ಸಾರಾಂಶ
ಧಾರವಾಡ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುತ್ತಿರುವ ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಾರ್ಮಿಕ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎಲ್ ಆ್ಯಂಡ್ ಟಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಲಾಡ್, ಕುಡಿಯುವ ನೀರಿನ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅನೇಕ ಸಭೆಗಳನ್ನು ಜರುಗಿಸಿ, ನಿರ್ದೇಶನ ನೀಡಲಾಗಿದೆ. ಸೂಚನೆ ಪಾಲಿಸದೇ ಕಾಮಗಾರಿಯನ್ನು ನಿಧಾನಗತಿಯಲ್ಲಿ ಮಾಡುತ್ತಿರುವದಕ್ಕೆ ದಂಡ ಸಹ ವಿಧಿಸಲಾಗಿದೆ. ಆದರೂ ಕಂಪನಿ ಕಾರ್ಯವೈಖರಿಯಲ್ಲಿ ಬದಲಾವಣೆ, ಸುಧಾರಣೆ ಕಾಣುತ್ತಿಲ್ಲ. ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದಿನ 15 ದಿನಗಳಲ್ಲಿ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳು ಮತ್ತು ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಜರುಗಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿದ ಸಚಿವರು, ಬೆಳೆ ಹಾನಿಯಲ್ಲಿ ರೈತರಿಗೆ ಎಷ್ಟು ಹಣ ಬಂದಿದೆ ಎಂಬುದನ್ನು ರೈತ ಸಂಪರ್ಕ ಕೇಂದ್ರ, ಗ್ರಾಪಂಗಳ ಸೂಚನಾ ಫಲಕದಲ್ಲಿ ಮಾಹಿತಿ ಅಳವಡಿಸಬೇಕು. ಯಾವ ರೈತರಿಗೆ ಪರಿಹಾರ ಜಮೆ ಆಗಿಲ್ಲ ಅವರಿಗೆ ಸೂಕ್ತ ವಿವರಣೆ, ತಿಳಿವಳಿಕೆ ನೀಡಬೇಕು. ಕಲಘಟಗಿ, ಧಾರವಾಡ, ಹುಬ್ಬಳ್ಳಿ ಭಾಗದ ರೈತರು ಪರ್ಯಾಯ ಬೆಳೆಯಾಗಿ ಅಡಕೆ ಬೆಳೆಯನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಬೆಳೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ, ಅಡಕೆ ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವಂತೆ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ, ಕ್ರಮವಹಿಸಬೇಕು ಎಂದು ಸೂಚಿಸಿದರು.
ಈರುಳ್ಳಿ ಬೆಲೆ ಕುಸಿತ ಏತಕ್ಕೆ?ಈರುಳ್ಳಿ ಬೆಳೆಯಲ್ಲಿ ಈ ಬಾರಿ ಬೆಲೆ ಕುಸಿತವಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ ಹಾಗೂ ಕಳೆದ ವರ್ಷಕ್ಕೂ ಮತ್ತು ಈ ವರ್ಷಕ್ಕೂ ಇರುವ ವ್ಯತ್ಯಾಸವೇನು? ಏನು ಬದಲಾವಣೆಗಳು ಆಗಿವೆ ಎಂಬುದನ್ನು ಸಮರ್ಪಕವಾಗಿ ಅಧ್ಯಯನ ಮಾಡಿ, ವರದಿ ನೀಡುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.ನರೇಗಾ ಯೋಜನೆ ಉತ್ತಮವಾಗಿ ಅನುಷ್ಠಾನಗೊಳಿಸಬೇಕು. ಕೃಷಿ, ಪಂಚಾಯತ ರಾಜ್, ತೋಟಗಾರಿಕೆ, ಅರಣ್ಯ ಮತ್ತು ರೇಷ್ಮೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಎಲ್ಲರೂ ಸಮನ್ವಯದಿಂದ ಕ್ರಿಯಾಯೋಜನೆ ರೂಪಿಸಿ, ಜನರಿಗೆ ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕು ಎಂಬ ಸಲಹೆಗಳನ್ನು ಸಚಿವ ಲಾಡ್ ನೀಡಿದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸ್ಥಳೀಯವಾಗಿ ಶೇ. 25ರಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಪ್ರವೇಶದಲ್ಲಿ ಮೀಸಲಾತಿ ಇದ್ದರೂ, ಸರ್ಕಾರದ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿ, ಆದಷ್ಟು ಬೇಗ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ಸೌಲಭ್ಯಗಳನ್ನು ಪೂರೈಸುತ್ತಿಲ್ಲ. ಈ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಶಾಲೆಗಳು ಪ್ರಾರಂಭವಾಗಿ ಅವಧಿ ಮುಗಿಯುತ್ತ ಬಂದರೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಲು ಕ್ರಮ ವಹಿಸಿಲ್ಲ. ಅನುದಾನ ಬಿಡುಗಡೆಯಾದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಕ್ಷಣ ವಿದ್ಯಾರ್ಥಿಗಳಿಗೆ ಶೂ ವಿತರಿಸಲು ಕ್ರಮವಹಿಸಲು ಸೂಚಿಸಿದರು.ಕುಂದಗೋಳ ಶಾಸಕ ಎಂ. ಆರ್. ಪಾಟೀಲ ಮಾತನಾಡಿ, ಗೋವಿನಜೋಳ, ಸೊಯಾಬಿನ್ ಸೇರಿದಂತೆ ಇತರ ಕೃಷಿ ಬೆಳಗಳು ಹಾಗೂ ಅಡಕೆಯಂತಹ ತೋಟಗಾರಿಕಾ ಬೆಳೆಗಳು ಅತಿಮಳೆ ಹಾಗೂ ಗಾಳಿಯಿಂದ ಹಾನಿಯಾಗಿವೆ. ಈ ಕುರಿತು ಇಲಾಖೆಯ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ, ಪರಿಶೀಲಿಸಿ ಸರ್ಕಾರಕ್ಕೆ ಹಾನಿ ವರದಿ ಸಲ್ಲಿಸಬೇಕು. ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಇದ್ದು, ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ತಿಳಿಸಿದರು.
ವಿಧಾನ ಪರಿಷತ್ತ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿರುವ ಯೋಜನೆಗಳನ್ನು ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಅನುಷ್ಠಾನಗೊಳಿಸಬೇಕು. ಮೀಸಲಾತಿಗೆ ಅನುಗುಣವಾಗಿ ಅನುದಾನವನ್ನು ಬಳಕೆ ಮಾಡಬೇಕು. ಅರ್ಜಿ ಸಲ್ಲಿಸುವ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಸರ್ಕಾರದ ಜನಪರ ಯೋಜನೆಗಳ ಕುರಿತು ಪ್ರತಿ ತಿಂಗಳು ಇಲಾಖಾವಾರು ಅಧಿಕಾರಿಗಳ ಸಭೆ ಜರುಗಿಸಿ, ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. ಪ್ರಗತಿಯಲ್ಲಿ ಬಾಕಿ ಇರುವ ಇಲಾಖೆಗಳಿಗೆ ಕಾಲಮಿತಿಯಲ್ಲಿ ಅಭಿವೃದ್ಧಿ ಸಾಧಿಸಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ನರೇಗಾ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ರಾಷ್ಟ್ರೀಯ ಹೆದ್ದಾರಿ, ಪಂಚಾಯತ ರಾಜ್ ಎಂಜಿನೀಯರಿಂಗ್, ಲೋಕೊಪಯೋಗಿ, ಸಹಕಾರಿ, ಸಾರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ, ಕೃಷಿ ಮಾರಾಟ ಮಂಡಳಿ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.ವಿಧಾನ ಪರಿಷತ್ತ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿದರು. ವಿಧಾನ ಪರಿಷತ್ತ ಸದಸ್ಯ ಪ್ರದೀಪ ಶೆಟ್ಟರ್, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಇದ್ದರು.
