ಸಾರಾಂಶ
ಧಾರವಾಡ: ಪ್ರಾದೇಶಿಕ ಅಸಮತೋಲನ ಹಿನ್ನೆಲೆಯಲ್ಲಿ ನೀಡಲಾಗಿದ್ದ ನಂಜುಂಡಪ್ಪ ವರದಿಯು ಅನುಷ್ಠಾನ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಅಧ್ಯಯನ ಮಾಡಲು ರಾಜ್ಯದ 26 ಜಿಲ್ಲೆಗಳಿಗೆ ಪ್ರವಾಸ ಮಾಡಿ ಪರಿಶೀಲನೆ ಮಾಡಿಲಾಗಿದೆ. ಬರುವ ಅಕ್ಟೋಬರ್ ವರೆಗೆ ವರದಿ ಸಲ್ಲಿಸಲಾಗುವುದು ಎಂದು "ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ " ಅಧ್ಯಕ್ಷ, ಆರ್ಥಿಕ ತಜ್ಞ ಪ್ರೊ. ಗೋವಿಂದರಾವ್ ಹೇಳಿದರು.
ಇಲ್ಲಿಯ ಜಿಪಂ ಸಭಾಭವನದಲ್ಲಿ ಸೋಮವಾರ ಈ ಕುರಿತು ನಡೆದ ಜಿಲ್ಲಾ ಮಟ್ಟದ ಸಂವಾದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಾದೇಶಿಕ ಅಸಮತೋಲನ ಹಿನ್ನೆಲೆಯಲ್ಲಿ ನಂಜುಂಡಪ್ಪ ಅವರು ನೀಡಿದ ವರದಿ ಅನ್ವಯ ರಾಜ್ಯದ 114 ತಾಲೂಕುಗಳಲ್ಲಿ 22 ವರ್ಷಗಳಲ್ಲಿ ರಾಜ್ಯ ಸರ್ಕಾರ ₹31 ಸಾವಿರ ಕೋಟಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ಯಾವ ತಾಲೂಕು ಅಭಿವೃದ್ಧಿಗೊಂಡಿದೆ, ಯಾವ ತಾಲೂಕು ಇನ್ನೂ ಹಿಂದುಳಿದಿದೆ ಎಂಬುದನ್ನು ಅರಿಯಲು ಸರ್ಕಾರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಿದೆ ಎಂದರು.ಕಳೆದ 7 ತಿಂಗಳಿಂದ ಸಮಿತಿಯು ರಾಜ್ಯದಲ್ಲಿ ಸಂಚರಿಸಿ ಅಧ್ಯಯನ ಮಾಡುವುದರ ಜತೆಗೆ ಹಿಂದುಳಿದ ತಾಲೂಕುಗಳಲ್ಲಿ ಇನ್ನೂ ಏನೇನು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕು, ಕೊರತೆಗಳೇನಿವೆ ಎಂಬುದನ್ನು ಹಲವು ಸೂಚ್ಯಂಕಗಳ ಮೂಲಕ ಅರಿಯುತ್ತಿದ್ದೇವೆ. ಜತೆಗೆ ಸಂಘ- ಸಂಸ್ಥೆಗಳ, ಅಧಿಕಾರಿಗಳಿಂದ ಸಂವಾದ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ ಎಂದ ಅವರು, ರಾಜ್ಯದಲ್ಲಿ ನಡೆಸಿದ ಪ್ರವಾಸದಲ್ಲಿ ನಾಲ್ಕು ವಿಭಾಗಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಹಿಂದುಳಿದ ಪ್ರದೇಶಗಳು ಹೆಚ್ಚಿದ್ದು, ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಕೆಲವು ಪ್ರದೇಶಗಳು ಹಿಂದುಳಿದಿವೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಹೋಗಿ ನಾವು ಕೊನೆಯದಾಗಿ ವರದಿ ಸಲ್ಲಿಸಲಿದ್ದೇವೆ ಎಂದರು.
