ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಪವಿತ್ರಾಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಪಟ್ಟಣಗೆರೆ ಯಾರ್ಡ್‌ನಲ್ಲಿ ರೇಣುಕಾಸ್ವಾಮಿಗೆ ಕಾಲಿನಿಂದ ಒದ್ದು, ಕೈಯಿಂದ ಗುದ್ದಿ ಮನೆಗೆ ಮರಳಿದೆ. ಕೆಲ ಹೊತ್ತಿನ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎಂಬುದು ಗೊತ್ತಾಯಿತು. ನಾನು ಯಾರ್ಡ್‌ನಿಂದ ಬರುವಾಗ ಆತ ಚೆನ್ನಾಗಿಯೇ ಇದ್ದ’ ಎಂದು ನಟ ದರ್ಶನ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.ಅಲ್ಲದೆ ಪರಿಸ್ಥಿತಿ ನಿಭಾಯಿಸಲು ಪ್ರದೂಷ್ ಕೇಳಿದ್ದಕ್ಕೆ 30 ಲಕ್ಷ ರು. ಹಣ ಹಾಗೂ ವಿನಯ್‌ಗೆ 10 ಲಕ್ಷ ರು. ಹಣವನ್ನು ಮನೆಯಿಂದಲೇ ಕೊಟ್ಟಿದ್ದೇನೆ. ಈ ಹಣ ನನಗೆ ನಿರ್ಮಾಪಕರು ಕೊಟ್ಟಿದ್ದರು ಎಂದು ದರ್ಶನ್ ತಿಳಿಸಿದ್ದಾರೆ.
‘ನಿನಗೆ ಬರುವ 20 ಸಾವಿರ ರು. ಸಂಬಳದಲ್ಲಿ ಇವಳನ್ನು (ಪವಿತ್ರಾಗೌಡ) ಮೆಂಟೇನ್ ಮಾಡಲು ಸಾಧ್ಯನಾ? ಇದೆಲ್ಲ ನಿನಗೆ ಬೇಕಾ? ಇತರೆ ನಟಿಯರಿಗೂ ಮೆಸೇಜ್ ಮಾಡಿದ್ದೀಯಲ್ಲ’ ಎಂದು ಬೈದು ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾಗಿಯೂ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ದರ್ಶನ್‌ರವರ 8 ಪುಟಗಳ ತಪ್ಪೊಪ್ಪಿಗೆ ಹೇಳಿಕೆ ದಾಖಲಾಗಿದ್ದು, ಈ ಹೇಳಿಕೆ ಸೋಮವಾರ ಬಹಿರಂಗವಾಗಿ, ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ನಾನು ಹಲ್ಲೆ ನಡೆಸಿ ಶೆಡ್‌ನಿಂದ ತೆರಳಿದೆ. ಮರುದಿನ ಮೈಸೂರಿಗೆ ಹೋದ ಮೇಲೆ ರೇಣುಕಾಸ್ವಾಮಿಗೆ ಪವನ್, ಧನರಾಜ್ ಹಾಗೂ ನಂದೀಶ ಕರೆಂಟ್ ಶಾಕ್ ಕೊಟ್ಟಿದ್ದಲ್ಲದೆ ನೆಲಕ್ಕೆ ಕುಕ್ಕಿ ಹಲ್ಲೆ ಮಾಡಿದ ಸಂಗತಿ ಗೊತ್ತಾಯಿತು ಎಂದೂ ಅವರು ಹೇಳಿದ್ದಾರೆ.
