ಸಾರಾಂಶ
ಕನ್ನಡಪ್ರಭ ವಾರ್ತೆ ನಿಟ್ಟೆ|
ಸ್ವಾಮಿ ವಿವೇಕಾನಂದರ ಜನ್ಮಜಯಂತಿ ಪ್ರಯುಕ್ತ ಜ. 12ರಂದು ಡಾ.ಎನ್.ಎಸ್.ಎ.ಎಮ್ ಪ್ರಥಮ ದಜೆ೯ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.ಕಾಲೇಜಿನ ಯೂಥ್ ರೆಡ್ ಕ್ರಾಸ್ ಸೊಸೈಟಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರೋವರ್ಸ್ ಆಂಡ್ ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ‘ಮೌಲ್ಯಾಧಾರಿತ ಸಮಾಜ ನಿಮಾ೯ಣದಲ್ಲಿ ಯುವ ಜನತೆಯ ಪಾತ್ರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ವಿದ್ಯಾಥಿ೯ಗಳಿಗೆ ಏರ್ಪಡಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಅಂಕಣಕಾರರೂ, ವಾಗ್ಮಿಗಳೂ ಆಗಿರುವ ಶ್ರೀಕಾಂತ ಶೆಟ್ಟಿ ಭಾಗವಹಿಸಿದರು. ವಿದ್ಯಾಥಿ೯ಗಳನ್ನು ಉದ್ದೇಶಿಸಿ ಮಾತನಾಡಿದ ಇವರು ಆಧ್ಯಾತ್ಮಿಕ ದೇಶವಾದ ಭಾರತ ಇಂದು ಇಡಿಯ ವಿಶ್ವಕ್ಕೆ ಮಾನವೀಯತೆಯ ಪಾಠವನ್ನು ಮಾಡುವ ವಿಶ್ವಗುರುವಾಗಿದೆ. ಇದಕ್ಕೆಲ್ಲ ಕಾರಣ ಸ್ವಾಮಿ ವಿವೇಕಾನಂದರ ಚಿಕಾಗೋದ ಭಾಷಣ. ವಿವೇಕಾನಂದರು ಈ ಭಾಷಣದ ಮೂಲಕ ಜಗತ್ತಿಗೆ ವಸುದೈವ ಕುಟುಂಬ ಹಾಗೂ ಭ್ರಾತೃತ್ವದ ಪಾಠ ಭಾರತದ ಮಣ್ಣಿನಲ್ಲಿಯೇ ಆವರಿಸಿದೆ ಎಂಬುದನ್ನು ತಿಳಿಸಿಕೊಡುತ್ತಾರೆ. ಇಂದಿನ ಯುವ ಜನತೆ ವಿವೇಕಾನಂದರ ಆದರ್ಶಗಳನ್ನು ಪಾಲಿಸಿದರೆ ಭಾರತದ ಸಂಸ್ಕೃತಿ, ಆರ್ಥಿಕತೆ, ಪರಂಪರೆಗಳನ್ನು ಜಾಗತಿಕವಾಗಿ ಉತ್ತುಂಗದಲ್ಲಿಡಲು ಸಾಧ್ಯ ಎಂದು ತಿಳಿಸಿದರು.
ಭಾರತೀಯ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಬಾಲಗಂಗಾಧರತಿಲಕ, ಖುದೀರಾಮ್ ಬೋಸ್, ಮಹಾತ್ಮಗಾಂಧಿ, ಭಾರತದ ಆರ್ಥಿಕತೆಗೆ ಕೊಡುಗೆ ನೀಡಿದ ಜೆಮ್ಷೆಡ್ ಜೆ ಟಾಟ ಇವರಿಗೆಲ್ಲ ಆದರ್ಶವಾಗಿದ್ದವರು ಸ್ವಾಮಿ ವಿವೇಕಾನಂದರು. ಧರ್ಮ ಎಂದರೆ ಕೇವಲ ಆಚರಣೆಯಲ್ಲ, ಧರ್ಮ ಎಂದರೆ ತಾನೂ ಬದುಕಬೇಕು ಇತರರನ್ನು ಬದುಕಲು ಬಿಡಬೇಕು ಎನ್ನುವ ಮೌಲ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾಕುಮಾರಿ ಬಿ. ಕೆ. ಮಾತನಾಡಿ, ಭಾರತೀಯರು ಇಂದು ವಿದೇಶದಲ್ಲಿ ಗೌರವದಿಂದ ಬಾಳುತ್ತಿದ್ದಾರೆ ಎಂದರೆ ಅದಕ್ಕೆ ಸ್ವಾಮಿ ವಿವೇಕಾನಂದರೇ ಕಾರಣ ಎಂದು ತಿಳಿಸಿದರು. ಇಂದು ಜಗತ್ತಿನ ಪ್ರತಿ ಐದು ಜನ ತಂತ್ರಜ್ಞರಲ್ಲಿ, ಒಬ್ಬ ವ್ಯಕ್ತಿ ಭಾರತೀಯನಿದ್ದಾನೆ ಎಂಬುದು ಭಾರತದ ಯುವ ಜನತೆಯ ಶಕ್ತಿ, ಸಾಮರ್ಥ್ಯಕ್ಕೆ ಉದಾಹರಣೆ ಆಗಿದೆ ಎಂದರು.
ರೋವರ್ಸ್ ಆಂಡ್ ರೇಂಜರ್ಸ್ ನ ಸಂಯೋಜಕರಾದ ಪ್ರಕಾಶ್. ಬಿ. ಅತಿಥಿಗಳನ್ನು ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ರಶ್ಮಿ ವಂದಿಸಿದರು. ದೀಕ್ಷಾ ಕಾಯ೯ಕ್ರಮ ನಿರೂಪಿಸಿದರು.