ಸಾರಾಂಶ
ಕಾಳಿಂಗ ಸರ್ಪಗಳಲ್ಲಿ ನಾಲ್ಕು ಪ್ರಭೇದಗಳಿದ್ದು ಅವುಗಳ ಆಹಾರ ಪದ್ಧತಿ, ಜೀವನ ಶೈಲಿ, ಸಂತಾನೋತ್ಪತ್ತಿ, ಗೂಡು ಕಟ್ಟುವ ಪರಿ ಮತ್ತು ಅವುಗಳ ಪ್ರಭೇದಗಳು ಪರಿಸರ ಸಮತೋಲನಕ್ಕೆ ಪೂರಕವಾಗಿಯೂ ಇದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಕಾಳಿಂಗ ಸರ್ಪ ಒಂದು ಪ್ರತ್ಯೇಕ ಪ್ರಭೇದವಾಗಿದ್ದು ಈ ಪ್ರಭೇದಕ್ಕೆ ಕನ್ನಡದ ಹೆಸರಿನಲ್ಲೇ ಕರೆಯುವ ಮೂಲಕ ಜಾಗತಿಕವಾಗಿಯೂ ಈ ಹೆಸರನ್ನು ಶಾಶ್ವತಗೊಳಿಸುವ ಪ್ರಯತ್ನ ನಡೆದಿದೆ.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಭಾರತದಲ್ಲಿ ಹಾವಿನ ಕಡಿತದಿಂದ ವರ್ಷಕ್ಕೆ 58,000 ಜನರು ಮೃತರಾಗುತ್ತಿದ್ದಾರೆ. ಕಾಳಿಂಗ ಸರ್ಪದ ವಿಷಕ್ಕೆ ಭಾರತದಲ್ಲಿ ಈ ವರೆಗೂ ಔಷಧಿಯೇ ಇಲ್ಲವಾಗಿದ್ದು ಈ ಬಗ್ಗೆ ಸಂಶೋಧನೆಗೆ ಸರ್ಕಾರ ಗಂಭೀರವಾಗಿ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಉರಗ ತಜ್ಞ, ಆಗುಂಬೆ ಸಮೀಪದ ಕಾಳಿಂಗ ಫೌಂಡೇಶನ್‌ನ ಡಾ.ಗೌರಿಶಂಕರ್ ಆಗ್ರಹಿಸಿದರು.ಪಟ್ಟಣದ ಮಲ್ನಾಡ್ ಕ್ಲಬ್‌ನಲ್ಲಿ ನಡೆದ ಕಾಳಿಂಗ ಸರ್ಪದ ಕುರಿತ ವಿಚಾರ ಸಂಕಿರಣದ ಸಂವಾದದಲ್ಲಿ ಮಾತನಾಡಿ ಪರಿಸರ ನಾಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಳಿಂಗ ಸರ್ಪ ಸೇರಿ ಸರಿಸೃಪಗಳು ಅವನತಿಯ ಅಂಚಿಗೆ ಸಾಗುತ್ತಿರುವುದು ಪ್ರಕೃತಿಯ ಸಮತೋಲನಕ್ಕೂ ಮಾರಕವಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಮಲೆನಾಡು ಭಾಗದ ಜನರು ಹಾವಿನ ಬಗ್ಗೆ ಇರಿಸಿಕೊಂಡಿರುವ ಒಳ್ಳೆಯ ಭಾವನೆ ಗಮನಾರ್ಹ ಎಂದು ವಿವರಿಸಿದರು.ಪರಿಸರ ಸಮತೋಲನಕ್ಕೆ ಪೂರಕ:
ಕಾಳಿಂಗ ಸರ್ಪಗಳಲ್ಲಿ ನಾಲ್ಕು ಪ್ರಭೇದಗಳಿದ್ದು ಅವುಗಳ ಆಹಾರ ಪದ್ಧತಿ, ಜೀವನ ಶೈಲಿ, ಸಂತಾನೋತ್ಪತ್ತಿ, ಗೂಡು ಕಟ್ಟುವ ಪರಿ ಮತ್ತು ಅವುಗಳ ಪ್ರಭೇದಗಳು ಪರಿಸರ ಸಮತೋಲನಕ್ಕೆ ಪೂರಕವಾಗಿಯೂ ಇದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಕಾಳಿಂಗ ಸರ್ಪ ಒಂದು ಪ್ರತ್ಯೇಕ ಪ್ರಭೇದವಾಗಿದ್ದು ಈ ಪ್ರಭೇದಕ್ಕೆ ಕನ್ನಡದ ಹೆಸರಿನಲ್ಲೇ ಕರೆಯುವ ಮೂಲಕ ಜಾಗತಿಕವಾಗಿಯೂ ಈ ಹೆಸರನ್ನು ಶಾಶ್ವತಗೊಳಿಸುವ ಪ್ರಯತ್ನ ನಡೆದಿದೆ. ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆಗೆಂದು ಗಾಯದ ಮೇಲು ಭಾಗದಲ್ಲಿ ಹಗ್ಗ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲಾ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಂವಾದದಲ್ಲಿ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕಿರುವ ಇಂಜೆಕ್ಷನ್ ಕೊರತೆ, ಹಾವಿನ ಬಗೆಗಿನ ಧಾರ್ಮಿಕ ಭಾವನೆ, ನವಿಲುಗಳಿಂದಾಗಿ ಹಾವಿನ ಸಂತತಿ ನಶಿಸುತ್ತಿರುವುದು ಮತ್ತು ಆಗುಂಬೆ ಘಾಟಿಯ ಉದ್ದೇಶಿತ ಸುರಂಗ ಮಾರ್ಗದ ಕುರಿತಂತೆಯೂ ವಿಚಾರಗಳು ಪ್ರಸ್ತಾಪವಾಗಿದ್ದವು.
ಶರಾವತಿ ಜಗದೀಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಕಡಿದಾಳು ದಯಾನಂದ್, ಕಾರ್ಯದರ್ಶಿ ರಾಘವೇಂದ್ರ, ಕಾಳಿಂಗ ಫೌಂಡೇಶನ್ನಿನ ಪ್ರಶಾಂತ್, ಪ್ರಿಯಂಕಾ ಮತ್ತು ಚಿರತೆ ತಜ್ಞರಾದ ಸಂಜಯ್ ಗುಬ್ಬಿ ಮತ್ತು ಕ್ಲಬ್‌ನ ಸದಸ್ಯರು ಇದ್ದರು.