ಸಮಾಜದಲ್ಲಿ ಜಾತಿ-ಮತ ಬೇಧ, ಮೇಲು-ಕೀಳು ಎಂಬ ಭಾವನೆಗಳನ್ನು ಬಿದಿಗಿಟ್ಟು ಎಲ್ಲರೂ ಪರಸ್ಪರ ಸಹಬಾಳ್ವೆ ನಡೆಸಬೇಕು. ಆಗ ಮಾತ್ರ ಸಮಾಜದಲ್ಲಿ ಸಾಮರಸ್ಯ ವಾತಾವರಣ ಕಾಣಬಹುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
- ತಿಮ್ಮೇನಹಳ್ಳಿಯಲ್ಲಿ ವಾಲ್ಮಿಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರಸನ್ನಾನಂದ ಶ್ರೀ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಮಾಜದಲ್ಲಿ ಜಾತಿ-ಮತ ಬೇಧ, ಮೇಲು-ಕೀಳು ಎಂಬ ಭಾವನೆಗಳನ್ನು ಬಿದಿಗಿಟ್ಟು ಎಲ್ಲರೂ ಪರಸ್ಪರ ಸಹಬಾಳ್ವೆ ನಡೆಸಬೇಕು. ಆಗ ಮಾತ್ರ ಸಮಾಜದಲ್ಲಿ ಸಾಮರಸ್ಯ ವಾತಾವರಣ ಕಾಣಬಹುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.ತಾಲೂಕಿನ ತಿಮ್ಮೇನಹಳ್ಳಿಯಲ್ಲಿ ಬುಧವಾರ ನಾಯಕ ಸಮಾಜ, ಗ್ರಾಮಸ್ಥರು ಸೇರಿ ಹಮ್ಮಿಕೊಂಡಿದ್ದ ಶ್ರೀ ವಾಲ್ಮಿಕಿ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಸವಣ್ಣ, ಕನಕದಾಸರು, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನೀಯರ ಜಯಂತಿ ಕಾರ್ಯಕ್ರಮಗಳನ್ನು ಆಯಾಯ ಜಾತಿಗಳಿಗೆ ಸೀಮಿತಗೊಳಿಸಿ ಅವರನ್ನ ಜಾತಿಗಳ ಚೌಕಟ್ಟಿನಲ್ಲಿಟ್ಟು ಆಚರಿಸುವಂತಾಗಿರುವುದು ಸಲ್ಲದು ಎಂದರು.
ಮಹರ್ಷಿ ವಾಲ್ಮೀಕಿ ತಮ್ಮ ರಾಮಾಯಣ ಗ್ರಂಥದಲ್ಲಿ ಅಧಿಕಾರ, ಆಸ್ತಿಗಳು, ಅಣ್ಣ ತಮ್ಮಂದಿರ ತ್ಯಾಗದ ಕಥಾನಕವಾಗಿದ್ದು, ವಾಲ್ಮೀಕಿ ಅವರ ಈ ಗ್ರಂಥ ಇಡೀ ಮನುಕುಲಕ್ಕೆ ದಾರಿದೀಪವಾಗಿದೆ. ಈ ಹಿಂದೆ ನಾಯಕ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ವಿಚಾರದಲ್ಲಿ ನ್ಯಾಯಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 257 ದಿನಗಳ ಕಾಲ ಧರಣಿ ಮಾಡಲಾಗಿತ್ತು ಎಂದು ತಿಳಿಸಿದರು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಮಾಹಸ್ವಾಮಿಜಿಗಳು ಆಶೀರ್ವಚನ ನೀಡಿದರು. ಕನಕರು ಮತ್ತು ವಾಲ್ಮೀಕಿಯವರು ಕೇವಲ ಒಂದು ಜಾತಿಗೆ ಸೀಮೀತರಾದವರಲ್ಲ. ಅವರು ಎಲ್ಲ ಸಮುದಾಯಗಳಿಗೆ ಜ್ಞಾನ ಮತ್ತು ಸಂಸ್ಕಾರಗಳನ್ನು ನೀಡಿದ ಪುಣ್ಯಪುರುಷರು. ಹಿಂದುಳಿದ ಜನ ಸಮುದಾಯಗಳು ಒಗ್ಗಟ್ಟಾಗಬೇಕಾದರೆ ರಾಜ್ಯದಲ್ಲಿ ಕುರುಬ ಮತ್ತು ನಾಯಕ ಸಮುದಾಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಿ.ರಾಮುಲು ಮಾತನಾಡಿ, ಹಿಂದುಳಿದ ಜನ ಸಮುದಾಯಗಳು ಸಾಮಾಜಿಕ ಸವಾಲುಗಳು, ಶೈಕ್ಷಣಿಕ, ರಾಜಕೀಯ ಆರ್ಥಿಕ ಸಬಲತೆ ಗಳಿಸಬೇಕಾದರೆ ಬಹುಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ವಿವಿಧ ರಂಗಗಳಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಹಿಂದುಳಿದ ಮತ್ತು ಶೋಷಿತ ವರ್ಗಗಳನ್ನು ಒಂದಾಗಬೇಕು ಎಂದರು.
ಜಿ.ಪಂ. ಮಾಜಿ ಸದಸ್ಯ ಹಾಗೂ ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ತಮ್ಮ ದೊಡ್ಡಪ್ಪ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ನಾಯಕ ಜನಾಂಗದವರನ್ನು ಉದ್ದೇಶಿಸಿ ಮಾತನಾಡಿ, ನೀವು ಹುಟ್ಟುತ್ತಲೇ ನಾಯಕರು, ಆದರೆ ನಾವು ಬೆಳೆಯುತ್ತಾ ನಾಯಕರು ಎಂದು ಹಾಸ್ಯ ಚಟಾಕಿ ಸಿಡಿಸಿದ್ದರು ಎಂದು ಸ್ಮರಿಸಿದರು.ಅಧ್ಯಕ್ಷತೆ ವಹಿಸಿದ್ದ ಎಸ್ಟಿ ಮೋರ್ಚಾ ರಾಜ್ಯಾ ಉಪಾಧ್ಯಕ್ಷ ಶ್ರಿನಿವಾಸ್ ದಾಸಕರಿಯಪ್ಪ, ಎಂ.ಪಿ.ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಾಯಕ ಸಮಾಜದ ಅಧ್ಯಕ್ಷ ಕುಳಗಟ್ಟೆ ಹನುಮಂತಪ್ಪ, ಎಂ.ಬಿ. ಹಾಲಪ್ಪ ಮಾಯಾಕರ್, ಗಂಗಾಧರ್, ಹನುಮಂತಪ್ಪ, ಮುಖಂಡ ಚಂದಪ್ಪ, ಡಿಎಸ್. ಸುರೇಂದ್ರಗೌಡ, ಹದಡಿ ಹಾಲಪ್ಪ, ವಕೀಲ ಹಾಲೇಶಪ್ಪ,ಕೆ.ರಂಗಪ್ಪ, ಟಿ.ಆರ್.ಬಸವರಾಜಪ್ಪ ಹಾಲೇಶಪ್ಪ ನ್ಯಾಮತಿ ಅಧ್ಯಕ್ಷ ಸೋಮಣ್ಣ, ಜಿ ಆರ್. ಹನುಮಂತಪ್ಪ, ಮುಖಂಡರು ಇದ್ದರು.
- - --28ಎಚ್.ಎಲ್.ಐ1:
ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಾಮುಲು ಉದ್ಘಾಟಿಸಿದರು.