ತರೀಕೆರೆಈಗಾಗಲೇ ಚಾಲನೆಯಲ್ಲಿದ್ದ ಭದ್ರಾ ಮೇಲ್ದಂಡೆ ಯೋಜನೆ ನಾಲೆಯ ನೀರಿನ ಪಂಪ್‌ ಹೌಸ್‌ಗೆ ಮತ್ತೆ ಚಾಲನೆ ನೀಡುವ ನಾಚಿಕೆಗೇಡಿನ ಕೆಲಸವನ್ನು ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾಡಿದ್ದು, ಇದು ಅಕ್ಷಮ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಈಗಾಗಲೇ ಚಾಲನೆಯಲ್ಲಿದ್ದ ಭದ್ರಾ ಮೇಲ್ದಂಡೆ ಯೋಜನೆ ನಾಲೆಯ ನೀರಿನ ಪಂಪ್‌ ಹೌಸ್‌ಗೆ ಮತ್ತೆ ಚಾಲನೆ ನೀಡುವ ನಾಚಿಕೆಗೇಡಿನ ಕೆಲಸವನ್ನು ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾಡಿದ್ದು, ಇದು ಅಕ್ಷಮ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರತಿನಿಧಿಗಳಾಗಿ ಜನರಿಂದ ಆಯ್ಕೆಯಾದ ಶಾಸಕರು ಯಾವುದೇ ಕಾಮಗಾರಿಗೆ ಚಾಲನೆ ನೀಡುವುದು ಅಥವಾ ಉದ್ಘಾಟಿಸುವುದು ನಮ್ಮ ಜವಾಬ್ದಾರಿ. ಮಾಜಿ ಶಾಸಕರು ಈ ರೀತಿ ಪಂಪ್ ಹೌಸ್‌ಗೆ ತೆರಳಿ ಗೇಟ್ ತೆರೆಸಿ ಪಂಪ್‌ ಹೌಸ್‌ಗೆ ಚಾಲನೆ ಮಾಡಿರುವುದು ಮಾಜಿ ಶಾಸಕರ ಸ್ಥಾನಮಾನಕ್ಕೆ ತಕ್ಕುದಲ್ಲ ಎಂದು ಕಿಡಿಕಾರಿದರು.ಸೆ.6 ರಂದು ಸಚಿವ ರಘುಮೂರ್ತಿ, ಶಾಸಕರಾದ ಗೋವಿಂದಪ್ಪ, ವೀರೇಂದ್ರ ಪಪ್ಪಿ, ಜಯಚಂದ್ರ ಹಾಗೂ ತಾವು ಲಕ್ಕವಳ್ಳಿ ಬಳಿ ನೀರು ಹರಿಸಿ, ಶಾಂತಿಪುರದಲ್ಲಿ ಪಂಪ್‌ಗೆ ಚಾಲನೆ ನೀಡಿದ್ದೇವೆ. ಪಂಪ್ ಈಗಾಗಲೇ ಚಾಲನೆಯಲ್ಲಿರುವಾಗ ಸೆ.7 ರಂದು ಮತ್ತೆ ಅಲ್ಲಿಗೆ ತೆರಳಿ ಪಂಪ್ ಚಾಲನೆ ಮಾಡಿರುವುದರ ಹಿಂದಿನ ಉದ್ದೇಶವೇನು? ಎಂದು ಮಾಜಿ ಶಾಸಕ ಸುರೇಶ್‌ ಅವರನ್ನು ಪ್ರಶ್ನಿಸಿದ್ದಾರೆ.ಇದು ರೈತರ ಮೇಲಿನ ಕಾಳಜಿಯಲ್ಲ. ರಾಜಕೀಯ ಪ್ರಚಾರದ ಹಪಾಹಪಿ ಎಂದು ಮಾಜಿ ಶಾಸಕರ ವಿರುದ್ಧ ಹರಿಹಾಯ್ದ ಶಾಸಕ ಶ್ರೀನಿವಾಸ್‌, ತಾವು ಜಾತಿ ರಾಜಕಾರಣ ಮಾಡುವುದಿಲ್ಲ ಎಂದರು.ಕಾಳಜಿ ಇದ್ದರೆ ರೈತರಿಗೆ ಅಧಿಕಾರಾವಧಿಯಲ್ಲಿ ಪರಿಹಾರ ಕೊಡಿಸುತ್ತಿದ್ದರು:ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಅಬ್ಬಿನಹೊಳಲು ರೈತರಿಗೆ ಪರಿಹಾರ ಕೊಡಿಸುವ ಸಂದರ್ಭದಲ್ಲಿ ಅನ್ಯಾಯ ವಾಗುತ್ತಿದ್ದಾಗ ಧ್ವನಿ ಎತ್ತಬೇಕಿತ್ತು. ಕೇವಲ ₹4 ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದಾಗ ರೈತರು ಒಪ್ಪದೆ ಧರಣಿ ನಡೆಸಿ ಕಾಮಗಾರಿಗೆ ಅವಕಾಶ ನೀಡಿರಲಿಲ್ಲ. ತಾವು ಶಾಸಕರಾದ ಬಳಿಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ₹35 ಲಕ್ಷ ಪರಿಹಾರ ಕೊಡಿಸಲಾಗಿದೆ. ಇದೀಗ ಕಾಮಗಾರಿ ಪೂರ್ಣಗೊಂಡು ನೀರು ಹರಿಯುತ್ತಿದೆ ಎಂದು ಶ್ರೀನಿವಾಸ್ ಹೇಳಿದರು.₹20 ಕೋಟಿ ಹೆಚ್ಚುವರಿ ಅನುದಾನ

ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಈ ಹಿಂದೆ ಅಳವಡಿಸಿದ್ದ ಪೈಪ್‌ನ ವ್ಯಾಸ ಕಡಿಮೆ ಯಾಗಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯುತ್ತಿರಲಿಲ್ಲ. ಈ ಸಮಸ್ಯೆ ಪರಿಹರಿಸಲು ತಮ್ಮ ಪ್ರಯತ್ನದಿಂದ ಸರ್ಕಾರದಿಂದ ಹೆಚ್ಚುವರಿಯಾಗಿ ₹20 ಕೋಟಿ ಅನುದಾನ ಮಂಜೂರು ಮಾಡಿಸಿ, ಪೈಪ್‌ನ ವ್ಯಾಸವನ್ನು ಒಂದೂವರೆ ಅಡಿ ಹೆಚ್ಚಿಸಿ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಭದ್ರಾ ಮೇಲ್ದಂಡೆ ಯೋಜನೆಗೆ ರೂಪ ನೀಡಿದ್ದು ಕಾಂಗ್ರೆಸ್ ಸರ್ಕಾರ. ಯೋಜನೆಗೆ ಅಗತ್ಯ ನೀರನ್ನು ಹಂಚಿಕೆ ಮಾಡಿದ್ದೂ ಕಾಂಗ್ರೆಸ್ ಸರ್ಕಾರವೇ. ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಸಂಕಲ್ಪ ದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ತಾವು ನಿರಂತರ ಪ್ರಯತ್ನಿಸುತ್ತಿದ್ದೇನೆ ಎಂದರು.ಯೋಜನೆಯಡಿ ಡ್ರಿಪ್ ಇರಿಗೇಶನ್, ಕಿರು ನೀರಾವರಿ ಯೋಜನೆಗಳಿಗೆ ಸರ್ಕಾರದ ಅನುಮತಿ ಹಾಗೂ ಅಗತ್ಯ ಅನುದಾನ ಮಂಜೂರು ಮಾಡಿಸುವಲ್ಲಿಯೂ ತಮ್ಮ ಪ್ರಯತ್ನವಿದೆ ಎಂದು ಶ್ರೀನಿವಾಸ್‌ ಹೇಳಿದರು.124 ಕೆರೆಗಳಿಗೆ ನೀರು:ಭದ್ರಾ ಮೇಲ್ದಂಡೆ ಯೋಜನೆಯಡಿ ಎಲ್‌ಐಎಸ್-02ರಲ್ಲಿ 20 ಕೆರೆಗಳು, ಟಿಎಲ್‌ಐ-1ರಲ್ಲಿ 60 ಕೆರೆಗಳು ಹಾಗೂ ಭದ್ರಾ ಉಪಕಣಿವೆ ಯೋಜನೆಯಡಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಒಟ್ಟು 124 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ. ಈ ಕುರಿತು ಹಿಂದೆಯೇ ಜನರಿಗೆ ತಿಳಿಸಲಾಗಿದೆ. ಅದರಂತೆ ಎಲ್ಲ ಕೆರೆಗಳಿಗೂ ನೀರು ಪೂರೈಸುವ ಕಾರ್ಯ ಮುಂದುವರಿದಿದೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು.ಕೆಡಿಪಿ ಸದಸ್ಯ ಮೆಹಬೂಬ್ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ತಾಲೂಕು ಪಂಚಾ ಯಿತಿ ಮಾಜಿ ಅಧ್ಯಕ್ಷ ರವಿ, ಮಾಜಿ ಸದಸ್ಯ ಅಸ್ಲಾಂಖಾನ್, ಸೇವಾದಳ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಜಗದೀಶ್, ಮುಖಂಡರಾದ ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.ಫೋಟೋ

ತರೀಕೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ರವಿ, ಅಸ್ಲಾಂಖಾನ್, ಮೆಹಬೂಬ್, ಜಗದೀಶ್, ಮಲ್ಲಿಕಾರ್ಜುನ್ ಇದ್ದರು.