ ನೂರ್ಕಾಲ ಬಾಳಿ ಕಲಾ ಸೇವೆ ಮಾಡುತ್ತಿರಲಿ ಎಂದು ಅವರು ಹಾರೈಸಿದ್ದಾರೆ.