3-4 ದಿನಕ್ಕೊಮ್ಮೆ ನೀರುಬರುವ ಮಾರ್ಚ್ ತಿಂಗಳ ಹೊತ್ತಿಗೆ ಧಾರವಾಡದ ಸಮೀಪದ ಅಮ್ಮಿನಭಾವಿ ನೀರು ಸಂಸ್ಕರಣಾ ಘಟಕಕ್ಕೆ ಹೆಚ್ಚುವರಿಯಾಗಿ 43 ಎಂಎಲ್.ಡಿ.ನೀರು ಹರಿದು ಬರಲಿದೆ. ಇದರಿಂದ ಸದ್ಯ ವಾರಕ್ಕೊಂದು ಬಾರಿ ನೀರು ಲಭಿಸುವ ಬದಲು 3-4 ದಿನಗಳಿಗೊಮ್ಮೆ ಕುಡಿಯುವ ನೀರು ಲಭಿಸಲಿದೆ. ಅಲ್ಲದೇ, ವರ್ಷಪೂರ್ತಿ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನಗೆ 2026ರ ಮಾರ್ಚ್ ತಿಂಗಳೊಳಗಾಗಿ ಪ್ರತಿ ದಿನ ಈಗಿರುವುದಕ್ಕಿಂತ ಹೆಚ್ಚುವರಿಯಾಗಿ 43 ದಶಲಕ್ಷ ಲೀಟರ್ (ಎಂಎಲ್ ಡಿ ) ನೀರು ಲಭಿಸಲಿದ್ದು, ಬೇಸಿಗೆಗೆ ನೀರಿನ ತೊಂದರೆ ನೀಗುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರುಕತ್ತೆ ಕಾಯಿತಿರೇನರ್ರಿಶಿಕ್ಷಣ ಇಲಾಖೆಯಲ್ಲಿನ ಪ್ರಗತಿ ಪರಿಶೀಲನೆ ವೇಳೆ ಸಚಿವರಿಗೆ ಸಮರ್ಪಕ ಉತ್ತರ ನೀಡದ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರಿಗೆ ಈ ಬಾರಿಯೂ ತರಾಟೆಗೆ ತೆಗೆದುಕೊಂಡರು. ನೀವೇನು ಕತ್ತೆ ಕಾಯಿತ್ತಿರಾ? ಎಂದು ಕಾರವಾಗಿ ಪ್ರಶ್ನಿಸಿದ ಪ್ರಸಂಗ ನಡೆಯಿತು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ, ಶೂನ್ಯ ಸಂಪಾದನೆ ಮಾಡಿದ ಶಾಲೆಗಳ ಮೇಲೆ ಕ್ರಮ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚಿಸುವಾಗಲೂ ಕೆಳದಿಮಠ ಅವರು ಸಮರ್ಪಕ ಉತ್ತರ ನೀಡದಿದ್ದಾಗ ಸಚಿವ ಲಾಡ್ ಗರಂ ಆದರು.
ಶೂನ್ಯ ದಾಖಲಾತಿ ಶಾಲೆ ಬಂದ್ ಮಾಡಿ..ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ, ಶೂನ್ಯ ಫಲಿತಾಂಶ ಮತ್ತು ವಿದ್ಯಾರ್ಥಿ ದಾಖಲಾತಿ ಶೂನ್ಯ ಇರುವ ಶಾಲೆಗಳಿಗೆ ನೋಟಿಸ್ ನೀಡಿ, ಅವುಗಳನ್ನು ಬಂದ್ ಮಾಡಬೇಕು. ಅಲ್ಲಿನ ಸಿಬ್ಬಂದಿಯನ್ನು ಅಗತ್ಯವಿರುವ ಸರ್ಕಾರಿ ಶಾಲೆಗಳಿಗೆ ತಕ್ಷಣ ವರ್ಗಾಯಿಸಬೇಕು. ಇದರಿಂದ ಸರ್ಕಾರದ ಅನುದಾನದ ಅಪವ್ಯಯ ತಪ್ಪುತ್ತದೆ. ಪ್ರತಿಯೊಂದು ಶಾಲೆಗಳಲ್ಲಿ ಅಗತ್ಯ ಮತ್ತು ಸುಸ್ಥಿತಿಯಲ್ಲಿ ಶೌಚಾಲಯಗಳು, ಕೊಠಡಿಗಳು ಇರುವಂತೆ ಮುಂಜಾಗ್ರತೆ ವಹಿಸಬೇಕು ಎಂದು ಸಚಿವರು ಸೂಚಿಸಿದರು.
;Resize=(128,128))
;Resize=(128,128))
;Resize=(128,128))