ನಂಜುಂಡಪ್ಪ ವರದಿ ಅನ್ವಯ ಪ್ರಾದೇಶಿಕ ಅಸಮತೋಲನಕ್ಕೆ ಬಿಡುಗಡೆಯಾದ ಹಣ ಸರಿಯಾಗಿ ಹಂಚಿಕೆ ಆಗದಿರುವುದು ಸೇರಿದಂತೆ ಹಲವು ಕಾರಣಗಳಿಂದ ನಂಜುಂಡಪ್ಪ ವರದಿಯನ್ನು ನಾವು ಒಪ್ಪಿಲ್ಲ. ಆದರೆ, ಮುಗಿದು ಹೋದ ಅಧ್ಯಾಯವನ್ನು ಪ್ರಸ್ತಾಪಿಸುವುದಕ್ಕಿಂತ ಮುಂದಿನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಮಿತಿ ಕಾರ್ಯೋನ್ಮುಖವಾಗಿದೆ ಎಂದರು.ಧಾರವಾಡ ಜಿಲ್ಲೆಯಲ್ಲಿ ನೀರಾವರಿ ವ್ಯವಸ್ಥೆ ಇಲ್ಲ. ಒಣ ಬೇಸಾಯ. ಹೀಗಾಗಿ ಇಲ್ಲಿಯ ಅಭಿವೃದ್ಧಿಯನ್ನು ನೀರಾವರಿ ವ್ಯವಸ್ಥೆ ಇರುವ ಬೇರೆ ಜಿಲ್ಲೆಗಳಿಗೆ ಹೋಲಿಸುವಂತಿಲ್ಲ ಎಂದರು.
ಇನ್ನು, ಸಂವಾದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳಾಗಿವೆ. ಪ್ರಮುಖವಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ಪ್ರವಾಸೋದ್ಯಮ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ, ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ, ಜ್ಞಾನಾಧಾರಿತ ಕೈಗಾರಿಕೆಗಳ ಸ್ಥಾಪನೆ ಬಗ್ಗೆ ಸಲಹೆ ನೀಡಿದರು. ಹಾಗೆಯೇ, ಉದ್ಯೋಗಾವಕಾಶಗಳ ಸೃಷ್ಟಿಸುವುದು, ಅದಕ್ಕಾಗಿ ಶಿಕ್ಷಣ, ಕೌಶಲ್ಯ ನೀಡುವುದು, ಮೂಲಭೂತ ಸೌಕರ್ಯ, ಮಹಿಳಾ ಆಧಾರಿತ ಘಟಕಗಳ ಸ್ಥಾಪನೆ ಅಂತಹ ಸಲಹೆಗಳು ನಮ್ಮ ಎದುರಿಗೆ ಬಂದಿವೆ. ಈ ಸಂವಾದದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿ ಹತ್ತು ಹಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ ಎಂದು ಪ್ರೊ. ಗೋವಿಂದರಾವ್ ತಿಳಿಸಿದರು.ಈ ವೇಳೆ ಸಮಿತಿ ಸದಸ್ಯರುಗಳಾದ ಡಾ. ಸೂರ್ಯನಾರಾಯಣ ಎಂ.ಎಚ್, ಎಸ್.ಟಿ. ಬಾಗಲಕೋಟ ಹಾಗೂ ಐಎಎಸ್ ಅಧಿಕಾರಿ, ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ವಿಶಾಲ್ ಆರ್. ಸೇರಿದಂತೆ ಹಲವರಿದ್ದರು.
ದೂರದೃಷ್ಠಿಯಿಂದ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡಿದರೆ ಪ್ರಾದೇಶಿಕ ಅಸಮಾನತೆಯ ಭಾಗಶಃ ಸಮಸ್ಯೆಗಳು ತನ್ನಿಂದ ತಾನೇ ನಿವಾರಣೆಯಾಗುತ್ತವೆ. ಸಮಿತಿ ಈ ಅಂಶಗಳಿಗೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ, ಅಗತ್ಯ ಅನುದಾನ ನೀಡಬೇಕು. ನೀರಾವರಿ ತಜ್ಞ ಪರಮಶಿವಯ್ಯ ವರದಿಯನ್ನು ಅನುಷ್ಠಾನಕ್ಕೆ ತರಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜೆ ಎಂದು ಘೋಷಿಸಬೇಕು ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದ್ದಾರೆ.
