ಸಂಯೋಜಿತ ಅಕ್ವಾಪಾರ್ಕ್ ನಿರ್ಮಾಣ ಮಾಡಲು ಯೋಜನೆಯ ಮಾರ್ಗಸೂಚಿಯಂತೆ 100 ಎಕರೆ ಜಾಗ ಆವಶ್ಯ ಇದ್ದು, ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸಿ/ಸಹಮತಿ ಪಡೆದು ನಿಯಮಾನುಸಾರ ಕ್ರಮ ವಹಿಸಲಾಗುವುದು. ಅಂದಾಜು 100 ಕೋಟಿ ಮೊತ್ತದಲ್ಲಿ ಈ ಯೋಜನೆ ಅನುಷ್ಟಾನಿಸಲು ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದ ಬಳಿ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ (ಪಿಎಂಎಂಎಸ್ ವೈ) ಸಂಯೋಜಿತ ಅಕ್ವಾಪಾರ್ಕ್ ನಿರ್ಮಾಣ ಮಾಡುವಂತೆ ಕೋರಿ ಮನವಿ ಸ್ವೀಕೃತವಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಸಂಯೋಜಿತ ಅಕ್ವಾಪಾರ್ಕ್ ನಿರ್ಮಾಣ ಮಾಡಲು ಯೋಜನೆಯ ಮಾರ್ಗಸೂಚಿಯಂತೆ 100 ಎಕರೆ ಜಾಗ ಆವಶ್ಯ ಇದ್ದು, ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸಿ/ಸಹಮತಿ ಪಡೆದು ನಿಯಮಾನುಸಾರ ಕ್ರಮ ವಹಿಸಲಾಗುವುದು. ಅಂದಾಜು 100 ಕೋಟಿ ಮೊತ್ತದಲ್ಲಿ ಈ ಯೋಜನೆ ಅನುಷ್ಟಾನಿಸಲು ಅವಕಾಶವಿದೆ ಎಂದು ಉತ್ತರಿಸಿದ್ದಾರೆ.

ಈ ಯೋಜನೆಗೆ 100 ಎಕರೆ ಜಮೀನು ಅಗತ್ಯವಿದ್ದು, ಗಗನಚುಕ್ಕಿ ಜಲಪಾತದ ಬಳಿ 75 ಎಕರೆ ಜಾಗ ಗುರುತಿಸಲಾಗಿದೆ. ಆದರೆ, ಸದರಿ ಜಾಗವು ಅರಣ್ಯ, ಪರಿಸರ ಮತ್ತು ಸೂಕ್ಷ್ಮ ವಲಯವಾಗಿದೆ. ಈ ಜಾಗವನ್ನು ಪಡೆಯುವ ಸಂಬಂಧ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಗತ್ಯವಿರುವ ಜಮೀನು ದೊರಕಿದ ಬಳಿಕ ಯೋಜನೆಯನ್ನು ಸರ್ಕಾರದಿಂದ ಅನುಷ್ಠಾನಿಸಬೇಕೋ ಅಥವಾ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಜಾರಿ ಮಾಡಬೇಕೋ ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.

ಅಕ್ವಾಪಾರ್ಕ್ ವಿಶೇಷತೆಗಳೇನು:

ಮೀನುಗಾರಿಕೆ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳು ಒಂದೇ ಕಡೆ ಲಭ್ಯವಾಗುವುದು ಸಂಯೋಜಿತ ಅಕ್ವಾಪಾರ್ಕ್ ವಿಶೇಷತೆಯಾಗಿದ್ದು, ಮೀನು ಆಹಾರ ಉತ್ಪಾದನಾ ಘಟಕ, ಮೀನುಮರಿ ಉತ್ಪಾದನಾ ಘಟಕ, ಮೀನುಮರಿ ಪಾಲನಾ ಘಟಕ, ಶೈತ್ಯಾಗಾರ/ ಮಂಜುಗಡ್ಡೆ ಘಟಕ, ಅಕ್ವೇರಿಯಂ ಮೀನುಗಳ ಉತ್ಪಾದನಾ/ ಪಾಲನಾ ಘಟಕ, ಸುಸಜ್ಜಿತ ಮೀನು ಮಾರುಕಟ್ಟೆ ಘಟಕ, ಮೀನು/ ಮೀನುಮರಿ ಸಾಗಾಣಿಕೆ ವ್ಯವಸ್ಥೆ, ಸ್ಪೋರ್ಟ್ಸ್ ಫಿಶಿಂಗ್.