ದರ್ಗಾದಲ್ಲಿ ದುರಸ್ತಿ ಕಾರ್ಯ: ಹಿಂದೂ ಸಂಘಟನೆಗಳಿಂದ ವಿರೋಧ

| Published : Jan 07 2025, 12:16 AM IST

ಸಾರಾಂಶ

ಚಿಕ್ಕಮಗಳೂರು, ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ದರ್ಗಾದಲ್ಲಿ ಟೈಲ್ಸ್ ಅಳವಡಿಕೆ ಕಾರ್ಯ ಆರಂಭಗೊಳ್ಳುತ್ತಿದ್ದಂತೆ ಎರಡೂ ಕೋಮುಗಳ ನಡುವೆ ವಿವಾದ ಆರಂಭಗೊಂಡಿದೆ.

ಗೋರಿಗಳಿರುವ ಪ್ರದೇಶದಲ್ಲಿ ಟೈಲ್ಸ್ ಅಳವಡಿಕೆ । ಕೋಟೆ ಆಂಜನೇಯ ದೇಗುಲ ಎದುರು ಭಜನೆ ನಡೆಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ದರ್ಗಾದಲ್ಲಿ ಟೈಲ್ಸ್ ಅಳವಡಿಕೆ ಕಾರ್ಯ ಆರಂಭಗೊಳ್ಳುತ್ತಿದ್ದಂತೆ ಎರಡೂ ಕೋಮುಗಳ ನಡುವೆ ವಿವಾದ ಆರಂಭಗೊಂಡಿದೆ.

ದಾಖಲೆಗಳ ಪ್ರಕಾರ ದರ್ಗಾ ಎಂದು ಇರುವ ಹಿನ್ನೆಲೆಯಲ್ಲಿ ಸದರಿ ಸ್ಥಳದಲ್ಲಿರುವ ಗೋರಿಗಳಿರುವ ಪ್ರದೇಶದಲ್ಲಿ ಟೈಲ್ಸ್ ಅಳವಡಿಕೆ ಕಾರ್ಯ ಆರಂಭಿಸಲಾಗಿತ್ತು. ಇದಕ್ಕೆ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಟೈಲ್ಸ್ ಅಳವಡಿಕೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿವಾದಿತ ಜಾಗ ದರ್ಗಾಕ್ಕೆ ಸೇರಿಲ್ಲ. ಸುಳ್ಳು ದಾಖಲೆ ಸೃಷ್ಠಿ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವಿವಾದಿತ ಸ್ಥಳಕ್ಕೆ ಸಮೀಪದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ಭಜನೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳಕ್ಕೆ ತೆರಳಿದ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಇಲ್ಲಿ ಯಾವುದೇ ದರ್ಗಾ ಇರಲಿಲ್ಲ. ಆದರೆ ಸುಳ್ಳು ದಾಖಲೆ ಸೃಷ್ಠಿ ಮಾಡಿ ದರ್ಗಾ ಇದೆ ಎಂದು ಹೇಳುತ್ತಿದ್ದಾರೆ. ಆದರೆ ನಮಗೆ ಮೂಲ ದಾಖಲೆ ಹುಡುಕಲು ಸಮಯಾವಕಾಶ ನೀಡಬೇಕು. ಅಲ್ಲಿಯವರೆಗೆ ಸರ್ಕಾರ ಟೈಲ್ಸ್ ಅಳವಡಿಕೆ ಕಾರ್ಯ ನಿಲ್ಲಿಸುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿ ಮೀನಾ ನಾಗರಾಜ್, ವಿವಾದಿತ ಸ್ಥಳಕ್ಕೆ ಸಂಬಂಧಿಸಿದಂತೆ ಹಳೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದೇವೆ. ದಾಖಲೆಗಳಲ್ಲಿ ಗೋರಿಗಳಿರುವ ಬಗ್ಗೆ ಮಾಹಿತಿಯಿದೆ. ಈ ಹಿಂದೆ ನಗರಸಭೆಯಿಂದ ಸದರಿ ಸ್ಥಳಕ್ಕೆ ಸಂಬಂಧಿಸಿದಂತೆ ಇ ಸ್ವತ್ತು ಮಾಡಿಕೊಡಲಾಗಿದೆ. ಹೊಸ ಕಾಮಗಾರಿ ನಡೆಸಲು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಆದರೆ ಟೈಲ್ಸ್ ಅಳವಡಿಕೆ ಮಾಡಲು ಯಾವುದೇ ಅನುಮತಿ ಬೇಕಾಗಿಲ್ಲ. ಹೀಗಾಗಿ ಟೈಲ್ಸ್ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದರು.

ದರ್ಗಾದ ಬಳಿ ಬೆಳಿಗ್ಗೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಈ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕ ಲಾಗಿತ್ತು. ಇದೇ ರಸ್ತೆಯಿಂದ ಸ್ಮಶಾನಕ್ಕೆ ಮೃತ ದೇಹ ತೆಗೆದುಕೊಂಡು ಹೋಗಲು ಪೊಲೀಸರು ಬಿಡಲಿಲ್ಲ. ಬೇರೆ ರಸ್ತೆಯಲ್ಲಿ ಹೋಗುವಂತೆ ಹೇಳಿದಾಗ ಸ್ಥಳದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ನಂತರದಲ್ಲಿ ಬೇರೆ ರಸ್ತೆಯಲ್ಲಿ ಹೆಣ ತೆಗೆದುಕೊಂಡು ಹೋಗಲಾಯಿತು. 6 ಕೆಸಿಕೆಎಂ 3ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿರುವ ದರ್ಗಾ ಜಾಗದಲ್ಲಿ ದುರಸ್ತಿ ಕಾರ್ಯ ನಡೆಯುವ ವೇಳೆಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ ಹಿನ್ನಲೆಯಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.