ಸಾರಾಂಶ
ರಾಜ್ಯ ಸರ್ಕಾರಕ್ಕೆ ಒಪ್ಪಿಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿಗಣತಿ ಸಮೀಕ್ಷೆ ವರದಿಯನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
- ಪಂಚಮಸಾಲಿ ಸಮುದಾಯ ಜನಸಂಖ್ಯೆ ಈಗ ಹೆಚ್ಚಾಗಿದೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯ ಸರ್ಕಾರಕ್ಕೆ ಒಪ್ಪಿಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿಗಣತಿ ಸಮೀಕ್ಷೆ ವರದಿಯನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಮ್ಮ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಜನಸಂಖ್ಯೆ ವರದಿಯಲ್ಲಿ ದಾಖಲಾಗಿದ್ದಕ್ಕಿಂತಲೂ ಹೆಚ್ಚಾಗಿದೆ. ಮೇಲ್ನೋಟಕ್ಕೆ ಇಂತಹ ವರದಿ ಅವೈಜ್ಞಾನಿಕವಾಗಿರುವುದು ಕಂಡುಬರುತ್ತದೆ. ಹತ್ತು ವರ್ಷಕ್ಕಿಂತ ಹಿಂದೆಯೇ ಕೈಗೊಂಡ ಸಮೀಕ್ಷೆ, ಅಧಿಕ ಸಮಯವೂ ಆದ ಸಮೀಕ್ಷೆ ವರದಿ ಇವತ್ತಿಗೆ ಎಷ್ಟರಮಟ್ಟಿಗೆ ಪ್ರಸ್ತುತ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸಮೀಕ್ಷೆ ಮಾಡುವವರು ಸಾಕಷ್ಟು ಮನೆಗಳಿಗೆ ಭೇಟಿ ನೀಡದಿರುವುದು ಸ್ಪಷ್ಟವಾಗಿದೆ. ಈ ಮೂಲಕ ಸಮೀಕ್ಷೆ ಮಾಡುವವರು ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದೆ. ವರದಿಯ ಅಂಕಿ ಅಂಶಗಳು ತಪ್ಪಾಗಿದ್ದರೆ ಫಲಾನುಭವಿಗಳ ಆಯ್ಕೆಯೂ ತಪ್ಪಾಗುವ ಸಾಧ್ಯತೆ ಇದೆ. ವರದಿಯ ಅಂಕಿ ಅಂಶಗಳಲ್ಲೇ ಲೋಪವಾದರೆ ಸಹಜವಾಗಿಯೇ ಸರ್ಕಾರದ ಉದ್ದೇಶವೂ ಈಡೇರುವುದಿಲ್ಲ ಎಂದು ತಿಳಿಸಿದ್ದಾರೆ.ಮನೆ ಮನೆಗಳಿಗೆ ಭೇಟಿ ನೀಡಿ ಕೈಗೊಳ್ಳದ ಸಮೀಕ್ಷೆ ಇದಾಗಿದೆ. ಈ ವರದಿ ಒಪ್ಪದಿರುವುದಕ್ಕೆ ಸಾಕಷ್ಟು ಕಾರಣಗಳೂ ಇವೆ. ಈ ಸಮೀಕ್ಷೆ ಮಾಡಿರುವವರ ಕರ್ತವ್ಯಲೋಪ ಇರುವ ವರದಿಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಹ ಒಪ್ಪುವುದಿಲ್ಲ ಎಂದು ಶ್ರೀ ವಚನಾನಂದ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
- - --20ಕೆಡಿವಿಜಿ: ಶ್ರೀ ವಚನಾನಂದ ಸ್ವಾಮೀಜಿ