ರಾಮನಗರ: ಅಖಿಲ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಮನಗರದಲ್ಲಿ ನಿರ್ಮಾಣವಾಗುತ್ತಿರುವ ಅಗ್ನಿ ವಂಶ ಕ್ಷತ್ರಿಯ ಭವನದ ಬಳಿಯ ರಾಜಕಾಲುವೆಗೆ ಕವರಿಂಗ್ ಸ್ಲಾಬ್ ಅಳವಡಿಸುವಂತೆ ಹಾಗೂ ಸಮುದಾಯ ಭವನಕ್ಕೆ ನಗರಸಭೆಯಿಂದ ಅನುದಾನ ನೀಡುವಂತೆ ಸಂಘದ ಅಧ್ಯಕ್ಷ ನರೇಂದ್ರರವರ ನೇತೃತ್ವದಲ್ಲಿ ಸಮುದಾಯದ ಮುಖಂಡರು ಸೋಮವಾರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಮನವಿ ಸಲ್ಲಿಸಿದರು.

ನಗರಸಭೆ ಕಚೇರಿಯಲ್ಲಿ ಸಮುದಾಯದ ಮುಖಂಡರು ಹಾಗೂ ಸದಸ್ಯರು, ಕೆ.ಶೇಷಾದ್ರಿ ಅವರಿಗೆ ಮನವಿ ಸಲ್ಲಿಸಿ, ಅಭಿವೃದ್ಧಿ ಕಾಮಗಾರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.

ಈ ವೇಳೆ ಸಂಘದ ಅಧ್ಯಕ್ಷ ನರೇಂದ್ರ ಮಾತನಾಡಿ, ನಮ್ಮ ಅಗ್ನಿ ವಂಶ ಕ್ಷತ್ರಿಯ ಭವನದ ಸಮೀಪದಲ್ಲಿರುವ ರಾಜ ಕಾಲುವೆ ಸ್ಲಾಬ್ ಅಳವಡಿಕೆ ಮಾಡದ ಕಾರಣ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ನೀರು ತುಂಬಿ ಅಪಘಾತ ಸಂಭವಿಸುತ್ತಿದೆ. ಹಾಗಾಗಿ ಈ ರಾಜಕಾಲುವೆಗೆ ಆರ್‌ಸಿಸಿ ಕವರಿಂಗ್ ಸ್ಲಾಬ್ ಅಳವಡಿಸಿಕೊಡುವಂತೆ ನಗರಸಭೆ ಅಧ್ಯಕ್ಷರಾದ ಕೆ.ಶೇಷಾದ್ರಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.

ಸುಮಾರ 3 ಕೋಟಿ ವೆಚ್ಚದಲ್ಲಿ ಅಗ್ನಿವಂಶ ಕ್ಷತ್ರಿಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ. ಹಾಗಾಗಿ ಭವನ ನಿರ್ಮಾಣಕ್ಕೆ ಅಗತ್ಯ ಸಹಾಯ ಮಾಡುವಂತೆಯೂ ಅಧ್ಯಕ್ಷರಲ್ಲಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸಿರುವ ಅಧ್ಯಕ್ಷರು ಶೀಘ್ರದಲ್ಲಿಯೇ ಭವನ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ನಾನು ಸಂಘದ ಅಧ್ಯಕ್ಷನಾದ ಬಳಿಕ ಮೊದಲ ಬಾರಿಗೆ ಕೆ.ಶೇಷಾದ್ರಿ ಅವರನ್ನು ಭೇಟಿ ಮಾಡಿದ್ದೇನೆ. ಅವರ ಆರ್ಶೀವಾದ ಹಾಗೂ ಸಲಹೆ ಸೂಚನೆಗಳನ್ನು ಪಡೆದುಕೊಂಡು ಬಂದಿದ್ದೇನೆ ಎಂದು ನರೇಂದ್ರ ತಿಳಿಸಿದರು.


ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ, ಗುರುವಯ್ಯ, ಕಾರ್ಯದರ್ಶಿ ಶಿವಕುಮಾರ್,ಸಹ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ರಾಮು, ಸಂಘಟನಾ ಕಾರ್ಯದರ್ಶಿ ನಾಗೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

--------------------------

...ಕೋಟ್ ...

ರಾಮನಗರ ಕ್ಷೇತ್ರದಲ್ಲಿ 18 ರಿಂದ 20 ಸಾವಿರ ತಿಗಳರ ಜನಸಂಖ್ಯೆಯಿದ್ದು, ಅವರಿಗಾಗಿ ಸಮುದಾಯ ಭವನ ಇರಲಿಲ್ಲ. ಹಾಗಾಗಿ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಪಕ್ಷ ಬೇಧ ಮರೆತು ಜನಪ್ರತಿನಿಧಿಗಳು ಭವನ ನಿರ್ಮಾಣ ಕಾರ್ಯಕ್ಕೆ ಆರ್ಥಿಕ ಸಹಾಯ ಮಾಡುವಂತೆ ಕೋರಿಕೆ.

- ನರೇಂದ್ರ, ಅಧ್ಯಕ್ಷರು, ಅಖಿಲ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಸಂಘ.

---------------------------

20ಕೆಆರ್ ಎಂಎನ್ 4.ಜೆಪಿಜಿ

ಅಖಿಲ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನರೇಂದ್ರರವರ ನೇತೃತ್ವದಲ್ಲಿ ಸಮುದಾಯದ ಮುಖಂಡರು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರನ್ನು ಅಭಿನಂದಿಸಿ ಮನವಿ ಸಲ್ಲಿಸಿದರು.

-----------------------------