ಸಾರಾಂಶ
ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಭೂಮಿ ಹುಣ್ಣಿಮೆ ನಿಮಿತ್ತ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ಸಂಭ್ರಮದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಭೂಮಿ ಹುಣ್ಣಿಮೆ ನಿಮಿತ್ತ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ಸಂಭ್ರಮದಿಂದ ಜರುಗಿತು. ದೇವಸ್ಥಾನದಿಂದ ವಾದ್ಯಮೇಳಗಳೊಂದಿಗೆ ಆರಂಭವಾದ ಪಲ್ಲಕ್ಕಿ ಉತ್ಸವ ಮಂಗಳಾರತಿ ಕಟ್ಟೆ, ಹರೀಶಿ ರಸ್ತೆ, ಮುಖ್ಯರಸ್ತೆ ಮೂಲಕ ರಥಬೀದಿ ಮಾರ್ಗವಾಗಿ ನಾಲ್ಕು ಕಾಲು ಮಂಟಪ ನಂತರ ದೇವಸ್ಥಾನ ತಲುಪಿತು. ಪಲ್ಲಕ್ಕಿ ಸಾಗುವ ಮಾರ್ಗದುದ್ದಕ್ಕೂ ಭಕ್ತರು ಭಕ್ತಿ ಸಮರ್ಪಿಸಿದರು. ಇನ್ನು ಭೂಮಿ ಹುಣ್ಣಿಮೆ ನಿಮಿತ್ತ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನಾಶೀರ್ವಾದ ಪಡೆದರು. ಕ್ಷೇತ್ರದ ಪರಿವಾರ ದೇವರಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ, ತ್ರಿಶೂಲ ಭೈರವದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ಪೂಜಾ ಕೈಂಕರ್ಯಗಳ ಸಮ್ಮುಖ ವಹಿಸಿದ್ದರು. ಉತ್ಸವಕ್ಕೆ ಸುತ್ತಲಿನ ಗ್ರಾಮಗಳ ರೈತಾಪಿ ಜನರು, ಭೂಮಿ ಹುಣ್ಣಿಮಿ ನಿಮಿತ್ತ ಭೂಮಿತಾಯಿಗೆ ಪೂಜೆ ಸಲ್ಲಿಸಿದರು. ತೆನೆಯೊಡೆದ ಬೆಳೆಗೆ ಪೂಜೆ ಸಲ್ಲಿಸಿ ಎಡೆ ಅರ್ಪಿಸುವ ಸಂಪ್ರದಾಯ ಮಲೆನಾಡು ಭಾಗದಲ್ಲಿದೆ.