ಜಾನುವಾರು ಗಣತಿಗೆ ಸಹಕಾರ ನೀಡಲು ಮನವಿ

| Published : Jan 17 2025, 12:47 AM IST

ಸಾರಾಂಶ

ಇದುವರೆಗೆ ಗಣತಿಯ ಮಾಹಿತಿಯನ್ನು ಪುಸ್ತಕದಲ್ಲಿ ನಮೂದಿಸುತ್ತಿತ್ತು. ಈ ಬಾರಿ ಮೊದಲ ಬಾರಿಗೆ ಸ್ಮಾರ್ಟ್‌ ಫೋನ್ ಬಳಸಿ ಗಣತಿದಾರರು ಮನೆ ಮನೆಗೆ ತೆರಳಿ ಗಣತಿಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಕೇಂದ್ರ ಪಶುಸಂಗೋಪನ ಇಲಾಖೆಯಿಂದಲೇ 21 ಲೈವ್ ಸ್ಟಾಕ್ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ದೇಶದಲ್ಲಿ ಕಳೆದ ಅಕ್ಟೋಬರ್ 25 ರಿಂದ ಆರಂಭವಾಗಿರುವ 21ನೇ ಜಾನುವಾರು ಗಣತಿ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯದಲ್ಲಿ ಶೇಕಡ 35 ರಷ್ಟು ಗಣತಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಭಾರತ ಸರ್ಕಾರದ ಪಶುಪಾಲನಾ ಇಲಾಖೆಯ ನಿರ್ದೇಶಕ ವಿ.ಪಿ.ಸಿಂಗ್ ತಿಳಿಸಿದರು.

ನಗರದ ಜಿಲ್ಲಾ ಪಶು ಆಸ್ಪತ್ರೆಯ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜಾನುವಾರು ಗಣತಿ ಕಾರ್ಯವು ಮುಂದಿನ ಫೆಬ್ರವರಿ ಮಾಹೆಯಲ್ಲಿ ಪೂರ್ಣಗೊಳ್ಳಲಿದೆ. ಗಣತಿದಾರರು ರೈತರ ಮನೆಗಳಿಗೆ ತೆರಳಿ ಜಾನುವಾರುಗಳ ವಿವರಗಳನ್ನು ದಾಖಲಿಸುವ ಪ್ರಕ್ರಿಯೆಯು ನಿರಂತರವಾಗಿ ಚಾಲನೆಯಲ್ಲಿರಲಿದೆ ಎಂದರು.

36,426 ಗ್ರಾಮಗಳಲ್ಲಿ ಗಣತಿ

ರಾಜ್ಯದಲ್ಲಿ ಜಾನುವಾರು ಗಣತಿಗಾಗಿ ನಗರದ ಪ್ರದೇಶದ ವಾರ್ಡ್ ಗಳನ್ನು ಒಳಗೊಂಡಂತೆ 36,426 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗಣತಿ ಕಾರ್ಯಕ್ಕಾಗಿ ರಾಜ್ಯದಲ್ಲಿ 4868 ಗಣತಿದಾರರನ್ನು ಹಾಗೂ 725 ಮೇಲ್ವಿಚಾರಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಗಣತಿ ಸಂದರ್ಭದಲ್ಲಿ ರೈತರು ಜಾನುವಾರುಗಳ ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ನೀಡುವ ಮೂಲಕ ಗಣತಿಗೆ ಸಹಕರಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.ಇದುವರೆಗೆ ಗಣತಿಯ ಮಾಹಿತಿಯನ್ನು ಪುಸ್ತಕದಲ್ಲಿ ನಮೂದಿಸುತ್ತಿತ್ತು. ಈ ಬಾರಿ ಮೊದಲ ಬಾರಿಗೆ ಸ್ಮಾರ್ಟ್‌ ಫೋನ್ ಬಳಸಿ ಗಣತಿದಾರರು ಮನೆ ಮನೆಗೆ ತೆರಳಿ ಗಣತಿಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಕೇಂದ್ರ ಪಶುಸಂಗೋಪನ ಇಲಾಖೆಯಿಂದಲೇ 21 ಲೈವ್ ಸ್ಟಾಕ್ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು, ಬಳಸುವ ಬಗ್ಗೆಯೂ ತರಬೇತಿ ನೀಡಲಾಗಿದೆ. ಹಿಂದೆ ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ಮಾಡಬೇಕಿದ್ದರೆ, ಈ ಬಾರಿ ಚುಟುಕಾಗಿ ಆ್ಯಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್ವರ್ಕ್ ಇಲ್ಲದಿದ್ದರೂ ತಂತ್ರಾಂಶವನ್ನು ಬಳಕೆ ಮಾಡಿಕೊಳ್ಳುವ ರೀತಿಯಲ್ಲಿ ಆಪ್ ನ್ನು ವಿನ್ಯಾಸ ಪಡಿಸಲಾಗಿದೆ ಎಂದು ತಿಳಿಸಿದರು.“ಮನೆಮನೆಗೆ ಜಾನುವಾರು ಗಣತಿದಾರರು ಬರಲಿದ್ದಾರೆ. ಇದು ರೈತರು ಜಾನುವಾರು ಸಾಕಾಣಿಕೆದಾರರಿಗೆ ಬೇಕಾದ ಯೋಜನೆಗಳನ್ನು ರೂಪಿಸಲು ಸಹಾಯಕವಾಗುತ್ತದೆ. ಹಾಗಾಗಿ ಸೂಕ್ತ ಮಾಹಿತಿಗಳನ್ನು ಗಣತಿದಾರರಿಗೆ ಸಾರ್ವಜನಿಕರು ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ದೇಶದ ಜಿ.ಡಿ.ಪಿಗೆ 3.6 ರಷ್ಟು ಕೊಡುಗೆಯನ್ನು ಜಾನುವಾರು ಉತ್ಪನ್ನಗಳು ನೀಡುತ್ತಿವೆ. ಕರ್ನಾಟಕ ರಾಜ್ಯವು ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ 8 ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 5ನೇ ಸ್ಥಾನ ಹಾಗೂ ಮಾಂಸ ಉತ್ಪಾದನೆಯಲ್ಲಿ 9ನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕಿ ಡಾ ಸವಿತ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ರಂಗಪ್ಪ ಮತ್ತಿತರರು ಇದ್ದರು.