ಬಳ್ಳಾರಿ: ಭಕ್ತಿ, ನಿಷ್ಠೆ ಮತ್ತು ಸಮಾನತೆಯ ಸಂದೇಶವನ್ನು ಸಾರಿದ ಜಗದ್ಗುರು ರೇಣುಕಾಚಾರ್ಯರು ಶಿವನ ಆಜ್ಞೆಯಂತೆ ಭೂಲೋಕದಲ್ಲಿ ಅವತರಿಸಿ, ವೀರಶೈವಧರ್ಮದ ಪ್ರಸಾರವನ್ನು ಕೈಗೊಂಡು, ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಆಚಾರ್ಯರಾಗಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ. ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರಾಗಿದ್ದು, ಸಿದ್ಧಾಂತ ಶಿಖಾಮಣಿಯ ಮೂಲಕ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷಣೆಯೊಂದಿಗೆ ಲೋಕಸಂಚಾರ ಮಾಡಿದರು. ವೀರಶೈವರಿಗೆ ಇಷ್ಟಲಿಂಗ ಧಾರಣೆ ಮಹತ್ವ ಬೋಧಿಸಿ, ಸತ್ಪೃವೃತ್ತಿ ಮತ್ತು ಭಕ್ತಿಮಾರ್ಗ ಸಾರಿದರು. ಸಮಾಜದಲ್ಲಿ ಧಾರ್ಮಿಕ ಶಿಸ್ತು ಮತ್ತು ನೀತಿ ಮೌಲ್ಯಗಳ ಸ್ಥಾಪನೆ ಮಾಡಿದರು ಎಂದು ಹೇಳಿದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಚೆನ್ನವೀರ ಮಹಾಸ್ವಾಮಿಗಳು, ವೀರಶೈವ ಧರ್ಮವು ಭಗವಂತ ಮತ್ತು ಭಕ್ತನ ನಡುವೆ ನೇರ ಸಂಪರ್ಕವನ್ನು ಒದಗಿಸಿ, ಇಷ್ಟಲಿಂಗದ ಮಹತ್ವ ಸಾರಿದ ಮಹಾನ್ ಚೇತನ ರೇಣುಕಾಚಾರ್ಯರು. ವಿಜ್ಞಾನವಿಲ್ಲದ ಧರ್ಮ ಕುರುಡು; ಧರ್ಮವಿಲ್ಲದ ವಿಜ್ಞಾನ ಕುಂಟು. ವೀರಶೈವ ಧರ್ಮದಲ್ಲಿ ವಿಜ್ಞಾನವೂ ಇದೆ, ಆಚರಣೆಯೂ ಇದೆ ಎಂದು ಹೇಳಿದರು. ಪಂಚಗಣಾಧೀಶ್ವರರು ಪರಮಾತ್ಮನ ಆದೇಶದಂತೆ ಅವತರಿಸಿ ವೀರಶೈವ ಧರ್ಮವನ್ನು ಸ್ಥಾಪಿಸಿದರು. ಅಷ್ಟಾಕಿರಣ, ಪಂಚಾಚಾರ, ಷಟ್‌ಸ್ಥಳ ತತ್ವಗಳನ್ನು ಜಗದ್ಗುರು ಶ್ರೀ ರೇಣುಕಾಚಾರ್ಯರು ಜಗತ್ತಿಗೆ ಸಾರಿದರು ಎಂದು ತಿಳಿಸಿದರು. ವೀರಶೈವ ಸಮಾಜದ ಹಿರಿಯ ಮುಖಂಡ ಪಲ್ಲೇದ ಪಂಪಾಪತಿ ಮಾತನಾಡಿ, ಶ್ರೀ ರೇಣುಕಾಚಾರ್ಯರು ನಿರೂಪಿಸಿದ ಆಧ್ಯಾತ್ಮಕ ಕೃತಿ ಸಿದ್ಧಾಂತ ಶಿಖಾಮಣಿಯಲ್ಲಿ ಪಂಚಾಚಾರಗಳು, ಷಟ್‌ಸ್ಥಲ ತತ್ವ, ಇಷ್ಟಲಿಂಗ ಧಾರಣೆ ಮತ್ತು ಪೂಜೆ ವಿಧಾನ, ಗುರುಲಿಂಗ, ಜಂಗಮ ತ್ರಿವೇಣಿ ತತ್ವ ಹೊಂದಿದೆ. ಸಿದ್ಧಾಂತ ಶಿಖಾಮಣಿ ಕೃತಿಯು ಬರೀ ಭಕ್ತಿಗೆ ಸೀಮಿತವಲ್ಲ. ನೀತಿಶಾಸ್ತ್ರ, ಆಧ್ಯಾತ್ಮಿಕ ಶುದ್ಧತೆ ಮತ್ತು ಸಮಾಜ ಜೀವನದ ಮೌಲ್ಯಗಳನ್ನು ಸಹ ಬೋಧಿಸುತ್ತದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಿದ್ಧಾಂತ ಶಿಖಾಮಣಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಸಂಭ್ರಮದ ಮೆರವಣಿಗೆ: ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಭಾನುವಾರ ನಗರದಲ್ಲಿ ಭಕ್ತಿಭಾವದಿಂದ ಹಾಗೂ ಧಾರ್ಮಿಕ ವೈಭವದಿಂದ ನೆರವೇರಿತು.
ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತ- ರೈಲ್ವೆ ನಿಲ್ದಾಣ ರಸ್ತೆ- ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ- ಎಚ್.ಆರ್. ಗವಿಯಪ್ಪ ವೃತ್ತದ ಮೂಲಕ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವರೆಗೆ ತಲುಪಿ ಸಂಪನ್ನಗೊಂಡಿತು. ಬಳ್ಳಾರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ನಾಗಭೂಷಣಗೌಡ, ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ವೀರಶೈವ ಸಮಾಜದ ಮುಖಂಡರಾದ ಸಿರಿಗೇರಿ ಪನ್ನರಾಜ, ದರೂರು ಪುರುಷೋತ್ತಮಗೌಡ, ಬಿಸಿಲಹಳ್ಳಿ ಬಸವರಾಜ, ಶಾಂತನಗೌಡ ದರೂರು, ಚೋರನೂರು ಕೊಟ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಉಪಸ್ಥಿತರಿದ್ದರು.