ಸಾರಾಂಶ
ರಾಣಿಬೆನ್ನೂರು: ಜಿಲ್ಲೆಯಾದ್ಯಂತ ಖಾಸಗಿ ಮೈಕ್ರೋ ಫೈನಾನ್ಸಗಳು ರೈತ ಕಾರ್ಮಿಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಬಡವರಿಗೆ ಕಿರುಕುಳ ನೀಡುತ್ತಿದ್ದು, ಅವುಗಳಲ್ಲಿ ಒಂದು ಲಕ್ಷ ರು.ಗಳಿಗಿಂತ ಕಡಿಮೆ ಇರುವ ಫಲಾನುಭವಿಗಳ ಸಾಲ ಮನ್ನಾ ಮಾಡುವ ಕುರಿತು ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಅನುಮತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಮೈಕ್ರೋ ಫೈನಾನ್ಸಗಳು ರೈತ ಕಾರ್ಮಿಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಬಡವರಿಗೆ ಸಾಲ ನೀಡಿ ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಸಾಲದ ಕಂತು ಪಾವತಿಗಾಗಿ ಬೆಳಗ್ಗೆ 7ರಿಂದ 11ರ ವರೆಗೆ ಮನೆ ಮುಂದೆ ನಿಂತು ಹಣ ಮತ್ತು ಅದರ ಬಡ್ಡಿಯನ್ನು ಕಟ್ಟುವಂತೆ ಬಲವಂತ ಮಾಡುತ್ತಾರೆ. ಕಂತು ಪಾವತಿಸದಿದ್ದರೆ ಮನೆ ಹರಾಜು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಈಗಾಗಲೇ ರಾಜ್ಯ ಸರ್ಕಾರ ಲೇವಾದೇವಿ ಕಾಯ್ದೆ ಪ್ರಕಾರ ಬಡ್ಡಿ ದಂಧೆ ಮಾಡುತ್ತಿರುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆದೇಶವಿದ್ದರೂ ಕೂಡ ಖಾಸಗಿ ಮೈಕ್ರೋ ಫೈನಾನ್ಸಗಳು ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಕಂತು ಪಾವತಿಸಲು ಕಾಲಾವಕಾಶ ನೀಡುವಂತೆ ಕೋರಿದರೂ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಆದ್ದರಿಂದ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ನಡೆಸಿ ಒಂದು ಲಕ್ಷ ರು.ಗಳಿಗಿಂತ ಕಡಿಮೆ ಇರುವ ಫಲಾನುಭವಿಗಳ ಸಾಲ ಮನ್ನಾ ಮಾಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಮಂಜುನಾಥ ಸಂಭೋಜಿ, ರಾಜೇಶ ಅಂಗಡಿ, ಮಂಜುನಾಥ ಗುಡ್ಡಣ್ಣನವರ, ಬಸವರಾಜ ಮ್ಯಾಗಳಗೇರಿ, ಶೈಲಾ ಹರನಗಿರಿ, ನೀಲಮ್ಮ ಮ್ಯಾಗಳಗೇರಿ, ನಂದಿತಾ ದುರ್ಗಪ್ಪಳವರ, ಹಮೀದಾಬಾನು ಶಿಡೇನೂರ, ಮುನ್ನಿ ಹರಿಹರ, ನೂರಜಾ ತಿಳವಳ್ಳಿ, ಲಲಿತಾ ಲಮಾಣಿ, ಬಾನು ಹಲಗೇರಿ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))