ಸಾರಾಂಶ
ಮುಂದೆ ಯಾರು ಮೇಲಿನಕೇರಿ ಅಥವಾ ಇನ್ನಾವುದೇ ರಸ್ತೆ ಅಂಚಿನಲ್ಲಿ ಬೈಕ್ ನೀಡುವಂತಿಲ್ಲ ಎಂದರು. ಆಯಾ ಮಾಲಕರ ಬಳಿ ಇರುವ ಬೈಕ್ ಸಂಖ್ಯೆ ಮತ್ತು ಸಂಬಂಧಿಸಿದ ವಿವರವನ್ನು ಪೊಲೀಸ್ ಠಾಣೆಗೆ ನೀಡಬೇಕು
ಗೋಕರ್ಣ:
ಪ್ರವಾಸಿಗರಿಗೆ ಬಾಡಿಗೆ ಬೈಕ್ ನೀಡುವ ಮಾಲಕರ ಸಭೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಐ ವಸಂತ ಆಚಾರ್ ಮತ್ತು ಸಾರಿಗೆ ಇಲಾಖೆಯ ಎಆರ್‌ಟಿಒ ಎಲ್.ಪಿ. ನಾಯ್ಕ ನೇತೃತ್ವದಲ್ಲಿ ನಡೆಯಿತು.ನಿಗದಿ ದರ ಮತ್ತು ನಿಗದಿಪಡಿಸಿದ ಕಚೇರಿಯಲ್ಲಿ ಪ್ರವಾಸಿಗರಿಗೆ ಬಾಡಿಗೆ ಬೈಕ್ ನೀಡುವಂತೆ ಪಿಐ ವಸಂತ ಆಚಾರ್ ಬಾಡಿಗೆ ಬೈಕ್ ಹೊಂದಿದ ಮಾಲಕರಿಗೆ ಸೂಚಿಸಿದರು. ರಸ್ತೆ ಅಂಚಿನಲ್ಲಿ ವಾಹನ ನಿಲ್ಲಿಸಿ ಸಂಚಾರ ದಟ್ಟಣೆ ಉಂಟು ಮಾಡಬಾರದು, ಅವರವರ ಕಚೇರಿಯಲ್ಲಿ ಪ್ರವಾಸಿಗರಿಗೆ ಬೈಕ್ ನೀಡಬೇಕು ಎಂದರು. ನಿಯಮ ಉಲ್ಲಂಘಿಸಿದರೆ ಎರಡು ಇಲಾಖೆಯಿಂದ ಜಂಟಿಯಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.
ಎಆರ್‌ಟಿಒ ಎಲ್.ಪಿ. ನಾಯ್ಕ ಮಾತನಾಡಿ, ಬಾಡಿಗೆ ಬೈಕ್ ನೀಡುವವರು ಗ್ರಾಮ ಪಂಚಾಯಿತಿ ಪರವಾನಗಿಯೊಂದಿಗೆ ಬೆಂಗಳೂರು ಸಾರಿಗೆ ಆಯುಕ್ತರ ಅನುಮತಿ ಪಡೆದಿರಬೇಕು. ಮತ್ತೊಂದು ಶಾಖೆ ತೆಗೆಯುವುದಾರೆ ಇನ್ನೊಂದು ಪರವಾನಗಿ ಪಡೆಯುವುದು ಕಡ್ಡಾಯ. ಈ ರೀತಿ ಸೂಕ್ತ ದಾಖಲೆಗಳಿಲ್ಲದೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.ಹಲವು ಮಾಲಕರು ಅನಧಿಕೃತ ಬೈಕ್ ನೀಡುತ್ತಿರುವುದರಿಂದ ತಮಗಾಗುತ್ತಿರುವ ತೊಂದರೆ ವಿವರಿಸಿದರು. ಇದರಂತೆ ರಿಕ್ಷಾ ಚಾಲಕ, ಮಾಲಕರು ತಮ್ಮ ನಿಲ್ದಾಣದ ಬಳಿಯೇ ಬೈಕ್ ತಂದು ನೀಡುತ್ತಿದ್ದು, ನಮಗೆ ಬಾಡಿಗೆ ಇಲ್ಲದೆ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲು ತೊಡಿಕೊಂಡರು. ಇನ್ನು ಮುಂದೆ ಯಾರು ಮೇಲಿನಕೇರಿ ಅಥವಾ ಇನ್ನಾವುದೇ ರಸ್ತೆ ಅಂಚಿನಲ್ಲಿ ಬೈಕ್ ನೀಡುವಂತಿಲ್ಲ ಎಂದರು. ಆಯಾ ಮಾಲಕರ ಬಳಿ ಇರುವ ಬೈಕ್ ಸಂಖ್ಯೆ ಮತ್ತು ಸಂಬಂಧಿಸಿದ ವಿವರವನ್ನು ಪೊಲೀಸ್ ಠಾಣೆಗೆ ನೀಡುವಂತೆ ಸೂಚಿಸಿದರು.ಈ ವೇಳೆ ಪಿಎಸ್‌ಐ ರವೀಂದ್ರ ಬಿರಾದಾರ, ಸುಧಾ ಅಘನಾಶಿನಿ , ಪಿಡಿಒ ವಿನಯಕುಮಾರ, ಕಾರ್ಯದರ್ಶಿ ವಿನಾಯಕ ಸಿದ್ದಾಪುರ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗೋವಿಂದ ಮುಕ್ರಿ, ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಧ್ಯಕ್ಷ ಅನಂತ ಗೌಡ ಮತ್ತಿತರರು ಉಪಸ್ಥಿತರಿದ್ದರು.ಕ್ರಮಕೈಗೊಳ್ಳಿಈ ಹಿಂದೆ ಬಾಡಿಗೆ ಬೈಕ್ ನೀಡುವ ಪರವಾನಗಿ ಪಡೆಯುವಾಗ ಗ್ರಾಮ ಪಂಚಾಯಿತಿಯವರು ವಾಹನ ನಿಲುಗಡೆ ಸ್ಥಳ ಹಾಗೂ ಮತ್ತಿತರ ಕಾರಣ ನೀಡಿ ಹಲವು ಬಾರಿ ಮುಂದೂಡಿ ನಂತರ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಯಾವುದೇ ಪರಿಶೀಲನೆ ಇಲ್ಲದೆ ಕೊಡುವುದರಿಂದ ಎಲ್ಲೆಂದರಲ್ಲಿ ನಿಲ್ಲಿಸಿ ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂತು.