ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ 56ಕ್ಕೆ ಹೆಚ್ಚಿಸಿದ್ದ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟದ ನಿರ್ಣಯದಂತೆ ಸುಪ್ರೀಂ ಕೋರ್ಟ್‌ನಲ್ಲಿ ತಕ್ಷಣವೇ ಮೇಲ್ಮನವಿ ಅರ್ಜಿ ದಾಖಲಿಸುವಂತೆ ಎಸ್‌ಟಿ ಸಮುದಾಯದ ಹಿರಿಯ ನಾಯಕ, ಕಾಂಗ್ರೆಸ್‌ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.

ದಾವಣಗೆರೆ: ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ 56ಕ್ಕೆ ಹೆಚ್ಚಿಸಿದ್ದ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟದ ನಿರ್ಣಯದಂತೆ ಸುಪ್ರೀಂ ಕೋರ್ಟ್‌ನಲ್ಲಿ ತಕ್ಷಣವೇ ಮೇಲ್ಮನವಿ ಅರ್ಜಿ ದಾಖಲಿಸುವಂತೆ ಎಸ್‌ಟಿ ಸಮುದಾಯದ ಹಿರಿಯ ನಾಯಕ, ಕಾಂಗ್ರೆಸ್‌ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಕರಾಳ ಅಧ್ಯಾಯ ಪ್ರಾರಂಭವಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಯನ್ನು ಹೈಕೋರ್ಟ್ ತಿರಸ್ಕರಿಸಿದ ಹಿನ್ನೆಲೆ ರಾಜ್ಯ ಸರ್ಕಾರ ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ದಾಖಲಿಸಬೇಕು ಎಂದರು.

ಮೀಸಲಾತಿ ವಿಚಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ಇದನ್ನು 9ನೇ ಷೆಡ್ಯೂಲ್‌ಗೆ ಸೇರಿಸುವಂತೆ ಸರ್ವಪಕ್ಷಗಳ ಸಭೆ ಮಾಡಿ, ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಬೇಕು. ನಮ್ಮ ರಾಜ್ಯದಲ್ಲಿ ಸುಮಾರು 2 ಸಾವಿರ ಒಬಿಸಿ ಜಾತಿಗಳಿವೆ. ಎಸ್‌ಸಿ 101 ಜಾತಿ, ಎಸ್‌ಟಿ 57 ಜಾತಿಗಳಿವೆ. 4.5 ಕೋಟಿಗೂ ಅಧಿಕ ಪರಿಶಿಷ್ಟರು, ಹಿಂದುಳಿದ ವರ್ಗದವರು ರಾಜ್ಯದಲ್ಲಿದ್ದಾರೆ ಎಂದು ಹೇಳಿದರು.

ನಾವು 1991ರಿಂದಲೂ ಮೀಸಲಾತಿಗಾಗಿ ಅವಿರತ ಹೋರಾಡುತ್ತ ಬಂದಿದ್ದೇವೆ. 2022ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಎಸ್‌ಟಿಗೆ ಶೇ.3ರಿಂದ 7, ಎಸ್‌ಸಿಗೆ ಶೇ.15ರಿಂದ 17ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದರು. ಪಕ್ಷಾತೀತವಾಗಿ, ಒಮ್ಮತದಿಂದ ಈ ಕಾನೂನು ಮಾಡಿದ್ದರು. ಬೊಮ್ಮಾಯಿ 9ನೇ ಷೆಡ್ಯೂಲ್‌ಗೆ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಪಟ್ಟಭದ್ರ ಹಿತಾಸಕ್ತಿಗಳು ಹಾಕಿದ ಅರ್ಜಿಯಿಂದ ಹೈಕೋರ್ಟ್ ಅದನ್ನು ಹೆಚ್ಚಿಸಿದ ಮೀಸಲಾತಿಯನ್ನು ಸ್ಕ್ಯಾಶ್ ಮಾಡಿದೆ ಎಂದು ಉಗ್ರಪ್ಪ ದೂರಿದರು.

ಆರ್ಟಿಕಲ್ 342 ಎ ತಿದ್ದುಪಡಿ ಮೂಲಕ ಯಾವುದೇ ಹಿನ್ನೆಲೆ ಅಥ‍ವಾ ಅಧ್ಯಯನವಿಲ್ಲದೇ ಶೇ.10ರಷ್ಟು ಇಡಬ್ಲ್ಯುಎಸ್ ಮೀಸಲಾತಿ ನೀಡಿ, ಒಟ್ಟು ಮೀಸಲಾತಿಯನ್ನು ಶೇ.60ಕ್ಕೆ ಹೆಚ್ಚಿಸಿದಾಗ ಸುಪ್ರೀಂ ಕೋರ್ಟ್ ಅದನ್ನು ಎತ್ತಿ ಹಿಡಿದಿತ್ತು. ಆದರೆ, ಪರಿಶಿಷ್ಟರು, ಒಬಿಸಿಗೆ ಶೇ.6ರಷ್ಟು ಹೆಚ್ಚಿಸಿದ್ದಕ್ಕೆ ರದ್ದುಪಡಿಸಿದ್ದು ಶೋಷಿತ ವರ್ಗಗಳ ಬದುಕಿಗೆ ಮತ್ತು ಆ ವರ್ಗಗಳ ಮಕ್ಕಳ ಭವಿಷ್ಯಕ್ಕೆ ಮಾಡಿದ ಅನ್ಯಾಯವಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಯನ್ನು ಸಂವಿಧಾನದ 9ನೇ ಅನುಚ್ಛೇದ ತಿದ್ದುಪಡಿ ಮಾಡಿ, ಸಂವಿಧಾನದ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರನ್ನು ಅವರು ಒತ್ತಾಯಿಸಿದರು.

ಮುಖಂಡರಾದ ಎಂ.ನರಸಿಂಹಯ್ಯ, ಹುಲ್ಮನಿ ಗಣೇಶ, ಹನುಮಂತರಾಯಪ್ಪ, ಬಾತಿ ಹನುಮಂತ, ಹುಚ್ಚವ್ವನಹಳ್ಳಿ ಮಂಜುನಾಥ, ಪ್ರಕಾಶ, ಅಣ್ಣಪ್ಪ, ತಿಪ್ಪೇಸ್ವಾಮಿ ಇತರರು ಇದ್ದರು.

- - -

-30ಕೆಡಿವಿಜಿ4: