ಸಾಮರಸ್ಯ, ಸಮನ್ವಯತೆ ಸಾರಿದ ರೇಣುಕಾಚಾರ್ಯ

| Published : Mar 24 2024, 01:35 AM IST

ಸಾರಾಂಶ

ಧಾರ್ಮಿಕ ಜಾಗೃತಿಯ ಮೂಲಕ ವೈವಿಧ್ಯತೆಯಿಂದ ಕೂಡಿದ ನಾಡಿನ ಜನರಲ್ಲಿ ಶಾಂತಿ, ಸುವ್ಯವಸ್ಥೆ, ಸಾಮರಸ್ಯ ಮೂಡಿಸಲು ರೇಣುಕಾಚಾರ್ಯರು ಶ್ರಮಿಸಿದರು.

ಸಂಡೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತದಿಂದ ಜ.ರೇಣುಕಾಚಾರ್ಯರ ಜಯಂತಿಯನ್ನು ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಧಾರ್ಮಿಕ ಜಾಗೃತಿಯ ಮೂಲಕ ವೈವಿಧ್ಯತೆಯಿಂದ ಕೂಡಿದ ನಾಡಿನ ಜನರಲ್ಲಿ ಶಾಂತಿ, ಸುವ್ಯವಸ್ಥೆ, ಸಾಮರಸ್ಯ ಮೂಡಿಸಲು ರೇಣುಕಾಚಾರ್ಯರು ಶ್ರಮಿಸಿದರು. ಇಂತಹ ಮಹನೀಯರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತರುವ ಅಗತ್ಯವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಟಿ.ಎಂ. ಶಿವಕುಮಾರ್, ಜಗದ್ಗುರು ರೇಣುಕಾಚಾರ್ಯರ ಉಲ್ಲೇಖವನ್ನು ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿ ಕಾಣುತ್ತೇವೆ. ರೇಣುಕಾಚಾರ್ಯರು ಸರ್ವಧರ್ಮ ಸಾಮರಸ್ಯ, ಸಮನ್ವಯತೆಯನು ಸಾರಿದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಾತಿನಂತೆ ವಿಶ್ವ ಮಾನವ ತತ್ವವನ್ನು ಪ್ರತಿಪಾದಿಸಿದರು. ಸಮಾನತೆಯ ತತ್ವವನ್ನು ಬೋಧಿಸಿದರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ವಿವರಿಸಿದರು.ಶರಣಯ್ಯ ಹಾಗೂ ರವಿಸ್ವಾಮಿಯವರು ಪೂಜಾ ಕಾರ್ಯ ನೆರವೇರಿಸಿದರು. ಚರಂತಯ್ಯನವರು ಸ್ವಾಗತಿಸಿದರು. ಎ.ಎಂ. ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಶಿರಸ್ತೇದಾರ ಕೆ.ಎಂ. ಶಿವಕುಮಾರ್, ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಮುಖಂಡರಾದ ಎಂ.ವಿ. ಹಿರೇಮಠ, ಎಎಂಪಿ ಕೊಟ್ರೇಶ್, ಕೆ. ಎಂ. ವಿನಾಯಕ, ಎಚ್.ಎಂ. ಗುರುಬಸವರಾಜ, ಎಚ್.ಎಂ. ಗುರು, ನಾಗರಾಜ, ಅಂಬರೇಶಯ್ಯ, ವಿ.ಜೆ. ಶ್ರೀಪಾದಸ್ವಾಮಿ, ವಿ.ಎಂ. ಶರಣಯ್ಯ, ಎಂ. ಪ್ರಭಾಕರ್, ಕೊಟ್ರಯ್ಯಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ಸದಸ್ಯರಾದ ರೋಹಿಣಿ, ಶಾಂತಮ್ಮ, ಜೋತಿ ಉಪಸ್ಥಿತರಿದ್ದರು.