ಕನ್ನಡಪರ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಳ್ಳಲು ಸರ್ಕಾರಕ್ಕೆ ಮನವಿ ಮಾಡುವಂತೆ ನಗರದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಕನ್ನಡಪರ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಳ್ಳಲು ಸರ್ಕಾರಕ್ಕೆ ಮನವಿ ಮಾಡುವಂತೆ ನಗರದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರಿಗೆ ಮನವಿ ಸಲ್ಲಿಸಿದರು. ನಗರಕ್ಕೆ ಭೇಟಿ ನೀಡಿದ್ದ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿ ಮಾಡಿ ಅವರನ್ನು ಸನ್ಮಾನಿಸಿದ ಸಂಘಟನೆಗಳ ಮುಖಂಡರು, ಕನ್ನಡ ಕಾರ್ಯಕ್ರಮಗಳ ಕಟ್ಟುನಿಟ್ಟಿನ ಜಾರಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್, ಕನ್ನಡ ಸಂಘಟನೆಗಳ ಮುಖಂಡರು ಮಾಡಿದ ಹೋರಾಟದ ಫಲವಾಗಿ ಸರ್ಕಾರ ಎರಡು ವರ್ಷಗಳ ಹಿಂದೆ ಮಳಿಗೆ, ಕಾರ್ಖಾನೆಗಳ ನಾಮಫಲಕಗಳಲ್ಲಿ ಶೇಕಡ ೬೦ರಷ್ಟು ಪ್ರಮಾಣದಲ್ಲಿ ಕನ್ನಡ ಪದಗಳಿರಬೇಕು ಎಂದು ನಿಯಮ ಮಾಡಿ ಆದೇಶ ಮಾಡಿದೆ. ಆದರೆ, ಇದೂವರೆಗೆ ಆ ಪ್ರಮಾಣದ ಕನ್ನಡ ನಾಮಫಲಕಗಳ ಪ್ರದರ್ಶನವಾಗಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳೂ ನಿರ್ಲಕ್ಷ್ಯತೆವಹಿಸಿದ್ದಾರೆ ಎಂದರು.ನಾಮಫಲಕ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ, ಪರವಾನಗಿ ನವೀಕರಣ ಮಾಡಬೇಡಿ ಎಂದು ಪ್ರಾಧಿಕಾರದ ಅಧ್ಯಕ್ಷರು ಈ ವೇಳೆ ಹಾಜರಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ರೀತಿ ಕಾರ್ಖಾನೆಗಳಲ್ಲಿ ಶೇಕಡ 82ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ನಿಯಮವಿದೆ. ಅದೂ ಪಾಲನೆ ಆಗುತ್ತಿಲ್ಲ ಎಂದು ಮುಖಂಡರು ಅಧ್ಯಕ್ಷರ ಗಮನ ಸೆಳೆದರು. ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಿಯಮ ಪಾಲನೆ ಬಗ್ಗೆ ತಮಗೆ ಒಂದು ವಾರದಲ್ಲಿ ವರದಿ ನೀಡುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಪ್ರಕರಣಗಳ ಬಗ್ಗೆ ಡಾ.ಧನಿಯಾಕುಮಾರ್ ಪ್ರಸ್ತಾಪಿಸಿದಾಗ, ಎಲ್ಲಾ ಕೇಸ್‌ಗಳ ಮಾಹಿತಿಯೊಂದಿಗೆ ಎಸ್ಪಿಗೆ ಮನವಿ ಕೊಡಿ, ನಂತರ ತಮಗೆ ತಲುಪಿಸಿ, ಸರ್ಕಾರದ ಜೊತೆ ಚರ್ಚೆ ಮಾಡಿ ಕನ್ನಡ ಹೋರಾಟಗಾರರ ಮೇಲಿನ ಎಲ್ಲಾ ಕೇಸ್‌ಗಳನ್ನು ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಕನ್ನಡ ಹೋರಾಟಗಾರದು ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಗೆ ಅನ್ಯಾಯವಾದಾಗ ಹೋರಾಟ ಮಾಡುತ್ತಾರೆ ಹೊರತು ಸ್ವಾರ್ಥ ಸಾಧನೆಗಲ್ಲ ಎಂಬುದನ್ನು ಪೊಲೀಸರು ಅರಿತುಕೊಳ್ಳಬೇಕು. ವಿನಾಕಾರಣ ಹೋರಾಟಗಾರರಿಗೆ ತೊಂದರೆ ಕೊಡಬಾರದು ಎಂದು ಪೊಲೀಸರಿಗೆ ಹೇಳಿದರು.ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಂಕರ್, ಕರವೇ ಕನ್ನಡ ಸೇನೆ ಅಧ್ಯಕ್ಷ ಅರುಣ್‌ಕುಮಾರ್, ವಿಜಯಸೇನೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ಕನ್ನಡ ಸಂಸ್ಕೃತಿ ಮತ್ತು ರಕ್ಷಣಾ ವೇದಿಕೆ ಅಧ್ಯಕ್ಷ ಹೊಸಕೋಟೆ ನಟರಾಜು, ವಿವಿಧ ಸಂಘಟನೆಗಳ ಮುಖಂಡರಾದ ಉಗಮ ಶ್ರೀನಿವಾಸ್, ಗುರುರಾಘವೇಂದ್ರ, ವಿಠಲ್, ಮಂಜುನಾಥ್‌ಗೌಡ, ರಂಗಸ್ವಾಮಿ, ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ಕೆಂಕೆರೆ ಮಲ್ಲಿಕಾರ್ಜುನ್ ಮೊದಲಾದವರು ಭಾಗವಹಿಸಿದ್ದರು.