ಕೊಲೆ ಪ್ರಕರಣದಲ್ಲಿ ನೀವು ನಿಶ್ಚಿಂತೆಯಿಂದ ಇರಿ ಎಂದು ನಾಗರಾಜ್ ಹಾಗೂ ಪ್ರದೂಷ್ ಹೇಳಿದ್ದರು. ಅಂದು ಶೆಡ್‌ಗೆ ತೆರಳುವ ಮುನ್ನ ನನ್ನೊಂದಿಗೆ ರೆಸ್ಟೋರೆಂಟ್‌ನಲ್ಲಿದ್ದ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯನನ್ನು ನಾನು ಮನೆಗೆ ಕಳುಹಿಸಿದ್ದೆ ಎಂದಿದ್ದಾರೆ.ತಪ್ಪೊಪ್ಪಿಗೆ ಹೇಳಿಕೆ ವಿವರ ಹೀಗಿದೆ:
- ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮತ್ತು ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದೇನೆ. 2021ರಲ್ಲಿ ನನ್ನ ವಿರುದ್ಧ ಪತ್ನಿ ವಿಜಯಲಕ್ಷ್ಮೀ ನೀಡಿದ್ದ ದೂರಿನ ಮೇರೆಗೆ ದಾಖಲಾಗಿದ್ದ ಪ್ರಕರಣ ಖುಲಾಸೆಯಾಗಿದೆ. ಹೊಸಕೆರೆಯಲ್ಲಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಜತೆ ವಾಸವಾಗಿದ್ದೇನೆ. ಮದುವೆಯಾಗಿ 22 ವರ್ಷಗಳಾಗಿದ್ದು, ಮೇ 19ಕ್ಕೆ ವಿವಾಹ ವಾರ್ಷಿಕೋತ್ಸವದ ಆಚರಣೆಗೆ ದುಬೈಗೆ ಹೋಗಿದ್ದೆವು. 10 ವರ್ಷಗಳಿಂದ ಪವಿತ್ರಾ ಜತೆ ಲಿವ್ ಇನ್ ರಿಲೇಷನ್ ಇದೆ.-ಎರಡು ಮನೆಗಳಲ್ಲಿ 8 ವರ್ಷಗಳಿಂದ ಪವನ್ ಕೆಲಸ ಮಾಡುತ್ತಿದ್ದ. ನಂದೀಶ್ ನನ್ನ ಅಭಿಮಾನಿಯಾಗಿದ್ದು, 15 ವರ್ಷಗಳಿಂದ ಲಕ್ಷ್ಮಣ್ ಕಾರು ಚಾಲಕರಾಗಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಪಟ್ಟಣಗೆರೆ ವಿನಯ್ ಸ್ನೇಹಿತರಾಗಿದ್ದು, ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಮೈಸೂರಿನಲ್ಲಿರುವ ನನ್ನ ಫಾರ್ಮ್ ಹೌಸ್ ಅನ್ನು ನಾಗರಾಜ್ ನೋಡಿಕೊಳ್ಳುತ್ತಿದ್ದ. ದೀಪಕ್ ಎಂಬಾತ ವಿನಯ್‌ಗೆ ಸ್ನೇಹಿತನಾಗಿದ್ದು, ಆತ ಸಹ ನನ್ನ ಅಭಿಮಾನಿಯಾಗಿದ್ದ. ಇನ್ನು ನನಗೆ 16 ವರ್ಷಗಳಿಂದ ಪ್ರದೂಷ್ ಪರಿಚಯವಿದೆ. ರಾಘವೇಂದ್ರ ನನ್ನ ಅಭಿಮಾನಿಗಳ ಸಂಘದ ಚಿತ್ರದುರ್ಗದ ಅಧ್ಯಕ್ಷನಾಗಿದ್ದ.