ಹುಡಾ, ಕಿಮ್ಸ್ ಮೇಲ್ದರ್ಜೆಗೆ ಏರಿಸಲಿ. ಎಫ್.ಎಂ.ಜಿ.ಸಿ ಕಲ್ಲಸ್ಟರ್ ಬೇಗ ಆರಂಭವಾಗಲಿ. ಧಾರ್ಮಿಕ ಮತ್ತು ಪಾರಂಪರಿಕ ಪ್ರವಾಸೋದ್ಯಮಕ್ಕೆ ಧಾರವಾಡ ಜಿಲ್ಲೆ ಸೂಕ್ತ ಪ್ರದೇಶ. ಈಗಾಗಲೇ ಕ್ಯಾಂಪಸ್ ನಿರ್ಮಾಣವಾಗಿರುವ ಇನ್ಫೋಸಿಸ್ ಆರಂಭವಾಗಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಉತ್ತರ ಕರ್ನಾಟಕದಿಂದ ವಲಸೆ ಹೋಗುತ್ತಿರುವ ಶೇ.82 ಯುವ ಸಮೂಹವನ್ನು ಇಲ್ಲಿಯೇ ಉಳಿಸಿಕೊಳ್ಳಲು ಕೃಷಿಗೆ ನೀಡಿದ ಆದ್ಯತೆ ಉದ್ಯಮಕ್ಕೂ ಸಿಗಲಿ. ಉದ್ಯಮ ಸ್ಥಾಪನೆಗೆ ಅನುಕೂಲವಾಗಲು ಅಧಿಕಾರ ವಿಕೇಂದ್ರೀಕರಣ ಆಗಲಿ ಎಂದು ಹು-ಧಾ ಅಭಿವೃದ್ಧಿ ವೇದಿಕೆಯ ಜಗದೀಶ ಹಿರೇಮಠ ಹೇಳಿದ್ದಾರೆ.
ಗಿಡ ಕಡಿದು ಕಾಂಕ್ರೀಟ್ ರಸ್ತೆ ಮಾಡುವುದೇ ಅಭಿವೃದ್ಧಿ ಎಂದು ಭಾವಿಸಲಾಗಿದೆ. ಹಾಗಾಗಿ ಗಿಡಗಳ ಸಂಖ್ಯೆ ಕಡಿಮೆಯಾಗಿ ಸಾಲ ಹೊರೆ ಹೆಚ್ಚುತ್ತಿದೆ. ಎಲ್ಲಿಂದಲೋ ನೀರು ತರುವ ಬದಲು ಮಲೆನೀರು ಕೊಯ್ಲು, ಕೆರೆ-ಕಟ್ಟೆಗಳ ದುರಸ್ಥಿಗೆ ಆಧ್ಯತೆ ನೀಡಬೆಕು. ಸಾಮಾಜಿಕ ಕಾರ್ಯಕರ್ತೆ ಶಾರದಾ ಗೋಪಾಲ್ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಮೆಕ್ಕೆಜೋಳ, ಮೆಣಸಿನಕಾಯಿ, ಹೆಸರು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಯಾಗಬೇಕು. ಬೆಳಗಾವಿ ಸುವರ್ಣಸೌಧಕ್ಕೆ ಅಗತ್ಯ ಕಚೇರಿಗಳು ಈಗಲಾದರೂ ಸ್ಥಳಾಂತರವಾಗಲಿ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಾರ್ಯದರ್ಶಿ ಮಹೇಂದ್ರ ಸಿಂಘಿ ತಿಳಿಸಿದ್ದಾರೆ.
ಸರ್ಕಾರಿ ಹೈಸ್ಕೂಲುಗಳಲ್ಲಿ ಉರ್ದು ವಿಭಾಗ ಆರಂಭವಾಗಲಿ. ಪ್ರಾಥಮಿಕ ಶಾಲೆಗಳಲ್ಲಿ ಆರಂಭವಾಗಿರುವ ಇಂಗ್ಲೀಷ್ ಮಾಧ್ಯಮ ಎಲ್‌ಕೆಜಿ, ಯುಕೆಜಿಗೆ ಬೋಧಕರ ನೇಮಕ. ಅಗತ್ಯವಿದ್ದಲ್ಲಿ ಪ್ರಾಥಮಿಕ ಶಾಲೆಗಳ ಉನ್ನತೀಕರಣ ಆಗಲಿ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.