ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಮಧುಗಿರಿ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರಿನಿಂದ ಸಂಭವಿಸಿದ ಸಾವಿನ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರಿನ ಮೂಲಗಳ ಬಗ್ಗೆ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನಗರ ಪ್ರದೇಶದ ಎಲ್ಲಾ ವಾರ್ಡುಗಳಿಗೂ ಪ್ರತಿ ದಿನ ನೀರು ಸರಬರಾಜಾಗಬೇಕು. ನೀರು ಸರಬರಾಜಿಗೆ ಕ್ರಮ ಕೈಗೊಳ್ಳದ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲಾಗುವುದೆಂದು ನಿರ್ದೇಶನ ನೀಡಿದರು. ಕೊಳವೆ ಬಾವಿ ಮೋಟಾರ್ ಕೆಟ್ಟಿದೆ, ಪೈಪ್‌ಲೈನ್ ಒಡೆದಿದೆ, ದುರಸ್ತಿಯಲ್ಲಿದೆ ಎಂದು ಕುಂಟು ನೆಪ ಹೇಳಬಾರದು. ಜನರಿಂದ ದೂರು ಬಾರದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರೊದಗಿಸಲು ವಿಫಲರಾದಲ್ಲಿ ಸರ್ಕಾರಕ್ಕೆ ಅಂಥವರ ವಿರುದ್ಧ ದೂರು ನೀಡಲಾಗುವುದು.ಎಲ್ಲಾ ಮುಖ್ಯಾಧಿಕಾರಿಗಳು ಪ್ರತಿ ದಿನ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ತಮ್ಮ ವ್ಯಾಪ್ತಿಯ ಕ್ಷೇತ್ರಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಯಿದ್ದಲ್ಲಿ ಕೂಡಲೇ ಬಗೆಹರಿಸಬೇಕು ಹಾಗೂ ಡೆಂಗ್ಯೂ ಪ್ರಕರಣಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಂಜೆ 2 ಗಂಟೆಗಳ ಕಾಲ ಫಾಗಿಂಗ್ ಕಾರ್ಯವನ್ನು ಪರಿಶೀಲಿಸಬೇಕೆಂದು ಸೂಚಿಸಿದರು.ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ಬಿದ್ದ ಮಳೆ ವಿವರ, ಸುಸ್ಥಿತಿಯಲ್ಲಿರುವ ಕೊಳವೆ ಬಾವಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಗ್ರಾಮ, ಕೆರೆಗಳಲ್ಲಿ ನೀರಿನ ಪ್ರಮಾಣ ಲಭ್ಯತೆ, ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸಹಾಯವಾಣಿ ಮೂಲಕ ಸ್ವೀಕೃತ ದೂರು, ವಿಲೇವಾರಿ ಕುರಿತು ತಾಲೂಕುವಾರು ಮಾಹಿತಿ ಪಡೆದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಸಂಜೀವಪ್ಪ, ಕೃಷಿ ಜಂಟಿ ನಿರ್ದೇಶಕ ರಮೇಶ್, ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂದೀಪ್, ಸೇರಿದಂತೆ ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.