- ಜೂ.9ರಂದು ಶನಿವಾರ ಬೆಳಿಗ್ಗೆ ವರ್ಕ್ ಔಟ್ ಮುಗಿಸಿ ಮನೆಯಲ್ಲೇ ಇದ್ದೆ. ಆಗ ಮಧ್ಯಾಹ್ನ 12.30ರ ಸುಮಾರಿಗೆ ಪ್ರದೂಷ್ ಹಾಗೂ ನಾಗರಾಜ್ ಜತೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ತೆರಳಿದೆ. ಅಲ್ಲಿಗೆ ವಿನಯ್, ನಟರಾದ ಯಶಸ್ ಸೂರ್ಯ ಹಾಗೂ ಚಿಕ್ಕಣ್ಣ ಬಂದರು.- ಮಧ್ಯಾಹ್ನ ಸುಮಾರು 3 ಗಂಟೆಗೆ ಪವನ್ ನನ್ನ ಬಳಿ ಬಂದು ತನ್ನ ಮೊಬೈಲ್ ತೋರಿಸಿ ಯಾವನೋ ಒಬ್ಬ ‘Gautham s’ ಹೆಸರಿನ ಇನ್ಸ್ಟಾ ಖಾತೆಯಿಂದ ಪವಿತ್ರಕ್ಕನಿಗೆ ಸುಮಾರು ದಿನಗಳಿಂದ ಖಾಸಗಿ ಅಂಗಾಂಗಗಳ ಚಿತ್ರ ಕಳುಹಿಸುತ್ತಿದ್ದ. ನಿನ್ನ ರೇಟೆಷ್ಟು, ನಾನು ರೂಂ ಮಾಡುತ್ತೇನೆ. ನೀನು ಬಾ. ನಾನು ದರ್ಶನ್‌ಗಿಂತ ಚೆನ್ನಾಗಿದ್ದೇನೆ ಇತ್ಯಾದಿಯಾಗಿ ಮೆಸೇಜ್‌ಗಳನ್ನು ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ರಾಘವೇಂದ್ರ ಮತ್ತು ಆತನ ಸ್ನೇಹಿತರು ಕಿಡ್ನಾಪ್ ಮಾಡಿಕೊಂಡು ಬಂದು ಪಾರ್ಕಿಂಗ್ ಶೆಡ್‌ನಲ್ಲಿಟ್ಟಿದ್ದಾರೆ ಎಂದು ತಿಳಿಸಿದ.
- ಆಗ ನಾನು ಪವಿತ್ರಾಗೆ ಕಾಲ್ ಮಾಡಿ ಮಾತನಾಡಿ ಯಾರ್ಡ್‌ಗೆ ಹೋಗಿ ನಿನಗೆ ಮೆಸೇಜ್ ಮಾಡುತ್ತಿದ್ದವನನ್ನು ಸರಿಯಾಗಿ ವಿಚಾರಿಸಿಕೊಂಡು ಬರೋಣ ಎಂದು ಹೇಳಿದೆ. ಆಗ ಜೊತೆಯಲ್ಲಿದ್ದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯಗೆ ನೀವು ಮನೆಗೆ ಹೊರಡಿ ಎಂದು ಹೇಳಿ ಕಳುಹಿಸಿದೆ. ಬಳಿಕ ಪ್ರದೂಷ್‌ನ ಸ್ಕಾರ್ಪಿಯೋದಲ್ಲಿ ಪವಿತ್ರಾಳನ್ನು ಕರೆದುಕೊಂಡು ಯಾರ್ಡ್‌ಗೆ ತೆರಳಿದ್ದೆವು. ನಾನು ಕಾರಿನಿಂದಿಳಿದಾಗ ಪವನ್ ಬಂದು, ವಾಹನದ ಬಂಪರ್ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ ಆತನೇ ಪವಿತ್ರಕ್ಕನಿಗೆ ಮೆಸೇಜ್ ಮಾಡಿದ್ದು ಎಂದನು. ಅಲ್ಲಿ ರಘು, ದೀಪು, ನಂದೀಶ್ ಇದ್ದರು. ಅಷ್ಟರಲ್ಲಾಗಲೇ ಆತ ಆಯಾಸಗೊಂಡವನಂತೆ ಕಂಡ. ನಾನು ಬರುವ ಮೊದಲು ಆತನಿಗೆ ಹೊಡೆದಂತೆ ಕಂಡುಬಂತು.