ಗಣರಾಜ್ಯೋತ್ಸವ: ಅದ್ಧೂರಿ ಆಚರಣೆಗೆ ತಹಸೀಲ್ದಾರ್‌ ಮಂಜುನಾಥ್‌ ಸೂಚನೆ

| Published : Jan 17 2024, 01:45 AM IST

ಸಾರಾಂಶ

ಕೊರಟಗೆರೆ ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವ ಆಚರಣಗೆ ಸಿದ್ಧತೆ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಜ.26 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಎಲ್ಲಾ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕು ಆಡಳಿತ ಅದ್ಧೂರಿಯಾಗಿ ಶಿಸ್ತು ಬದ್ಧವಾಗಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ತಾಲೂಕು ಕಚೇರಿಯ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್‌. ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸುವ ಅವಕಾಶ ಗಣರಾಜ್ಯೋತ್ಸವದಲ್ಲಿ ಕಾಣಬಹುದಾಗಿದೆ. ಅವರ ಆಶಯದಂತೆ ಎಲ್ಲರಿಗೂ ಸಮಪಾಲು ಸಮಬಾಳು ಎಂಬ ನಾಣ್ಣುಡಿಯನ್ನು ಸಾಕಾರ ಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಚರಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದರು.

ಪ್ರತಿ ವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಅದರಲ್ಲಿ ದೇಶ ರಕ್ಷಣೆಯಲ್ಲಿ ಸೇವೆಸಲ್ಲಿಸಿದ ಸೈನಿಕರನ್ನು ಸನ್ಮಾನಿಸಲಾಗುವುದು ಎಂದರು. ಜ.26 ರಂದು ಪಟ್ಟಣದ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಪೊಲೀಸ್ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕವಾಯತ್ತು ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಯುವಶಕ್ತಿ ಸೇರಿದಂತೆ ಇನ್ನಿತರ ಯೋಜನೆಗಳ ಮಾಹಿತಿಯೊಂದಿಗೆ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಸಲಾವುದು ಎಂದು ತಿಳಿಸಿದರು.

ಗೈರಾದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ: ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆಗಳಿಗೆ ಗೈರಾಗುವ ಇಲಾಖಾ ಅಧಿಕಾರಿಗಳ ಬಗ್ಗೆ ಕೆಂಡಾಮಂಡಲವಾದ ತಹಸೀಲ್ದಾರ್ ಗೈರಾದ ಅಧಿಕಾರಿಗಳ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪೂರ್ವ ಭಾವಿ ಸಭೆಯಲ್ಲಿ ತಾ.ಪಂ. ಇಒ ಅಪೂರ್ವಾ, ಗ್ರೇಡ್-2 ತಹಸೀಲ್ದಾರ್ ನರಸಿಂಹಮೂರ್ತಿ, ಪಿಎಸೈ ಚೇತನ್‌ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ವಿಜಯ್‌ಕುಮಾರ್, ಪ.ಪಂ.ಮುಖ್ಯಾಧಿಕಾರಿ ಭಾಗ್ಯಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಸಮಾಜಕಲ್ಯಾಣಾಧಿಕಾರಿ ಯಮುನ, ಗ್ರಾಮೀಣಾಭಿವೃದ್ಧಿ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕೀರ್ತಿನಾಯಕ್, ಅಬಕಾರಿ ಶ್ರೀಲತಾ, ಸಮಾಜಿಕ ಅರಣ್ಯಾಧಿಕಾರಿ ದೀಪಾಶ್ರೀ, ಅರಣ್ಯ ಇಲಾಖೆಯ ರವಿಕುಮಾರ್, ಬಿಇಒ ನಟರಾಜು, ಪಿಇಒ ಹನುಮಂತರಾಯಪ್ಪ, ಪ.ಪಂ.ಸದಸ್ಯ ಕೆ.ಆರ್‌.ಓಬಳರಾಜು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ನಾಗೇಂದ್ರ, ವೆಂಕಟೇಶ್, ರಾಜಣ್ಣ, ನಟೇಶ್, ಸಚಿವರ ಕಚೇರಿಯ ಕಾರ್ಯದರ್ಶಿ ಅರವಿಂದ್, ಕಂದಾಯ ಇಲಾಖೆಯ ಆರ್‌.ಐ. ಬಸವರಾಜು, ನಕುಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.