ಶೃಂಗೇರಿ: ಹುಲುಗಾರು ಕಿಗ್ಗಾ ಸಂಪರ್ಕ ರಸ್ತೆ ಸರಿಪಡಿಸಿ

| Published : Apr 19 2024, 01:07 AM IST

ಸಾರಾಂಶ

ತಾಲೂಕಿನ ಮರ್ಕಲ್‌ ಪಂಚಾಯಿತಿ ವ್ಯಾಪ್ತಿಯ ಹುಲುಗಾರು ಕಿಗ್ಗಾ ಸಂಪರ್ಕ ರಸ್ತೆ ದಶಕಗಳಿಂದ ಡಾಂಬಾರು ಕಾಣದೇ ಹೊಂಡಗುಂಡಿಗಳ ಸಾಮ್ರಾಜ್ಯವಾಗಿದೆ. ಜಲ್ಲಿಕಲ್ಲಿಗಳು ಕಿತ್ತುಬಂದಿವೆ.ರಸ್ತೆಯ ಮೇಲೆ ಹುಲ್ಲು, ಗಿಡಗಂಟಿಗಳು ಬೆಳೆದಿವೆ. ರಸ್ತೆ ಯಾವುದು ಚರಂಡಿ ಯಾವುದು ಎಂಬ ಗೊಂದಲ ನಿತ್ಯ ಸಂಚಾರಿಗಳ ಪಾಲಿಗೆ ಶಾಪವಾಗಿದೆ.

ದಶಕಗಳಿಂದ ಈ ರಸ್ತೆಗೆ ಡಾಂಬಾರು ಭಾಗ್ಯವಿಲ್ಲ ।

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನ ಮರ್ಕಲ್‌ ಪಂಚಾಯಿತಿ ವ್ಯಾಪ್ತಿಯ ಹುಲುಗಾರು ಕಿಗ್ಗಾ ಸಂಪರ್ಕ ರಸ್ತೆ ದಶಕಗಳಿಂದ ಡಾಂಬಾರು ಕಾಣದೇ ಹೊಂಡಗುಂಡಿಗಳ ಸಾಮ್ರಾಜ್ಯವಾಗಿದೆ. ಜಲ್ಲಿಕಲ್ಲಿಗಳು ಕಿತ್ತುಬಂದಿವೆ.ರಸ್ತೆಯ ಮೇಲೆ ಹುಲ್ಲು, ಗಿಡಗಂಟಿಗಳು ಬೆಳೆದಿವೆ. ರಸ್ತೆ ಯಾವುದು ಚರಂಡಿ ಯಾವುದು ಎಂಬ ಗೊಂದಲ ನಿತ್ಯ ಸಂಚಾರಿಗಳ ಪಾಲಿಗೆ ಶಾಪವಾಗಿದೆ.

ದಶಕಗಳಿಂದ ಈ ರಸ್ತೆಗೆ ಡಾಂಬಾರು ಭಾಗ್ಯವಿಲ್ಲ. ಕಿತ್ತೆದ್ದು ಹೋಗಿರುವ ಜಲ್ಲಿಕಲ್ಲುಗಳು, ಹೊಂಡಗುಂಡಿಗಳ ಮೇಲೆಯೇ ನಿತ್ಯ ಸಂಚಾರ ಮಾಡಬೇಕಿದೆ. ಈ ರಸ್ತೆ ಈ ಭಾಗದ ಮುಖ್ಯರಸ್ತೆಯಾಗಿದ್ದು ಯಡದಾಳು, ಹುುಗಾರು, ಸಣ್ಣ ಮೂಡ್ಲು, ದೊಡ್ಡಮೂಡ್ಲು, ತೊರಣಗೆದ್ದೆ, ಹೆಕ್ತೂರು, ಯಡದಳ್ಳಿ, ಕಿಗ್ಗಾ, ದೋಣೂರು, ಕೆಲ್ಲಾರು ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರಸಿದ್ಧ ಪ್ರವಾಸಿ ತಾಣ ಸಿರಿಮನೆ ಜಲಪಾತ, ಮಳೆ ದೇವರು ಶ್ರೀ ಋಷ್ಯಶೃಂಗೇಶ್ವರ ದೇವಾಲಯಕ್ಕೆ ಇದೇ ಮಾರ್ಗದ ಮೂಲಕ ಹೋಗಬೇಕು. ಈ ಮಾರ್ಗದಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ವಿವಿಧ ಭಾಗಗಳಿಂದ ಪ್ರವಾಸಿಗರು ಸಂಚರಿಸುತ್ತಾರೆ. ಮುಖ್ಯ ರಸ್ತೆಯಾಗಿದ್ದರೂ ಕೂಡ ದಶಕಗಳಿಂದ ಡಾಂಬಾರು ಕಾಣದೆ ನಿರ್ಲಕ್ಷಕ್ಕೊಳಗಾಗುತ್ತಾ ಬಂದಿದೆ.

ಮಳೆಗಾಲದಲ್ಲಿ ಮಳೆ ನೀರು ಹೊಂಡಗುಂಡಗಳಲ್ಲಿ ತುಂಬುವುದರಿಂದ ರಸ್ತೆ ಪಕ್ಕದ ನೀರು ರಸ್ತೆಯ ಮೇಲೆ ಹರಿಯು ವುದರಿಂದ ರಸ್ತೆಯೆಲ್ಲ ಚರಂಡಿಯಾಗುತ್ತದೆ. ಈ ರಸ್ತೆಯ ಮೇಲೆ ಸಂಚರಿಸುವುದೇ ಕಷ್ಟವಾಗುತ್ತದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿಗಳು ಇತ್ತ ಗಮನ ಹರಿಸಬೇಕಿದೆ.

-- ಕೋಟ್‌--ಮನವಿಗಳಿಗೆ ಬೆಲೆಯೇ ಇಲ್ಲ:

ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿಗಳ ಗಮನಕ್ಕೆ ತಂದರೆ ಸ್ಪಂದನೆಯೇ ಇಲ್ಲವಾಗಿದೆ. ಈ ಮಾರ್ಗದಲ್ಲಿ ಖಾಸಗಿ ವಾಹನಗಳು ಬರಲು ಹಿಂದೇಟು ಹಾಕುತ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ಈ ಕಿತ್ತಿರುವ ರಸ್ತೆಯ ಮೇಲೆ ಓಡಾಡಬೇಕು.

-ಶಿವರಾಮ್‌, ಗ್ರಾಮಸ್ಥ

ಇನ್ನಾದರೂ ರಸ್ತೆ ಸರಿಪಡಿಸಿ. ಡಾಂಬರೇ ಇಲ್ಲದ ರಸ್ತೆಯನ್ನು ಡಾಂಬಾರೀಕರಣಗೊಳಿಸಿದರೆ ವಾಹನ ಸಂಚಾರಕ್ಕೆ ಸುಗಮವಾಗುತ್ತದೆ. ಜನರಿಗೂ ಅನುಕೂಲವಾಗುತ್ತದೆ. ಸರ್ಕಾರ, ಸಂಬಂಧಪಟ್ಟ ಇಲಾಖೆ ಕೂಡಲೇ ಈ ರಸ್ತೆ ಕಾಯಕಲ್ಪ ನೀಡಬೇಕು.

-ಪ್ರಕಾಶ್‌ .ಗ್ರಾಮಸ್ಥ,

18 ಶ್ರೀ ಚಿತ್ರ 2-ಶೃಂಗೇರಿ ತಾಲೂಕಿನ ಹುಲುಗಾರು ಕಿಗ್ಗಾ ಸಂಪರ್ಕ ರಸ್ತೆ ಹೊಂಡಗುಂಡಿಗಳಿಂದ ಹದಗೆಟ್ಟಿರುವುದು.