- ನಾನು ಆತನಿಗೆ ಮೆಸೇಜ್ ಕಳುಹಿಸಿರುವುದು ನೀನೇನಾ ಎಂದು ಕೇಳಿದೆ. ಅದಕ್ಕೆ ಹೌದು ನಾನೇ ಎಂದ. ಇದು ನಿನಗೆ ಬೇಕಾ? ನಿನ್ನ ಸಂಬಳ ಎಷ್ಟು ಎಂದೆ. 20 ಸಾವಿರ ರು. ಎಂದು ಹೇಳಿದ, ನಿನಗೆ ತಿಂಗಳಿಗೆ 20 ಸಾವಿರ ಸಂಬಳ. ನನ್ನ ಮಗನೇ ನೀನು ಇವಳನ್ನು ಮೆಂಟೇನ್ ಮಾಡಲು ಸಾಧ್ಯನಾ? ಈ ರೀತಿ ಕೆಟ್ಟದಾಗಿ ಮೆಸೇಜ್ ಮಾಡಿದ್ದೀಯಲ್ಲ ಎಂದಿದ್ದಕ್ಕೆ ಆತ ಏನೂ ಮಾತನಾಡಲಿಲ್ಲ. ಆಗ ನಾನು ಆತನಿಗೆ ಕೈಯಿಂದ ಹೊಡೆದು, ಕಾಲಿನಿಂದ ತಲೆ, ಎದೆಗೆ ಒದ್ದೆ. ಅಲ್ಲೇ ಮರದ ಕೊಂಬೆ ಕಿತ್ತು ಹೊಡೆದೆ. ಕೈನಿಂದ ಗುದ್ದಿದೆ. ಕಾರಿನಲ್ಲಿ ಕುಳಿತಿದ್ದ ಪವಿತ್ರಾಳನ್ನು ಕರೆಸಿದೆ. ನೋಡು ನೀನು ಮೆಸೇಜ್ ಮಾಡುತ್ತಿದ್ದಿದ್ದು ಇವಳಿಗೇ ಎಂದು ತೋರಿಸಿದೆ. ಆಗ ಚಪ್ಪಲಿಯಿಂದ ಪವಿತ್ರಾ ಹೊಡೆದಳು. ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೋರುವಂತೆ ಹೇಳಿದೆ. ಆತ ಕಾಲಿಗೆ ಬಿದ್ದಾಗ ಪವಿತ್ರಾ ಹಿಂದೆ ಸರಿದಳು. ನಂತರ ಆಕೆಯನ್ನು ಮನೆಗೆ ಕಳುಹಿಸಿದೆ. ಅಷ್ಟರಲ್ಲಿ ಅಲ್ಲಿಗೆ ಬಂದ ನನ್ನ ಕಾರು ಚಾಲಕ ಲಕ್ಷ್ಮಣ್ ಸಹ ರೇಣುಕಾಸ್ವಾಮಿಗೆ ಹೊಡೆದನು. ಆತನನ್ನು ಜೋರಾಗಿ ಎತ್ತಿ ಒಂದು ಬಾರಿ ನನ್ನ ಮುಂದೆಯೇ ನಂದೀಶ್ ಕುಕ್ಕಿದ. ನಾನು ಪವನ್‌ಗೆ ಇವನು ಇನ್ನೂ ಯಾರ್ಯಾರಿಗೆ ಈ ರೀತಿ ಕೆಟ್ಟ ಮೆಸೇಜ್‌ಗಳನ್ನು ಕಳುಹಿಸಿದ್ದಾನೆಂದು ನೋಡುವಂತೆ ಹೇಳಿದೆ. ಆಗ ಆತನ ಮೊಬೈಲ್ ತೆಗೆದುಕೊಂಡು ಇನ್ನೂ ಅನೇಕ ಚಲನಚಿತ್ರ ನಟಿಯರಿಗೂ ಸಹ ಪೋಟೋ ಕಳುಹಿಸಿ ಮೆಸೇಜ್ ಮಾಡಿರುವ ಬಗ್ಗೆ ಪವನ್ ತೋರಿಸಿದ. ಆಗ ನಾನು ಅವನಿಗೆ ಬೈದು ಕಾಲಿನಿಂದ ಒಂದೆರಡು ಬಾರಿ ಒದ್ದೆ.
