ಸಾರಾಂಶ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಮನಗರ ಜಿಲ್ಲೆ ಮಾಗಡಿ ತಾಲೂಕು ವ್ಯಾಪ್ತಿಗೆ ಸೇರುವ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸುವ ನಿರ್ಣಯ ಕೈಬಿಡುವಂತೆ ಸ್ಥಳೀಯ ಸಂಸದ ಡಾ। ಸಿ.ಎನ್.ಮಂಜುನಾಥ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.-ಮಾಗಡಿ ತಾಲೂಕು ವ್ಯಾಪ್ತಿಗೆ ಸೇರುವ ಸೋಲೂರು ಹೋಬಳಿಯನ್ನು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಳಿಸುವ ಸಂಬಂಧ ನೆಲಮಂಗಲ ಕ್ಷೇತ್ರದ ಮಾಜಿ ಶಾಸಕರು ಮುಖ್ಯಮಂತ್ರಿಗೆ ಮನವಿ ನೀಡಿದ್ದು, ಈ ಸಂಬಂಧ ಮುಂಬರುವ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಮಂಡಿಸುವ ಬಗ್ಗೆ ಮುಖ್ಯಮಂತ್ರಿ ಸಂಬಂಧಪಟ್ಟವರಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
-ಮಾಗಡಿ ತಾಲೂಕು ರಚನೆಯಾದಾಗಿನಿಂದಲೂ ಸೋಲೂರು ಹೋಬಳಿ ಮಾಗಡಿ ತಾಲೂಕಿಗೆ ಸೇರ್ಪಡೆಯಾಗಿರುವುದಾಗಿ ಕಂದಾಯ ದಾಖಲೆಗಳಲ್ಲಿ ಲಭ್ಯವಿದೆ. ಇದು ತಾಲೂಕಿನ ಅವಿಭಾಜ್ಯ ಅಂಗವಾಗಿದ್ದು, ನ್ಯಾಯಾಲಯದ ನ್ಯಾಯಾಧೀಕರಣ ವ್ಯಾಪ್ತಿ ಸಹ ಮಾಗಡಿ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಕಂದಾಯ ನ್ಯಾಯಾಲಯವು ಪ್ರಸ್ತುತ ಮಾಗಡಿ ತಹಸೀಲ್ದಾರ್ ಕಚೇರಿ ವ್ಯಾಪ್ತಿಯಲ್ಲಿದೆ. ಒಂದು ವೇಳೆ ಸೋಲೂರು ಹೋಬಳಿ ನೆಲಮಂಗಲ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ತಹಸೀಲ್ದಾರ್ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗಳು ಸಹ ಬದಲಾಗುತ್ತವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ಸೋಲೂರು ಹೋಬಳಿ ಸಾರ್ವಜನಿಕ ಚುನಾವಣೆಗೋಸ್ಕರ ನೆಲಮಂಗಲ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ ಎಂಬ ಒಂದೇ ಕಾರಣಕ್ಕೆ ಸಾರ್ವಜನಿಕರಿಗೆ ಆಗುವ ತೊಂದರೆ ಗಮನಿಸದೆ ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಈ ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸುವುದು ಸಮಂಜಸವಲ್ಲ. ಹೀಗಾಗಿ ಕೂಡಲೇ ಆ ನಿರ್ಣಯ ಕೈಬಿಡಬೇಕು ಎಂದು ಮಂಜುನಾಥ್ ಕೋರಿದ್ದಾರೆ.