ಸಾರಾಂಶ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಪ್ರಕಾಶ ಎ.ಬನಸೋಡೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಅವ್ಯವಸ್ಥೆಯಿಂದ ಕೂಡಿದ್ದು, ಕೆಲವು ಅಂಗನವಾಡಿ ಕೇಂದ್ರಗಳು ಮುಚ್ಚಿರುವುದು ಕಂಡುಬಂದಿದೆ. ಈ ಬಗ್ಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದು ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಪ್ರಕಾಶ ಎ.ಬನಸೋಡೆ ಹೇಳಿದರು.ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಆ.20 ಮಂಗಳವಾರ ಮಾಳೆಗಾಂವ ಅಂಗನವಾಡಿಯ 2 ಮತ್ತು 3 ಕೇಂದ್ರಗಳಿಗೆ ಭೇಟಿ ನೀಡಲಾಗಿದ್ದು, ಅಲ್ಲಿ ಮಕ್ಕಳ ಹಾಜರಾತಿ ಕುರಿತು ಸರಿಯಾಗಿ ದಾಖಲೆ ನಿರ್ವಹಣೆ ಮಾಡದೆ ಇರುವುದು ಕಂಡುಬಂದಿದೆ ಹಾಗೂ ಮಕ್ಕಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಕೂಡ ಇಲ್ಲ, ಪ್ರತ್ಯೇಕವಾದ ಅಡುಗೆ ಕೋಣೆ ಹಾಗೂ ಸಂಗ್ರಹಣ ಕೊಠಡಿಯೂ ಇಲ್ಲ.ಹಾಜರಾತಿ ಪ್ರಕಾರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಹಾಜರಿರಲಿಲ್ಲ. ಮಾಳೆಗಾಂವ ಅಂಗನವಾಡಿ ಕೇಂದ್ರ 03ರಲ್ಲಿ ಸಹಾಯಕಿ ಮಾತ್ರ ಹಾಜರಿದ್ದು, ಶಿಕ್ಷಕಿ ಗೈರುಹಾಜರಿದ್ದರು ಎಂದು ತಿಳಿಸಿದರು.
ಅಂಗನವಾಡಿ ಡಿ.ದೇವರಾಜ ಅರಸು ಕೇಂದ್ರವಾದ 310 ಶಹಾಗಂಜ ಬೀದರ್‌ನಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಹಾಜರಿದ್ದರು, ಒಟ್ಟು 45 ಮಕ್ಕಳಲ್ಲಿ 7 ಮಕ್ಕಳು ಮಾತ್ರ ಹಾಜರಿದ್ದರು. ಈ ಅಂಗನವಾಡಿ ಕೇಂದ್ರವು ಬಾಡಿಗೆ ಮನೆಯಲ್ಲಿದ್ದು, 45 ಮಕ್ಕಳಿಗೆ ಕೇವಲ ಒಂದೇ ಶೌಚಾಲಯವಿದೆ ಎಂದರು.ಬೀದರ್ ಪಟ್ಟಣದಲ್ಲಿರುವ ಲಂಗರಗಲ್ಲಿ ಅಂಗನವಾಡಿ ಕೇಂದ್ರ, ಶಹಾಗಂಜ ಅಂಗನವಾಡಿ ಕೇಂದ್ರ 292 ಮತ್ತು ಲೇಬರ ಕಾಲೋನಿ ಅಂಗನವಾಡಿ ಕೇಂದ್ರ 311 ಇವು ಮಂಗಳವಾರ ಭೇಟಿ ನೀಡಿದ ವೇಳೆ ಮುಚ್ಚಿರುವುದು ಕಂಡುಬಂದಿವೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳಾದ ಜಗದೀಶ್ವರ, ಆಕಾಶ, ಪ್ರೀತಿ ನಾಗರಾಜ, ಈರಮ್ಮಾ, ಜೀವನ, ಯೋಹಾನ ಸೇರಿ ಇತರರು ಉಪಸ್ಥಿತರಿದ್ದರು.