- ವಿನಯ್ ಜತೆ ಜೀಪಿನಲ್ಲಿ ಮನೆಗೆ ಮರಳಿದೆ. ರಾತ್ರಿ 7.30ರಲ್ಲಿ ಪ್ರದೂಷ್ ಮನೆಗೆ ಬಂದು ರೇಣುಕಾಸ್ವಾಮಿ ಮೃತಟ್ಟಿರುವ ಸಂಗತಿ ತಿಳಿಸಿದ. ಆಗ ಏನಾಯ್ತು ಎಂದು ಕೇಳಿ, ನಾವು ಬರುವ ಸಮಯದಲ್ಲಿ ಆತ ಚೆನ್ನಾಗಿದ್ದ ಎಂದೆ. ಕೂಡಲೇ ಶೆಡ್‌ಗೆ ಮತ್ತೆ ಪ್ರದೂಷ್, ವಿನಯ್ ಹಾಗೂ ಲಕ್ಷ್ಮಣ್ ಹೋಗಿ ನೋಡಿದರು. ರಾತ್ರಿ 9 ಗಂಟೆಗೆ ಮತ್ತೆ ಪ್ರದೂಷ್ ಮನೆಗೆ ಬಂದು ರೇಣುಕಾಸ್ವಾಮಿ ಸಾವು ಖಚಿತಪಡಿಸಿದ. ಇದನ್ನು ನಾನು ಹ್ಯಾಂಡಲ್ ಮಾಡುತ್ತೇನೆ 30 ಲಕ್ಷ ರು. ಕೊಡುವಂತೆ ಪ್ರದೂಷ್ ಕೇಳಿದ. ನಾನು ಆತನಿಗೆ ಹಣ ಕೊಟ್ಟೆ. ಇದಾದ ನಂತರ ವಿನಯ್ ಬಂದು 10 ಲಕ್ಷ ರು. ಪಡೆದ. ಮರುದಿನ (ಭಾನುವಾರ) ನಾನು ಶೂಟಿಂಗ್ ಸಲುವಾಗಿ ಮೈಸೂರಿಗೆ ತೆರಳಿದೆ.- ನನಗೆ ಕರೆ ಮಾಡಿ ನೀವೇನೂ ಟೆನ್ಷನ್ ತಗೋಬೇಡಿ. ಕೆಲಸಕ್ಕೆ ಹೋಗಿ ಎಂದು ನಾಗರಾಜ ಹಾಗೂ ಪ್ರದೂಷ್ ಹೇಳಿದರು. ಅಂತೆಯೇ ನಾನು ಮೈಸೂರಿಗೆ ಹೋದೆ. ಇದಾದ ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ನಾನು ಮೈಸೂರಿನಲ್ಲಿ ಹೋಟೆಲ್‌ನಲ್ಲಿದ್ದಾಗ ಪ್ರದೂಷ್, ನಾಗರಾಜು ಹಾಗೂ ವಿನಯ್ ಭೇಟಿಯಾದರು. ಆಗ ನನಗೆ ರೇಣುಕಾಸ್ವಾಮಿಗೆ ಧನರಾಜ್ ಕರೆಂಟ್ ಶಾಕ್ ನೀಡಿದ್ದು ಹಾಗೂ ಪವನ್ ಹಲ್ಲೆ ಮಾಡಿದ್ದು, ನಂದೀಶನು ರೇಣುಕಾಸ್ವಾಮಿಯನ್ನು ಎತ್ತಿ ಕುಕ್ಕಿದ ಬಗ್ಗೆ ತಿಳಿಸಿದರು. ನಾವೇ ಯಾರಿಗಾದರೂ ಹಣ ನೀಡಿ, ಫಿಕ್ಸ್ ಮಾಡುತ್ತೇವೆ ಎಂದು ಹೇಳಿದರು. ಮರುದಿನ ಹೋಟೆಲ್‌ಗೆ ಬಂದು ಪೊಲೀಸರು ನನ್ನನ್ನು ಕರೆದುಕೊಂಡು ಬಂದರು.